CONNECT WITH US  

ತುಂಬಿದ ತುಂಗಭದ್ರಾ : 30 ಟಿಎಂಸಿ ನೀರು ಆಂಧ್ರ ಪಾಲು!

ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ 30 ಟಿಎಂಸಿ ಅಡಿಗೂ ಅಧಿಕ ನೀರನ್ನು ವ್ಯರ್ಥವಾಗಿ ನದಿಪಾತ್ರಗಳಿಗೆ ಹರಿಬಿಡಲಾಗಿದ್ದು, ಆಂಧ್ರದ ಪಾಲಾಗಿದೆ. 

ರಾಜ್ಯ ಸರ್ಕಾರ ಜಲಾಶಯದ ಹೂಳಿನ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡಿದ್ದರೆ ವ್ಯರ್ಥ ಹರಿಯುವ ನೀರನ್ನು ಹಿಡಿದಿಡಬಹುದಿತ್ತು ಎನ್ನುವ ಚರ್ಚೆ ಅಚ್ಚುಕಟ್ಟು ಪ್ರದೇಶದ ರೈತಾಪಿ ವಲಯದಲ್ಲಿ ಶುರುವಾಗಿದೆ. ಆದರೆ ಸರ್ಕಾರದ ಆಮೆಗತಿ ಓಟಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕಾವೇರಿ ವಿಷಯ ಸರ್ಕಾರದ ಗಮನ ಸೆಳೆದಷ್ಟು ತುಂಗಭದ್ರಾ ಸೆಳೆದಿಲ್ಲ. ಸರ್ಕಾರದ ಆಮೆಗತಿ ಯೋಜನೆಗಳಿಗೆ ಜಲಾಶಯದಲ್ಲಿ ಸಂಗ್ರಹವಾಗಬೇಕಾದ ನೀರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗುತ್ತಿದೆ. ತುಂಗಭದ್ರಾ ಜಲಾಶಯ 133 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಆರು ದಶಕದಿಂದ 33 ಟಿಎಂಸಿ ಅಡಿಗೂ ಅಧಿಕ ಹೂಳು ತುಂಬಿಕೊಂಡಿದೆ. ಪ್ರತಿ ವರ್ಷವೂ 0.50 ಟಿಎಂಸಿ ಅಡಿ ಹೂಳು ಜಲಾಶಯದ ಒಡಲಲ್ಲಿ ಶೇಖರಣೆಯಾಗುತ್ತಿದೆ ಎಂದು ತಾಂತ್ರಿಕ ವರದಿಯೇ ಹೇಳುತ್ತಿದೆ. ಹಾಗಾಗಿ ಡ್ಯಾಂನಲ್ಲಿ ನೀರು ಸಂಗ್ರಹಣೆ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಿದೆ.

ಡ್ಯಾಂ ಪ್ರಸಕ್ತ 100 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯಕ್ಕೆ ಬಂದು ತಲುಪಿದೆ. ಹೂಳಿನ ಬಗ್ಗೆ ಈ ಭಾಗದಲ್ಲಿ ಹಲವು ಹೋರಾಟ ನಡೆದರೂ ಸರ್ಕಾರ ಕಣ್ತೆರೆದು ನೋಡುತ್ತಿಲ್ಲ.ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಹೂಳಿನ ಬಗ್ಗೆ ಗ್ಲೋಬಲ್‌ ಟೆಂಡರ್‌ ಕರೆದು ಒಂದು ಹೆಜ್ಜೆ ಮುಂದಿಟ್ಟು ಕೊನೆಗೂ ಹೂಳೆತ್ತುವುದು ಅಸಾಧ್ಯ, ಹೂಳಿನ ಬದಲು ನವಲಿ ಬಳಿ 33 ಸಾವಿರ ಎಕರೆ ಪ್ರದೇಶದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಿದರೆ 30 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಿದೆ ಎನ್ನುವ ಮಾತನ್ನಾಡಿತ್ತು. ನವಲಿ ಸಮಾನಾಂತರ ಜಲಾಶಯದ ಸಾಧಕ ಬಾಧಕದ ಅಧ್ಯಯನ ಸಮಿತಿ ರಚನೆಯ ಮಾತನ್ನಾಡಿ ಸುಮ್ಮನಾಯಿತು. ಮೈತ್ರಿ ಸರ್ಕಾರವೂ ಪ್ರಸ್ತಾಪ ಮಾಡಲಿಲ್ಲ.

ವ್ಯರ್ಥವಾಗಿ ಹರಿದ 30 ಟಿಎಂಸಿ ನೀರು:
ಈ ವರ್ಷ ರಾಜ್ಯದ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬಹುತೇಕ ಜಲಾಶಯಗಳು ಮೈದುಂಬಿಕೊಂಡಿವೆ. ತುಂಗಭದ್ರಾ ಜಲಾಶಯವೂ ಭರ್ತಿಯಾಗಿದೆ. ಆದರೆ ವ್ಯರ್ಥ ನೀರನ್ನು ಮುಖ್ಯ ಗೇಟ್‌ಗಳ ಮೂಲಕ ನದಿ ಪಾತ್ರಗಳಿಗೆ ಹರಿಬಿಡಲಾಗಿದೆ. ಜು.16ರಿಂದ ಗೇಟುಗಳ ಮೂಲಕ ನೀರು ಹರಿಬಿಡಲಾಗಿದ್ದು, ಕೇವಲ 20 ದಿನದಲ್ಲಿ ನದಿ ಪಾತ್ರಗಳಿಗೆ ಬರೊಬ್ಬರಿ 30 ಟಿಎಂಸಿ ಅಡಿಗೂ ಅಧಿಕ ನೀರು ಆಂಧ್ರಕ್ಕೆ ಹರಿದು ಹೋಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಪ್ರತಿದಿನ 16 ಸಾವಿರ ಕ್ಯೂಸೆಕ್‌ನಷ್ಟು ಒಳ ಹರಿವಿದೆ. ಹೆಚ್ಚುವರಿ ನೀರನ್ನು ಡ್ಯಾಂನಿಂದ ನದಿ ಪಾತ್ರಗಳಿಗೆ ಹರಿಬಿಡಲಾಗಿದೆ. 20 ದಿನದಲ್ಲಿ 30 ಟಿಎಂಸಿಗೂ ಅಧಿಕ ನೀರು ನದಿಪಾತ್ರಗಳಿಗೆ ಹರಿಬಿಡಲಾಗಿದೆ.
- ಶಂಕರಗೌಡ ಪಾಟೀಲ, ತುಂಗಭದ್ರಾ ಡ್ಯಾಂ ಸಿಇ

ತುಂಗಭದ್ರಾ ಜಲಾಶಯದಿಂದ ಪ್ರತಿ ದಿನವೂ ವ್ಯರ್ಥವಾಗಿ ನದಿ ಪಾತ್ರಗಳಿಗೆ ನೀರು ಹರಿಬಿಡುತ್ತಿರುವುದನ್ನು ನೋಡಿದರೆ ನಮಗೆ ನೋವೆನಿಸುತ್ತದೆ. ಈ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ಕನಿಷ್ಠ ವ್ಯರ್ಥವಾಗಿ ಹರಿಯುವ ನೀರನ್ನಾದರೂ ಕೆರೆಗಳಿಗೆ ತುಂಬಿಸುವ ಕೆಲಸ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ.
- ವಿಠ್ಠಪ್ಪ ಗೋರಂಟಿ, ತುಂಗಭದ್ರಾ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ

- ದತ್ತು ಕಮ್ಮಾರ


Trending videos

Back to Top