CONNECT WITH US  

ಕಿಟ್‌ನಲ್ಲಿ ಐಫೋನ್‌ ಗಿಫ್ಟ್ ತಂದ ವಿವಾದ

ಇಂದಿನ ಸಂಸದರ ಸಭೆಗೂ ಮುನ್ನ ಟ್ರಿಣ್‌ಟ್ರಿಣ್‌

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ನವದೆಹಲಿಯಲ್ಲಿ ಬುಧವಾರ ಕರೆದಿರುವ ಸಭೆಗೆ ಆಗಮಿಸುವ ರಾಜ್ಯದ ಸಂಸದರಿಗೆ ಒಂದು ಲಕ್ಷ ರೂ. ಬೆಲೆ ಬಾಳುವ "ಐ ಫೋನ್‌' ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ರೈತರ ಸಾಲ ಮನ್ನಾ ಸೇರಿ ರಾಜ್ಯ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಸಂಸದರಿಗೆ ಐ ಫೋನ್‌ "ಗಿಫ್ಟ್' ನೀಡುವ ಔಚಿತ್ಯವಾದರೂ ಏನು ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ. ಐ ಫೋನ್‌ ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ, ಐ ಫೋನ್‌ ಬಗ್ಗೆ ಮಾಹಿತಿ ಇಲ್ಲ. ನಮ್ಮ ಕಚೇರಿಯಿಂದ ಕೊಡಲು ನಾನಂತೂ ಸೂಚನೆ ಕೊಟ್ಟಿಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಅಧಿಕೃತವಾಗಿ ಕೊಡಲಾಗಿ 
ದೆಯೋ ಅಥವಾ ಅನಧಿಕೃತವಾಗಿ ಕೊಟ್ಟಿರುವುದೋ ಗೊತ್ತಿಲ್ಲ ಎಂದಿದ್ದಾರೆ.

ಈ ಮಧ್ಯೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, "ಐ ಫೋನ್‌ ನಾನೇ ಕೊಟ್ಟಿದ್ದೇನೆ. ವೈಯಕ್ತಿಕವಾಗಿ ಹೃದಯ ಶ್ರೀಮಂತಿಕೆಯಿಂದ ಸಂಸದರಿಗೆ, ರಾಜ್ಯ ಸಭೆ ಸದಸ್ಯರಿಗೆ ಕೊಟ್ಟಿದ್ದೇನೆ. ಇದು ತಪ್ಪೇ? ಕಳೆದ ವರ್ಷವೂ ಕೊಟ್ಟಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಸಂಸದರಿಗೆ ತ್ವರಿತವಾಗಿ ಮಾಹಿತಿ ತಲುಪಲಿ ಎಂದು ತಲಾ 50 ಸಾವಿರ ರೂ. ವೆಚ್ಚದಲ್ಲಿ ಐ ಫೋನ್‌ ಮತ್ತು ಬ್ಯಾಗ್‌ ಉಡುಗೊರೆಯಾಗಿ ನೀಡಿದ್ದೇನೆ. ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ. ಕೆಲವರು ಐ ಫೋನ್‌ ಹಿಂತಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಗಿಫ್ಟ್ ಬೇಡವೆಂದ ಬಿಜೆಪಿ ಸಭೆಗೆ ಒಂದು ದಿನ ಮುನ್ನವೇ ಸಂಸದರು ಹಾಗೂ ರಾಜ್ಯಸಭೆ ಸದಸ್ಯರಿಗೆ ಚರ್ಚಿಸುವ ವಿಷಯಗಳ ಪಟ್ಟಿ ಹಾಗೂ ರಾಜ್ಯದ ಅಭಿವೃದ್ಧಿ ಯೋಜನೆಗಳ
ಮಾಹಿತಿಯುಳ್ಳ ಕಿಟ್‌ ನೀಡಲಾಗಿದೆ. ಅದರಲ್ಲಿ ಆ್ಯಪಲ್‌ ಐಫೋನ್‌ ಸಹ ಹಾಕಿ ಕೊಡಲಾಗಿದೆ. ಕೇಂದ್ರ ಸಚಿವ ಅನಂತಕುಮಾರ್‌ ಐ ಫೋನ್‌
ಪಡೆ ಯುವುದಿಲ್ಲ ಎಂದು ಹೇಳಿದ್ದಾರೆ. ಹಲವು ಬಿಜೆಪಿ ಸಂಸದರು ಇದೇ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರಂತೂ ನೇರವಾಗಿಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಪತ್ರ ಬರೆದು ಐಫೋನ್‌ ಔಚಿತ್ಯವೇನು
ಎಂದು ಪ್ರಶ್ನಿಸಿದ್ದಾರೆ. 

Trending videos

Back to Top