CONNECT WITH US  

ಜೆಡಿಎಸ್‌ ಬೆಂಬಲಿತ ಜಿಲ್ಲೆಗಳಿಗೆ ಮಾತ್ರ ಬೆಲೆ

ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿಗಿಲ್ಲ ಬಳುವಳಿ ,ಮೂರು ಜಿಲ್ಲೆಗಳಿಗೆ ಆದ್ಯತೆ

ಸಮ್ಮಿಶ್ರ ಸರ್ಕಾರದ ಭರವಸೆಯ ಬಜೆಟ್‌ ಗ್ರಾತ್ರದಲ್ಲಿ ಹೆಚ್ಚಾಗಿದ್ದು, ಪ್ರಾದೇಶಿಕ ಪ್ರಾತಿನಿಧ್ಯ ಗಮನಿಸಿದಾಗ ಹಳೆ ಮೈಸೂರು ಭಾಗಕ್ಕೆ ಸಿಂಹಪಾಲು ದೊರೆತಿದೆ.

ಹಾಸನ, ಮಂಡ್ಯ ರಾಮನಗರ ಜಿಲ್ಲೆಗಳಿಗೆ ಬಂಪರ್‌ ಕೊಡುಗೆ ನೀಡಲಾಗಿದೆ. ಜೆಡಿಎಸ್‌ಗೆ ಮತ ನೀಡಿದ್ದ ಮತದಾರರ ಹಿತ ಕಾಯುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಯತ್ನ ಮಾಡಿರುವುದು ಬಜೆಟ್‌ ನಲ್ಲಿ ಎದ್ದು ಕಾಣುವಂತಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿರುವ ಬಜೆಟ್‌ ಮುಂದುವರಿಸಿ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದರೂ ಸಮ್ಮಿಶ್ರ ಸರ್ಕಾರದ ಬಹುತೇಕ ಹೊಸ ಯೋಜನೆಗಳು ಮೂರು ಜಿಲ್ಲೆಗಳಿಗೆ ಸೀಮಿತವಾಗಿರುವುದು ಆಡಳಿತದಲ್ಲಿ ಭಾಗಿಯಾಗಿರುವ ಕಾಂಗ್ರೆಸ್‌ಗೂ ಕೂಡ ಇದರಲ್ಲಿ ಆದ್ಯತೆ ನೀಡದಿರುವುದು ಕಂಡು ಬರುತ್ತಿದೆ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನ ನೀಡಿರುವ ಮಂಡ್ಯ, ಹಾಸನ ಹಾಗೂ ರಾಮನಗರ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಮೊದಲ ಬಜೆಟ್‌ನಲ್ಲಿಯೇ ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಟೊಂಕ ಕಟ್ಟಿ ನಿಂತ ಮತದಾರರ ಋಣ ತೀರಿಸುವ ಪ್ರಯತ್ನ ನಡೆಸಿರುವಂತೆ ಕಾಣುತ್ತಿದೆ. ಲೋಕಸಭೆ ಚುನಾವಣೆ ಕಣ್ಣ ಮುಂದೆ ಇರುವುದರಿಂದ ಅದರ ಲಾಭವನ್ನೂ ಬಜೆಟ್‌ ಘೋಷಣೆಗಳ ಮೂಲಕ ಪಡೆಯಲು ಕುಮಾರಸ್ವಾಮಿ ಹವಣಿಸಿದಂತೆ ಕಾಣುತ್ತಿದೆ.

ಹಳೇ ಮೈಸೂರು ಭಾಗದಲ್ಲಿಯೂ ಕೂಡ ಎಲ್ಲ ಜಿಲ್ಲೆಗಳಿಗೆ ಸಂಪೂರ್ಣ ಆದ್ಯತೆ ನೀಡದಿರುವುದು ಬಜೆಟ್‌ ಮಂಡನೆಯ ಹಿಂದೆ ಸ್ಪಷ್ಟ ರಾಜಕೀಯ ಲೆಕ್ಕಾಚಾರ ಇರುವುದು ಕಂಡು ಬರುತ್ತದೆ. ಜೆಡಿಎಸ್‌ ಪ್ರಾಬಲ್ಯವಿರುವ ಮೂರು ಜಿಲ್ಲೆಗಳನ್ನು ಹೊರತು ಪಡಿಸಿದರೆ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಆದ್ಯತೆ
ನೀಡದಿರುವುದು ರಾಜಕೀಯದ ಲಾಭ ನಷ್ಟದ ಲೆಕ್ಕಾಚಾರ ಹಾಕಿಯೇ ಬಜೆಟ್‌ ಮಂಡನೆಗೆ ಇಳಿದಂತೆ ಕಾಣುತ್ತಿದೆ. 

ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧಿಸಿದ್ದ ರಾಮನಗರ ಜಿಲ್ಲೆಗೆ 300 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕನಕಪುರದಲ್ಲಿ ವೈದ್ಯಕೀಯ ಕಾಲೇಜು, ರಾಮನಗರದಲ್ಲಿ ಆರ್ಟ್‌ ಆಂಡ್‌ ಕ್ರಾಫ್ಟ್ ವಿಲೇಜ್‌ ಸ್ಥಾಪನೆ, ಚಿತ್ರನಗರಿ ನಿರ್ಮಾಣ, ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ ಮಾಡಿರುವುದು ಮುಂಬರುವ
ಉಪ ಚುನಾವಣೆಗೆ ವೇದಿಕೆ ಸಿದ್ಧ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಸನ, ಮಂಡ್ಯ ರಾಮನಗರ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಬ್ರದರ್ ಬಜೆಟ್‌ ಎಂಬ ಪ್ರತಿಪಕ್ಷಗಳ ಆರೋಪಕ್ಕೂ ಪುಷ್ಠಿ ನೀಡುವಂತೆ ಮಾಡಿದೆ. ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ನಲ್ಲಿಯೇ ಜೆಡಿಎಸ್‌ ತನ್ನ ರಾಜಕೀಯ ಲೆಕ್ಕಾಚಾರವನ್ನೂ ಸ್ಪಷ್ಟಪಡಿಸಿದಂತೆ ಕಾಣುತ್ತಿದ್ದು, ಕಾಂಗ್ರೆಸ್‌ನ ಲೆಕ್ಕಾಚಾರ ಗೊಂದಲಕ್ಕೆ ಬೀಳುವಂತೆ ಮಾಡಿದೆ ಎನಿಸುತ್ತದೆ.

Trending videos

Back to Top