CONNECT WITH US  

ಯಡಿಯೂರಪ್ಪ ಏನೇನೆಲ್ಲಾ ಆಟ ಆಡ್ತಾರೋ ಆಡಲಿ

ಜೀವ ಇರೋ ತನಕ ಪ್ರತ್ಯೇಕತೆಗೆ ಬಿಡಲ್ಲ

ಬೆಂಗಳೂರು: "ಉತ್ತರ ಕರ್ನಾಟಕ ಭಾಗದ ಜನರನ್ನು ಎತ್ತಿಕಟ್ಟುವ ವಿಚಾರದಲ್ಲಿ ಯಡಿಯೂರಪ್ಪ ಏನೇನು ಆಟ ಆಡ್ತಾರೋ ಆಡಲಿ. ಸೂಕ್ತ ಸಮಯದಲ್ಲಿ ನಾನೂ ತಕ್ಕ ಉತ್ತರ ಕೊಡಲಿದ್ದೇನೆ''

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಖಡಕ್‌ ಮಾತು ಇದು. ಉತ್ತರ ಕರ್ನಾಟಕ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆ ವಿವಾದ ಸ್ವರೂಪ ಪಡೆದ ನಂತರದ ವಿದ್ಯಮಾನಗಳ ಬಗ್ಗೆ ಮೌನ ಮುರಿದಿರುವ ದೇವೇಗೌಡರು "ಉದಯವಾಣಿ'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫ‌ಲವಾದ ಕ್ಷಣದಿಂದಲೇ ಯಡಿಯೂರಪ್ಪ ಅವರ ವರ್ತನೆಗಳ ಬಗ್ಗೆ ಇಡೀ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಇಂತಹ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ, ಪ್ರತಿಭಟನೆ, ಬಂದ್‌ ಕರೆ ಬೆಳವಣಿಗೆಗಳು ನಡೆಯುತ್ತಿರುವಾಗ ನೀವು ಮೌನ ವಹಿಸಿದ್ದೀರಲ್ಲಾ?
           ನಾನು ಮೌನ ವಹಿಸಿಲ್ಲ. ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆ ಇದಕ್ಕೆ ಕಾರಣವಾ?
           ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿಕೊಳ್ಳಿ ಎಂದು ಹೇಳಿಯೇ ಇಲ್ಲ. ಅವರ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ವ್ಯವಸ್ಥಿತವಾಗಿ ಆ ಹೇಳಿಕೆ ತಿರುಚಲಾಯಿತು. ನಾನಾಗಲಿ, ಕುಮಾರಸ್ವಾಮಿಯವರಾಗಲಿ ಎಂದೂ ಪ್ರತ್ಯೇಕತೆ ಬಗ್ಗೆ ಮಾತನಾಡಿಲ್ಲ, ಮುಂದೆ ಮಾತನಾಡುವುದೂ ಇಲ್ಲ. ನಾವು ಅಖಂಡ ಕರ್ನಾಟಕದ ಪರ.

ಹಾಗಾದರೆ ಹೇಳಿಕೆ ವಿವಾದ ಮಾಡಿದವರು ಯಾರು ?
           ನಿಮಗೆ ಗೊತ್ತಿದೆ. ಬೆಳಗಾವಿಯಲ್ಲಿ ಪ್ರತಿಭಟನೆ ನಡೆದದ್ದು, ಅಲ್ಲಿಗೆ ಹೋಗಿ ಧರಣಿಯಲ್ಲಿ ಪಾಲ್ಗೊಂಡಿದ್ದು, ಪ್ರತ್ಯೇಕ ಧ್ವಜ ಹಾರಾಟ ಆಗಿದ್ದು, ಇವೆಲ್ಲವೂ ಯಾರು ಮಾಡಿಸಿದರು. ಬಂದ್‌ ವಾಪಸ್‌ ಪಡೆಯಲು ಸಿದ್ಧವಿದ್ದರೂ ತಡೆದಿದ್ದು ಯಾರು?

ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆಯೇ ಇಷ್ಟಕ್ಕೆಲ್ಲಾ ಕಾರಣವಾಯ್ತಾ?
            ಕುಮಾರಸ್ವಾಮಿ ವಿವಾದ ಆಗುವಂತ ಹೇಳಿಕೆ ಕೊಡಲಿಲ್ಲ, ಅದನ್ನು ಬೇಕಂತಲೇ ವಿವಾದವಾಗಿ ಮಾಡಲಾಯಿತು. ರೈತರ ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಅತಿ ದೊಡ್ಡ ತೀರ್ಮಾನ ಕೈಗೊಂಡರು. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಅಸಾಧ್ಯವಾದರೂ 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಇದು ಎಂದಾದರೂ ಆಗಿತ್ತಾ? ರೈತರ ಸಾಲ ಮನ್ನಾ ಹಳೇ ಮೈಸೂರಿಗೆ ಮಾತ್ರ ಸೀಮಿತವಾ? ಉತ್ತರ ಕರ್ನಾಟಕ ರೈತರಿಗೆ ಅದು ಅನ್ವಯವಾಗುವುದಿಲ್ಲವೇ?  ಮೊಸರಲ್ಲಿ ಕಲ್ಲು ಹುಡುಕುವವರಿಗೆ ನಾವು ಏನು ಹೇಳಲು ಸಾಧ್ಯ

ಉತ್ತರ ಕರ್ನಾಟಕ  ಒಡೆಯಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂತಲ್ಲಾ?
              ಅಯ್ಯೋ ರಾಮ, ಗೊತ್ತಿದೆ ಸಾರ್‌. ಅಪ್ಪ-ಮಕ್ಕಳು ರಾಜ್ಯ ಒಡೆಯಲು ತಂತ್ರ ಮಾಡಿದ್ದಾರೆ ಎಂದು ಯಡಿಯೂರಪ್ಪ ಮಾತನಾಡಿದ್ದಾರೆ. ನನ್ನನ್ನೂ ಮಧ್ಯೆ ಎಳೆದುತಂದಿದ್ದು ಮನಸ್ಸಿಗೆ ತುಂಬಾ ಬೇಸರವಾಗಿದೆ. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫ‌ಲವಾದ ಕ್ಷಣದಿಂದ ಪ್ರತಿ ಬಾರಿ ಅಪ್ಪ-ಮಕ್ಕಳ ತಂತ್ರ, ಕುತಂತ್ರ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಆದರೆ, ನನ್ನ ಸಹನೆಗೂ ಮಿತಿಯಿದೆ. ಸೂಕ್ತ ಸಮಯದಲ್ಲಿ ತಕ್ಕ ಉತ್ತರ ಕೊಡಲಿದ್ದೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೋರಾಟಗಾರರ ಜತೆ ಸಭೆ ನಡೆಸಿದ ನಂತರವೂ ಬಂದ್‌ ಕರೆ ನೀಡಿದ್ದರಲ್ಲಾ?
             ಬಂದ್‌ಗೆ ಯಾರು ಕುಮ್ಮಕ್ಕು ಕೊಟ್ಟರು ಎಂಬುದು ಗೊತ್ತಿದೆ. ಆದರೆ ಬಂದ್‌ ಕರೆಗೆ ಸ್ಪಂದನೆ ದೊರೆಯಿತೇ? ಆ ಭಾಗದ ಜನರಿಗೆ ಸತ್ಯ ಗೊತ್ತಿದೆ. ನಾನು ಹಾಗೂ ಕುಮಾರಸ್ವಾಮಿ ಜೀವಂತ ಇರುವವರೆಗೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಅವಕಾಶ ಕೊಡುವುದಿಲ್ಲ.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಕ್ರಮವೇನು?
             ಒಂದು ಮಾತು ಹೇಳೆ¤àನೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಆ ಭಾಗದಲ್ಲಿ ವಿಧಾನಮಂಡಲ ಅಧಿವೇಶನಕ್ಕೆ ನಿರ್ಧಾರ ಕೈಗೊಂಡಿದ್ದು ಕುಮಾರಸ್ವಾಮಿ. ಅದೆಲ್ಲವೂ ಆ ಭಾಗದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳಲ್ಲವೇ?

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಸ್ಥಾನ ಬರಲಿಲ್ಲ ಎಂದು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಇದೆಯಲ್ಲಾ?
               ಆರೋಪ ಮಾಡುವವರು ಆತ್ಮಸಾಕ್ಷಿಯಾಗಿ ಮಾತನಾಡಲಿ. ನಾನು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಆ ಭಾಗಕ್ಕೆ ಎಷ್ಟು ಅಭಿವೃದ್ಧಿ ಮಾಡಿದ್ದೇವೆ. ನಮ್ಮ ಕೊಡುಗೆ ಏನು? ಎಂಬ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಚುನಾವಣೆಯಲ್ಲಿ ಹೆಚ್ಚು ಸೀಟು ಬರಲಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷ್ಯ ತೋರುವ ಸಣ್ಣತನ ನಮ್ಮದಲ್ಲ. ಕುಮಾರಸ್ವಾಮಿ ಅಖಂಡ ಕರ್ನಾಟಕದ ಮುಖ್ಯಮಂತ್ರಿ.

ಮುಂದಿನ ನಿಮ್ಮ ನಡೆ ಏನು?
               ಭಾನುವಾರ ಪಕ್ಷದ ಕಚೇರಿಯಲ್ಲಿ ಪಕ್ಷದ ಸಚಿವರು, ಶಾಸಕರ ಸಭೆ ಕರೆದಿದ್ದೇನೆ. ಅಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ನಂತರ ಆ ಭಾಗದ ಪ್ರತಿ ಕ್ಷೇತ್ರಕ್ಕೂ ನಾನೇ ಹೋಗಿ ಸತ್ಯ ಜನರ ಮುಂದಿಡುತ್ತೇನೆ.

ಯಡಿಯೂರಪ್ಪ ಅವರಿಗೆ ಯಾಕೆ ನಿಮ್ಮ ಕುಟುಂಬದ ಮೇಲೆ ಕೋಪ?
               ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬಾರದು ಎಂದುಕೊಂಡಿದ್ದರು. ದೇವರ ಇಚ್ಛೆ, ಜನರ ಆರ್ಶೀವಾದ ಮತ್ತೂಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಅದನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ವಿಧಾನಸಭೆಯಲ್ಲಿ ಅವರು ಆಡಿದ ಮಾತುಗಳು ನೋಡಿದರೆ ಗೊತ್ತಾಗುವುದಿಲ್ಲವೇ? ರಾಜಕೀಯ ಹಿರಿತನ ಇರುವವರು ಆಡುವ ಮಾತುಗಳೇ ಅವು. ಒಟ್ಟಾರೆ  ಅವರದು "ಟಾರ್ಗೆಟ್‌ ಕುಮಾರಸ್ವಾಮಿ' ಅಜೆಂಡಾ.

ಸ್ಥಳೀಯ ಸಂಸ್ಥೆ
ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಲೋಕಸಭೆಯಲ್ಲೂ ಮೈತ್ರಿ ಬಗ್ಗೆ ಚರ್ಚಿಸಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಕುರಿತು ಚರ್ಚೆಯಾಗಿಲ್ಲ. ಈಗಷ್ಟೇ ವೇಳಾಪಟ್ಟಿ ಪ್ರಕಟಗೊಂಡಿದೆ. ಆ ವಿಚಾರದಲ್ಲಿ ಎರಡೂ ಪಕ್ಷಗಳು ನಾಯಕರು ಹಾಗೂ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ.  ಕುಮಾರಸ್ವಾಮಿ ಹಾಗೂ ಪರಮೇಶ್ವರ್‌ ಅದರ ಬಗ್ಗೆ ಚರ್ಚಿಸಲಿದ್ದಾರೆ. ಸದ್ಯಕ್ಕೆ ನನ್ನ ಬಳಿ ಆ ಕುರಿತು ಯಾವುದೇ ಮಾಹಿತಿ ಇಲ್ಲ.

- ಎಸ್‌. ಲಕ್ಷ್ಮಿನಾರಾಯಣ

Trending videos

Back to Top