CONNECT WITH US  

ಸರ್ಕಾರಕ್ಕೆ ಆರ್ಥಿಕ ಶೂಲವಾಗುತ್ತಾ ಸಾಲಮನ್ನಾ?

ಸಂಪನ್ಮೂಲ ಕ್ರೋಢೀಕರಣ ಅರಗಿಸಿಕೊಳ್ಳಲಾಗದ ಹೊರೆ

ಬೆಂಗಳೂರು: ರೈತರ ಸಾಲಮನ್ನಾ ಘೋಷಿಸಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಈಗಾಗಲೇ ರಾಜ್ಯದ ಪ್ರಜೆಗಳ ಮೇಲೆ ತಲಾ 38 ಸಾವಿರದಷ್ಟು ಸಾಲವಿದ್ದು, ಮತ್ತೆ ಸಾಲದ ಹೊರೆ ಹೆಚ್ಚಿಸದೆ ಸಂಪನ್ಮೂಲ ಕ್ರೋಢೀಕರಿಸುವ ಸವಾಲು ಸಮ್ಮಿಶ್ರ ಸರ್ಕಾರದ ಮುಂದಿದೆ.

ಮೇಲ್ನೋಟಕ್ಕೆ ಸಾಲದ ಹೊರೆ ಹೆಚ್ಚಿಸದೆ ಕೃಷಿ ಸಾಲಮನ್ನಾ ಕಷ್ಟಸಾಧ್ಯ. ಅಷ್ಟಕ್ಕೂ ಸಾಲದ ಮೊತ್ತವನ್ನು ಭಾರೀ ಹೆಚ್ಚಿಸಿಕೊಳ್ಳಲೂ ಆಗದ ಪರಿಸ್ಥಿತಿಯಲ್ಲಿದೆ. ಕಾರಣ ಈಗಾಗಲೇ ಮಾಡಿಕೊಂಡಿರುವ ಸಾಲವೇ ರಾಜ್ಯ ಸರ್ಕಾರದ ಇತಿಹಾಸದಲ್ಲೇ ಅತಿ ಹೆಚ್ಚು.

ಈ ಹಿಂದಿನ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನಕ್ಕೆ ಎಲ್ಲಿಯೂ ಕತ್ತರಿ ಹಾಕದೇ ಸಂಪನ್ಮೂಲ ಕ್ರೋಢೀಕರಣ ನಡೆಸಬೇಕಾದ ಅನಿವಾರ್ಯತೆ ಇದೆ. ಜತೆಗೆ ಮಿತ್ರ ಪಕ್ಷಗಳಿಗೆ ರಾಜಕೀಯವಾಗಿಯೂ ಯಾವುದೇ ನಷ್ಟವೂ ಆಗಬಾರದು. 

ಲಾಭದಲ್ಲಿಯೂ ಸಮಪಾಲು ಇರಬೇಕೆನ್ನುವುದು ಉಭಯ ಪಕ್ಷಗಳ ನಾಯಕರ ಅಭಿಲಾಷೆ. ಇವೆಲ್ಲವೂ ಈಡೇರಬೇಕೆಂದರೆ ಸಮ್ಮಿಶ್ರ ಸರ್ಕಾರಕ್ಕೆ "ಕಬ್ಬಿಣದ ಕಡಲೆ'ಯನ್ನು ಅಗಿದಷ್ಟೇ ಪ್ರಯಾಸ ತಪ್ಪಿದ್ದಲ್ಲ. ಇದೇ ಕಾರಣಕ್ಕಾಗಿ ಸಿಎಂ ಈಗಾಗಲೇ ದುಂದುವೆಚ್ಚ, ಅನಗತ್ಯ ನಿರ್ಮಾಣ, ನವೀಕರಣ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಇಲಾಖಾವಾರು ಹಂಚಿಕೆ ಮಾಡಿರುವ ಅನುದಾನದಲ್ಲೂ ಶೇ. 5ರಿಂದ 10ರಷ್ಟು ಕಡಿತ ಮಾಡುವ ಸಾಧ್ಯತೆಗಳಿವೆ.

ಇತಿಹಾಸದಲ್ಲೇ ಸಾಲ ಗರಿಷ್ಠ
ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಸಾಲ ಮಾಡಿದ ಕೀರ್ತಿ 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ್ದು. 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಒಟ್ಟು 1.29 ಲಕ್ಷ ಕೋಟಿ ರೂ. ಸಾಲ ಮಾಡಿದೆ. 2018-19ನೇ ಸಾಲಿನಲ್ಲಿ ಪ್ರಸ್ತಾಪಿಸಿರುವ ಸಾಲವೂ ಸೇರಿ 1.69 ಲಕ್ಷ ಕೋಟಿ ರೂ. ಆಗುತ್ತದೆ. 2016-17ಲೇ ಸಾಲಿನಲ್ಲಿ 31,036  ಕೋಟಿ ರೂ., 2017-18ನೇ ಸಾಲಿನಲ್ಲಿ 37,092 ಕೋಟಿ ರೂ. ಸಾಲ ಮಾಡಲಾಗಿದ್ದು, 2018-19ನೇ ಸಾಲಿನಲ್ಲಿ 39,328 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಪರಿಷ್ಕೃತ ಬಜೆಟ್‌ ಗಾತ್ರ
ಹಿಂದಿನ ಸರ್ಕಾರ 2,09,181 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದು, ಪ್ರಸಕ್ತ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುವ ಪರಿಷ್ಕೃತ ಬಜೆಟ್‌ ಗಾತ್ರ 2.12 ಲಕ್ಷ ಕೋಟಿ ರೂ.ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

2,09,181 ಕೋಟಿ ರೂ.: ಮಾಜಿ ಸಿಎಂ ಸಿದ್ದರಾಮಯ್ಯ ಅವರು 2018-19ನೇ ಸಾಲಿಗೆ ಮಂಡಿಸಿರುವ ಬಜೆಟ್‌ ಮೊತ್ತ.
1,03,444 ಕೋಟಿ ರೂ.: ತೆರಿಗೆಯಿಂದ ರಾಜಸ್ವ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿತ್ತು, ನಿರೀಕ್ಷೆಯ ಷ್ಟು ಸಂಗ್ರಹ ಆಗಿಲ್ಲ.
5,000 ಕೋಟಿ ರೂ.: 2017-18ನೇ ಸಾಲಿನ ರೈತರ ಸಾಲ ಮನ್ನಾ ಯೋಜನೆಗೆ ಆರ್ಥಿಕ ವರ್ಷಾರಂಭದ‌ಲ್ಲಿ ನೀಡಲಾದ ಮೊತ್ತ.


Trending videos

Back to Top