CONNECT WITH US  

ಕಾಬೂಲ್‌ ಉಗ್ರರ ಗುಂಡಿಗೆ ಕಾರವಾರ ಯುವಕ ಬಲಿ

ಕಾರವಾರ: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಉಗ್ರಗಾಮಿಗಳ ಗುಂಡೇಟಿಗೆ ಬಲಿಯಾದ ಪ್ಯಾಟ್ಸನ್‌ ರೊಡ್ರಿಗಸ್‌ (34), ಕಾರವಾರ ತಾಲೂಕಿನ ಕಡವಾಡ ಗ್ರಾಮ ನಿವಾಸಿ ಎಂದು ಖಚಿತಗೊಂಡಿದೆ.

ಪ್ಯಾಟ್ಸನ್‌, ವಿಶ್ವ ಪ್ರಸಿದ್ಧ ಆಹಾರ ಸರಬರಾಜು ಕಂಪನಿ ಸೊಡೆಕೊದಲ್ಲಿ ಬಾಣಸಿಗ ಹಾಗೂ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಕಾಬೂಲ್‌ ಸಮೀಪದ ಮನೆಯಿಂದ ಕೆಲಸದ ಸ್ಥಳಕ್ಕೆ ಮಲೇಷ್ಯಾ ಹಾಗೂ ಮೆಕಡೋನಿಯಾದ ಮತ್ತೂಬ್ಬ ಯುವಕನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹತ್ಯೆ ಮಾಡಲಾಗಿದೆ. 

ಶಂಕಿತ ಇಸ್ಲಾಮಿಕ್‌ ಉಗ್ರರು ಮೂವರನ್ನು ಕಾಬೂಲ್‌ ಪ್ರಾಂತ್ಯದ ಪೂರ್ವ ಭಾಗದ ಪೌಲ್‌ ಇ ಚಾರ್ಖಿ ಸರ್ಕಲ್‌ನಿಂದ ಅಪಹರಿಸಿ ದಕ್ಷಿಣ ಅಪಾ^ನಿಸ್ತಾನದ ಮುಸ್ಸಾಯಿ ಜಿಲ್ಲೆಯ ಪ್ರದೇಶದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಟೊಯೋಟ ಕೊರೋಲಾ ಕಾರಿನಲ್ಲಿ ಪ್ಯಾಟ್ಸನ್‌ ಮತ್ತು ಇತರ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಪ್ಯಾಟ್ಸನ್‌ ಮತ್ತಿಬ್ಬರು ಸಂಚರಿಸುತ್ತಿದ್ದ ವಾಹನದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪಹರಣಕಾರರಿಗಾಗಿ ಹುಡುಕಾಟ ನಡೆದಿದೆ. ಪ್ಯಾಟ್ಸನ್‌ ಮೃತದೇಹ ಪತ್ತೆಯಾದ ಸ್ಥಳದಿಂದ ಅಪಹರಣಕಾರರು ಪರಾರಿಯಾಗಿದ್ದಾರೆ.

ಸೊಡೆಕೊ ಅಫ್ಘಾನಿಸ್ತಾನದಲ್ಲಿ ವಿದೇಶಿಗರು, ಆಸ್ಪತ್ರೆಗಳು ಹಾಗೂ ಕಾರಾಗೃಹಗಳಿಗೆ ಆಹಾರ ಸರಬರಾಜು ಮಾಡುವ ಕಂಪನಿಯಾಗಿದೆ. ಇಂಗ್ಲೆಂಡ್‌ನ‌ ರಾಯಲ್‌ ಆಸ್ಕೋಟ್‌ ಮೂಲದ ಈ ಕಂಪನಿ ಅಮೆರಿಕದ ನೌಕಾದಳ ಸೈನಿಕರಿಗೂ ಆಹಾರ ಸರಬರಾಜು ಮಾಡುತ್ತದೆ. 

ಯಾರು ಈ ಪ್ಯಾಟ್ಸನ್‌?:
ಪ್ಯಾಟ್ಸನ್‌ ರೊಡ್ರಿಗಸ್‌ ಕಾರವಾರ ತಾಲೂಕು ಕಡವಾಡ ಗ್ರಾಮದ ಯುವಕ. ಇಲ್ಲಿನ ಸುಂಕೇರಿಯ ನಿರ್ಮಲ ರಾಣೆ ಕಾನ್ವೆಂಟ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದವರು. ಕಾರವಾರದಲ್ಲಿ ಕಾಲೇಜು ಕಲಿತು, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿ ಗಲ್ಫ್ ರಾಷ್ಟ್ರಗಳಲ್ಲಿ ದಶಕದಿಂದ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಎರಡು ವರ್ಷಗಳ ಹಿಂದಷ್ಟೇ ಅಪಾ^ನಿಸ್ತಾನದ ಕಾಬೂಲ್‌ನಲ್ಲಿ ಸೊಡೆಕೊÕà ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಕಾರವಾರಕ್ಕೆ ಎರಡು ತಿಂಗಳ ಹಿಂದಷ್ಟೇ ಬಂದು ತಾಯಿ, ಪತ್ನಿ ಹಾಗೂ ಮಗುವನ್ನು ಭೇಟಿಯಾಗಿ ಮರಳಿದ್ದರು. ತಾಯಿ ಕಡವಾಡದಲ್ಲಿ ವಾಸವಾಗಿದ್ದಾರೆ. ಪತ್ನಿ ಪಿಲ್ಲಾ ಹಾಗೂ ಮಗ ಕಾರವಾರ ನಗರದ ಕಾಜೂಭಾಗದಲ್ಲಿ ವಾಸವಿದ್ದಾರೆ. ಅಪಹರಣವಾಗುವ ಸ್ವಲ್ಪ ಹೊತ್ತಿನ ಮುಂಚೆ ಪ್ಯಾಟ್ಸನ್‌ ಮನೆಯವರೊಂದಿಗೆ ಮಾತನಾಡಿದ್ದರು.

ರವಿವಾರ ಮೃತದೇಹ ಕಡವಾಡಕ್ಕೆ:
ಪ್ಯಾಟ್ಸನ್‌ ರೊಡ್ರಿಗಸ್‌ರ ಮೃತದೇಹ ರವಿವಾರ ಕಡವಾಡ ಗ್ರಾಮ ತಲುಪುವ ಸಾಧ್ಯತೆಗಳಿವೆ. ಅಫ್ಘಾನಿಸ್ತಾನದ ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಬಾಣಸಿಗ ಪ್ಯಾಟ್ಸನ್‌ ಅವರ ಪಾರ್ಥೀವ ಶರೀರವನ್ನು ಕಾರವಾರಕ್ಕೆ ಕಳುಹಿಸಲು ಸೊಡೆಕೊ ಕಂಪನಿ ಪ್ರಯತ್ನ ನಡೆಸಿದೆ. ಈ ಸಂಬಂಧ ಭಾರತದ ರಾಯಭಾರ ಕಚೇರಿಯೊಂದಿಗೆ ಮಾತುಕತೆಗಳು ನಡೆಯುತ್ತಿವೆ.

Trending videos

Back to Top