CONNECT WITH US  

ವಯೋಮಿತಿ ಹೆಚ್ಚಳ ಬೇಡಿಕೆಗೆ ಸಿಕ್ಕಿಲ್ಲ ಕಿಮ್ಮತ್ತು

ಕೆಪಿಎಸ್‌ಸಿ: ಗರಿಷ್ಠ ವಯೋಮಿತಿ 44ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಉದ್ಯೋಗಾಕಾಂಕ್ಷಿಗಳ ಬೇಡಿಕೆ

ಬೆಂಗಳೂರು: ಒಂದೆಡೆ ಕೆಎಎಸ್‌ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿಲ್ಲ, ಇನ್ನೊಂದೆಡೆ ಹುದ್ದೆ ಆಕಾಂಕ್ಷಿಗಳ ವಯಸ್ಸು ಮೀರುತ್ತಿದೆ. ಇದು ವಯೋಮಿತಿ ಅಂಚಿನಲ್ಲಿರುವ ಉದ್ಯೋಗಕಾಂಕ್ಷಿಗಳಲ್ಲಿ ಆತಂಕ ಉಂಟುಮಾಡಿದ್ದರೆ, ಸರ್ಕಾರ ಮಾತ್ರ "ಜಾಣ ಕಿವುಡು' ಪ್ರದರ್ಶಿಸುತ್ತಿದೆ.

ಗೆಜೆಟೆಡ್‌ ಪ್ರೊಬೇಷನರಿ (ಕೆಎಎಸ್‌) ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2012ರಿಂದ ನೇಮಕಾತಿ ನಡೆದಿಲ್ಲ. ಹೀಗಾಗಿ, ಹೊಸ ನೇಮಕಾತಿ ವೇಳೆ ಕೆಎಎಸ್‌ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿ ಹೆಚ್ಚಳ ಮಾಡುವಂತೆ ಅವಕಾಶ ವಂಚಿತ ಅಭ್ಯರ್ಥಿಗಳು ಕಳೆದ ಎರಡು ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದರೂ ಸರ್ಕಾರ ಮಾತ್ರ ಅದಕ್ಕೆ ಕಿವಿಗೊಡುತ್ತಿಲ್ಲ.

ಕಾಲ ಕಾಲಕ್ಕೆ ಸರಿಯಾಗಿ ನೇಮಕಾತಿ ನಡೆಯದಿರುವುದರಿಂದ ಪರೀಕ್ಷೆ ಬರೆಯುವ, ಸಂದರ್ಶನ ಎದುರಿಸುವ ಎಲ್ಲ ಅರ್ಹತೆ, ಪ್ರತಿಭೆ ಇದ್ದರೂ ವಯೋಮಿತಿ ಮೀರುತ್ತಿರುವುದರಿಂದ ನಮ್ಮದಲ್ಲದ ತಪ್ಪಿಗೆ ಸಾಕಷ್ಟು ಮಂದಿ ಅವಕಾಶ ಕಳೆದುಕೊಳ್ಳಬೇಕಾಗಿದೆ. ಆದ್ದರಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರಿ ಹುದ್ದೆಗಳ ಗರಿಷ್ಠ ವಯೋಮಿತಿ ಹೆಚ್ಚಿಸುವಂತೆ ಅವಕಾಶ ವಂಚಿತ ಅಭ್ಯರ್ಥಿಗಳು 2016ರಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಇಲಾಖೆ, ಹಣಕಾಸು ಇಲಾಖೆ ಈ ರೀತಿ ಸಂಬಂಧಪಟ್ಟ ಎಲ್ಲರಿಗೂ ಮನವಿ ಕೊಟ್ಟಿದ್ದಾರೆ. ಆದರೆ, ವಯೋಮಿತಿ ಹೆಚ್ಚಳವಿರಲಿ, ಭರವಸೆಯೂ ಸಿಕ್ಕಿಲ್ಲ.

ರಾಜ್ಯದಲ್ಲಿ ಕೆಎಎಸ್‌ ಹುದ್ದೆಗಳು ಸೇರಿದಂತೆ ಎ, ಬಿ, ಸಿ ಮತ್ತು ಡಿ ದರ್ಜೆಯ ಎಲ್ಲ ಸರ್ಕಾರಿ ಹುದ್ದೆಗಳಿಗೆ ಸಾಮಾನ್ಯ ವರ್ಗಕ್ಕೆ 35 ವರ್ಷ, ಹಿಂದುಳಿದ ವರ್ಗಗಳಿಗೆ 38 ವರ್ಷ ಹಾಗೂ ಎಸ್ಸಿ, ಎಸ್ಟಿ ವರ್ಗಕ್ಕೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ 371 (ಜೆ) ಅನುಷ್ಠಾನ ಮತ್ತು ಕೆಪಿಎಸ್‌ಸಿಯಲ್ಲಿ ನಡೆದ ನೇಮಕಾತಿ ಅಕ್ರಮಗಳ ಕಾರಣಕ್ಕೆ 2012, 2013, 2014ನೇ ಸಾಲಿನ ಕೆಎಎಸ್‌ ಹುದ್ದೆಗಳ ನೇಮಕಾತಿ ನಡೆದಿಲ್ಲ. 2015ರ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದರೂ ಇದುವರೆಗೆ ಫ‌ಲಿತಾಂಶ ಪ್ರಕಟಿಸಿಲ್ಲ. ಅಲ್ಲದೆ, 2016 ಮತ್ತು 2017ನೇ ಸಾಲಿನ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿಲ್ಲ. ಇದರಿಂದಾಗಿ ವಯೋಮಿತಿ ಮೀರಿ ಸಾವಿರಾರು ಮಂದಿ ಅವಕಾಶ ವಂಚಿತರಾಗುತ್ತಾರೆ. ಆದ್ದರಿಂದ ಸರ್ಕಾರಿ ಹುದ್ದೆಗಳ ಎಲ್ಲ ವರ್ಗಗಳ ಗರಿಷ್ಠ ವಯಮೋತಿಯನ್ನು 42ರಿಂದ 44 ವರ್ಷಕ್ಕೆ ಹೆಚ್ಚಿಸಬೇಕು ಎಂಬುದು ವಯೋಮಿತಿ ಅಂಚಿನಲ್ಲಿರುವ ಉದ್ಯೋಗಕಾಂಕ್ಷಿಗಳ ಬೇಡಿಕೆಯಾಗಿದೆ.

ನೇಮಕಾತಿ ವಿಳಂಬವಾಗಿದ್ದರಿಂದ ಹರಿಯಾಣ ರಾಜ್ಯ ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 40ರಿಂದ 42 ವರ್ಷಕ್ಕೆ ಹೆಚ್ಚಿಸಿದೆ. ಆದೇ ರೀತಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಹ ಗರಿಷ್ಠ ವಯೋಮತಿಯನ್ನು 42 ವರ್ಷಕ್ಕೆ ಹೆಚ್ಚಿಸಿದೆ. ಜತೆಗೆ ಮಧ್ಯಪ್ರದೇಶ, ಗುಜರಾತ್‌, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ ಮತ್ತಿತರರ ರಾಜ್ಯಗಳಲ್ಲಿ ಈಗಾಗಲೇ ಗರಿಷ್ಠ ವಯೋಮಿತಿ 42ರಿಂದ 44 ವರ್ಷ ಚಾಲ್ತಿಯಲ್ಲಿದೆ. ಕರ್ನಾಟಕದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 40ರಿಂದ 45 ವರ್ಷ ನಿಗದಿಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕೆಎಎಸ್‌ ಹುದ್ದೆಗಳಿಗೂ ಗರಿಷ್ಠ ವಯೋಮತಿ ಹೆಚ್ಚಳ ಮಾಡಬೇಕು ಎಂಬುದು ಅವಕಾಶವಂಚಿತ ಅಭ್ಯರ್ಥಿಗಳ ಒತ್ತಾಯವಾಗಿದೆ.

ಎಲ್ಲ ಹುದ್ದೆಗಳಿಗೂ ಹೆಚ್ಚಿಸಲಿ
ಕೆಎಎಸ್‌ ಹುದ್ದೆಗಳಿಗಷ್ಟೇ ಅಲ್ಲ, ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿ ಹೆಚ್ಚಳವಾಗಬೇಕು. ಏಕೆಂದರೆ, ಕೆಲವೊಂದು ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ನೇಮಕಾತಿಗಳೇ ನಡೆದಿಲ್ಲ. ಹಾಗಾಗಿ ಲಕ್ಷಾಂತರ ಮಂದಿ ಅವಕಾಶವಂಚಿತರಾಗುವ ಆತಂಕದಲ್ಲಿದ್ದಾರೆ. ಗರಿಷ್ಠ ವಯೋಮಿತಿ ಹೆಚ್ಚಿಸಿದರೆ ಲಕ್ಷಾಂತರ ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ ಕೊಟ್ಟಂತಾಗುತ್ತದೆ ಎನ್ನುವುದು "ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳ ಹಿತ ರಕ್ಷಣಾ ವೇದಿಕೆ'ಯ ವಾದ.

ಬೇರೆ ರಾಜ್ಯಗಳಲ್ಲಿ ಗರಿಷ್ಠ ವಯೋಮಿತಿ ಹೆಚ್ಚಿಸಿರುವ ಉದಾಹರಣೆ ಇರುವಾಗ ನಮ್ಮ ರಾಜ್ಯದಲ್ಲೂ ಅದೇ ಮಾದರಿ ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಬೇಕು. ನೇಮಕಾತಿ ವಿಳಂಬಕ್ಕೆ ವ್ಯವಸ್ಥೆ ಕಾರಣ. ವ್ಯವಸ್ಥೆಯ ತಪ್ಪಿಗೆ ಉದ್ಯೋಗಕಾಂಕ್ಷಿಗಳಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಸರ್ಕಾರ ಕಾನೂನು ಮತ್ತು ಮಾನವೀಯತೆ ದೃಷ್ಟಿಯಿಂದ ಅವಕಾಶವಂಚಿತರ ನೆರವಿಗೆ ಬರಬೇಕು.
- ಎಸ್‌. ಕುಮಾರ್‌, ವಯೋಮಿತಿ ಮೀರುತ್ತಿರುವ ಕೆಎಎಸ್‌ ಆಕಾಂಕ್ಷಿ

- ರಫೀಕ್‌ ಅಹ್ಮದ್‌

Trending videos

Back to Top