CONNECT WITH US  

ಜಿಎಸ್‌ಟಿ: ರೈತರಿಗೆ ಮತ್ತಷ್ಟು ಕಹಿಯಾದ ಬೇವಿನ ಬೀಜ

ಆದಾಯ ತರುವ ಉತ್ಪನ್ನ ಮಾರುಕಟ್ಟೆಗೆ ತರಲು ಹಿಂದೇಟು

ಕುಷ್ಟಗಿ ಎಪಿಎಂಸಿಯಲ್ಲಿ ಬೇವಿನ ಬೀಜ ಖರೀದಿಸುತ್ತಿರುವುದು.

ಕುಷ್ಟಗಿ: ಬೆಲೆ ಕುಸಿತ ಹಾಗೂ ಶೇ.5 ರಷ್ಟು ಜಿಎಸ್‌ಟಿಯಿಂದಾಗಿ ರೈತರಿಗೆ ಬೇವಿನ ಬೀಜ ಮತ್ತಷ್ಟು
ಕಹಿಯಾಗಿದೆ.

ಮುಂಗಾರು ಮಳೆ ವಿಳಂಬ ಸಂದರ್ಭದಲ್ಲಿ ಪರ್ಯಾಯವಾಗಿ ಉದ್ಯೋಗವಾಗಿರುವ ಬೇವಿನ ಬೀಜದ ಉತ್ಪನ್ನ ಹಾಗೂ ಬೆಲೆಯೂ ಕಡಿಮೆಯಾಗಿದ್ದರಿಂದ ಬೀಜವನ್ನು ಮಾರುಕಟ್ಟೆಗೆ ತರಲು ರೈತರು ಹಿಂದೇಟು ಹಾಕಿದ್ದಾರೆ.

ಬೇವಿನ ಬೀಜ ಮಾರಾಟಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಕುಷ್ಟಗಿಯೇ ದೊಡ್ಡ ಮಾರುಕಟ್ಟೆಯಾಗಿದೆ. ಬೇವಿನ ಬೀಜ ಮಾರಾಟ ಮಾಡಲು ಲಿಂಗಸುಗೂರು, ಸಿಂಧನೂರು, ಯಲಬುರ್ಗಾ,ಬಾಗಲಕೋಟೆ ಜಿಲ್ಲೆಯ ಹುನಗುಂದ, ಗದಗ
ಜಿಲ್ಲೆಯ ರೋಣ, ಗಜೇಂದ್ರಗಡ ಸೇರಿ ವಿವಿಧೆಡೆಗಳಿಂದ ರೈತರು ಆಗಮಿಸುತ್ತಾರೆ. ಆದರೆ ಈ ಸಲ ಉತ್ಪನ್ನವೂ ಕಡಿಮೆ, ದರವೂ ಕಡಿಮೆ ಇರುವುದರಿಂದ ಮಾರುವವರ ಸಂಖ್ಯೆಯೂ ಕಡಿಮೆಯಾಗಿದೆ.

ಕೆಲವರು ವಾರದ ಸಂತೆ, ದಿನಸಿ ಖರ್ಚು ಸೇರಿ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಲು ಅನಿವಾರ್ಯವಾಗಿ ಬೇವಿನ ಬೀಜವನ್ನು ಮಾರಾಟ ಮಾಡಿದ್ದಾರೆ.

ಕಳೆದ ವರ್ಷ ಪ್ರತಿ ಚೀಲ (6ಡಬ್ಬಿ) 750 ರೂ.ದಿಂದ 820ರೂ. ಬೆಲೆಯಿತ್ತು. ಆದರೆ ಪ್ರಸಕ್ತಮಾರುಕಟ್ಟೆ ದರ 480ರಿಂದ 520 ರೂ. ಆಗಿದೆ.ಸಾಮಾನ್ಯವಾಗಿ ಉತ್ಪನ್ನ ಹೆಚ್ಚಿದ್ದಾಗ ದರ ಕಡಿಮೆ, ಉತ್ಪನ್ನ ಕಡಿಮೆ ಇದ್ದಾಗ ದರ ಹೆಚ್ಚಿ
ರುತ್ತದೆ. ಸದ್ಯ ಬೇವಿನ ಬೀಜದ ಉತ್ಪನ್ನ ಕಡಿಮೆ ಇದ್ದು, ಉತ್ತಮ ದರ ಸಿಗುತ್ತದೆ ಎನ್ನುವ ರೈತರ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

ಬೇವಿನ ಬೀಜ ಖರೀದಿಗೆ ಮೈಸೂರು, ತಮಿಳುನಾಡಿನ ಖರೀದಿದಾರರು ಇಲ್ಲಿನ ಮಾರುಕಟ್ಟೆಗೆ ಬರುತ್ತಾರೆ. ಪ್ರಸಕ್ತ ವರ್ಷದಿಂದ ಬೇವಿನ ಬೀಜದ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.

ಬೇವಿನ ಬೀಜ ಎಣ್ಣೆಕಾಳು ಪಟ್ಟಿಗೆ ಸೇರಿಸಲಾಗಿದೆ. ಖರೀದಿದಾರರು ಜಿಎಸ್‌ಟಿ, ಮಾರುಕಟ್ಟೆ ಶುಲ್ಕದ ಜತೆಗೆ ಶೇ.1.5 ಪಾವತಿಸಬೇಕಿದ್ದು, ಇದು ಕೂಡ ಪ್ರಸಕ್ತ ವರ್ಷ ಬೇವಿನ ಬೀಜದ ಮೇಲೆ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದೆ.

ಪ್ರಸಕ್ತ ವರ್ಷ ನೆರೆಯ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಬೇವಿನ ಬೀಜ ಉತ್ಪನ್ನ ಲಭ್ಯವಿದ್ದು, ರಾಜ್ಯದ ಬೇವಿನ ಬೀಜ ಖರೀದಿಗೆ ವ್ಯಾಪಾರಸ್ಥರು ಮುಂದಾಗಿಲ್ಲ. ಸರಿಯಾಗಿ ಮಳೆಯಾಗದೇ ಇರುವುದರಿಂದ
ಉತ್ಪನ್ನವೂ ಕಡಿಮೆಯಾಗಿದೆ. ಬೆಲೆ ಕುಸಿತದಿಂದ ರೈತರು ಬೇವಿನ ಬೀಜದ ಉತ್ಪನ್ನ ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ.

- ಗೂಳೇಶ ಶಿವಶೆಟ್ಟರ್‌, ವರ್ತಕರು

Trending videos

Back to Top