CONNECT WITH US  

ಹೆಚ್ಚುವರಿ ಶುಲ್ಕಕ್ಕೆ ಸರ್ಕಾರದ ಬ್ರೇಕ್‌

ಬೆಂಗಳೂರು: ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಕೋರ್ಸ್‌ಗಳ ಸರ್ಕಾರಿ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಗಳಿಂದ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಬೋಧನಾ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದ ಹೆಚ್ಚುವರಿ ಶುಲ್ಕಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ.

2018-19ನೇ ಸಾಲಿಗೆ ರಾಜ್ಯ ಸರ್ಕಾರವೇ ರಾಜ್ಯದ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ 54,430 ರೂ. ಬೋಧನಾ ಶುಲ್ಕ ನಿಗದಿ ಮಾಡಿದ್ದು ನಿಗದಿ ಮಾಡಿದಷ್ಟೇ ಶುಲ್ಕವನ್ನು ಪಡೆಯಬೇಕು ಎಂದು ಎಚ್ಚರಿಕೆ ಸಹ ನೀಡಿದೆ.ರಾಜ್ಯದಲ್ಲಿ ತಲಾ 15 ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಗಳಿದ್ದು ಈ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಒಟ್ಟು ಪ್ರವೇಶಾತಿಯಲ್ಲಿ ಇಂತಿಷ್ಟೇ ಪ್ರಮಾಣದ ಸೀಟುಗಳು ಸರ್ಕಾರಿ ಕೋಟಾದ ಸೀಟುಗಳು ಇರುತ್ತದೆ(ಇನ್‌ಟೇಕ್‌ ಆಧಾರದಲ್ಲಿ). ಆ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರ ಭರ್ತಿ ಮಾಡುತ್ತದೆ. ಪ್ರಸಕ್ತ ಸಾಲಿನ ಸೀಟ್‌ ಮ್ಯಾಟ್ರಕ್ಸ್‌ಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಉದಯವಾಣಿಗೆ ಖಚಿತಪಡಿಸಿದ್ದಾರೆ.

ಪ್ರತಿ ವರ್ಷ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಮಾಡಿಕೊಳ್ಳುತ್ತವೆ. ಆ ಸಮಿತಿಯ ಶಿಫಾರಸಿನಂತೆ ಬೋಧನಾ ಶುಲ್ಕ ನಿಗದಿ ಮಾಡಲಾಗುತ್ತದೆ. ಬೋಧನಾ ಶುಲ್ಕ ಹೇಗೆ ಮತ್ತು ಎಷ್ಟು ನಿಗದಿ ಮಾಡಬೇಕು ಎಂಬುದರ ಬಗ್ಗೆ ಸರ್ಕಾರದ ಮಾರ್ಗಸೂಚಿಯೂ ಸ್ಪಷ್ಟವಿದೆ.

ಆದರೆ, ಖಾಸಗಿ ಮತ್ತು ಡೀಮ್ಡ್ ವಿವಿಗಳಲ್ಲಿ ಇದ್ಯಾವುದೂ ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ನೆಪಮಾತ್ರಕ್ಕೆ ಸಮಿತಿ ರಚಿಸಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಬೋಧನಾ ಶುಲ್ಕ ನಿಗದಿ ಮಾಡುತ್ತಿದ್ದವು. ಬೋಧನಾ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ  ಈ ಕ್ರಮ ಕೈಗೊಳ್ಳಲಾಗಿದೆ.

ಬೋಧನಾ ಶುಲ್ಕ ನಿಗದಿ
ವಿಶ್ವವಿದ್ಯಾಲಯಗಳ ಅಧಿನಿಯಮದ ಅನ್ವಯ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಮಾಡಲಾಗುತ್ತದೆ. 50 ಸಾವಿರಕ್ಕಿಂತ ಹೆಚ್ಚು ಬೋಧನಾ ಶುಲ್ಕ ನಿಗದಿ ಮಾಡಿದ ವಿವಿಗಳ ಶುಲ್ಕ 50 ಸಾವಿರ ರೂ.ಗಳಿಗೆ ಮತ್ತು 50 ಸಾವಿರ ರೂ.ಗಿಂತ ಕಡಿಮೆ ನಿಗದಿ ಮಾಡಿದ ಶುಲ್ಕ 45 ಸಾವಿರ ರೂ.ಗಳಿಗೆ ನಿಗದಿ ಪಡಿಸುವ ಅಧಿಕಾರ ಸಮಿತಿಗೆ ಸೇರಿದ್ದಾಗಿತ್ತು.

ಇದೇ ವ್ಯವಸ್ಥೆಯಡಿ ಬೋಧನಾ ಶುಲ್ಕ ನಿಗದಿ 2015- 16ನೇ ಸಾಲಿನಿಂದ ನಡೆದುಕೊಂಡು ಬರುತ್ತಿವೆ. 2018-19ನೇ ಸಾಲಿಗೆ ರಾಜ್ಯ ಸರ್ಕಾರ ಎಲ್ಲ ಡೀಮ್ಡ್ ಮತ್ತು ಖಾಸಗಿ ವಿವಿಗಳ ಸರ್ಕಾರಿ ಕೋಟಾದ ಸೀಟಿಗೆ ಬೋಧನಾ ಶುಲ್ಕ ನಿಗದಿ ಮಾಡಿದೆ. ಬೋಧನಾ ಶುಲ್ಕವಾಗಿ 56,430 ರೂ.ಗಳನ್ನು ಮಾತ್ರ ಪಡೆಯಬೇಕು ಎಂದು ನಿರ್ದೇಶಿಸಿದೆ.

ಬೋಧನಾ ಶುಲ್ಕ ಸೇರಿದಂತೆ ಸರ್ಕಾರ ನಿಗದಿಪಡಿಸಿರುವ ಶುಲ್ಕ ನಿಯಮಾವಳಿ ಉಲ್ಲಂ ಸಿದರೆ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಳಿಸುವ ಜತೆಗೆ ಹತ್ತು ಲಕ್ಷ ರೂ.ವರೆಗೆ ದಂಡ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇದೆ.

ಬೋಧನಾ ಶುಲ್ಕ ತಕ್ಷಣ ಹಿಂದಿರುಗಿಸಿ
ಪ್ರವೇಶ ಪಡೆದ ವಿದ್ಯಾರ್ಥಿಗಳು ಕಾರಣಾಂತರಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದರೆ, ಅಂತಹ ವಿದ್ಯಾರ್ಥಿಗಳು ಪ್ರವೇಶದ ಸಂದರ್ಭದಲ್ಲಿ ಸಂಸ್ಥೆಗೆ ಸಲ್ಲಿಸಿದ ಮೂಲ ದಾಖಲೆ ಮತ್ತು ಬೋಧನಾ ಶುಲ್ಕ ತಕ್ಷಣ ವಿದ್ಯಾರ್ಥಿಗೆ ಹಿಂದಿರುಗಿಸಬೇಕು. ಈ ಸಂಬಂಧ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌(ಎಐಸಿಟಿಇ) ಹೊರಡಿಸುವ ಮಾರ್ಗಸೂಚಿ ಮತ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಖಾಸಗಿ ಮತ್ತು ಡೀಮ್ಡ್ ವಿವಿಗೆ ಸೂಚಿಸಿದೆ.

- ರಾಜು ಖಾರ್ವಿ ಕೊಡೇರಿ

Trending videos

Back to Top