CONNECT WITH US  

ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ: ಸಿದ್ದು

ಬಾಗಲಕೊಟೆ ಜಿಲ್ಲೆ ಗುಳೇದಗುಡ್ಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಬಾಗಲಕೋಟೆ: ಅತೃಪ್ತ ಕಾಂಗ್ರೆಸ್‌ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಿಜೆಪಿ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

ಗುಳೇದಗುಡ್ಡದಲ್ಲಿ ಮಾತನಾಡಿ, ಬಿಜೆಪಿಯವರು ಹೇಗಾದರೂ ಮಾಡಿ ರಾಜ್ಯದಲ್ಲಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಬೇಕೆಂದು ಕುತಂತ್ರ ನಡೆಸಿದ್ದಾರೆ. ಇಂತಹ ಕುತಂತ್ರದಿಂದ ಈಗಾಗಲೇ ಒಂದು ಬಾರಿ ಮುಖಭಂಗ ಅನುಭವಿಸಿದ್ದಾರೆ. ಮತ್ತೆ ಪ್ರಯತ್ನಿಸಿದರೆ ಮುಖಭಂಗ ಅನುಭವಿಸಲಿದ್ದಾರೆ. ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿ ಸಂಪರ್ಕದಲ್ಲಿಲ್ಲ. ಹೀಗೆ ಹೇಳಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಹೋದ ಯಡಿಯೂರಪ್ಪ ಎಷ್ಟು ದಿನ ಸಿಎಂ ಆಗಿದ್ರು? ಸತ್ಯ ಹೇಳಬೇಕು ಅಂದ್ರೆ ಬಿಜೆಪಿಯ ಶಾಸಕರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.

ಸಿದ್ದರಾಮಯ್ಯ ಪಾಕಿಸ್ತಾನಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನಿಗೆ ಸಂವಿಧಾನ ಗೊತ್ತಿಲ್ಲ. ಈ ದೇಶದ ಸಾಮಾಜಿಕ ವ್ಯವಸ್ಥೆ ಗೊತ್ತಿಲ್ಲ. ಅಂತವರ ಬಗ್ಗೆ ಏನು ಹೇಳಬೇಕು. ಕಾನೂನು ಗೊತ್ತಿಲ್ಲದವರಿಗೆ, ಬೆಂಕಿ ಹಚ್ಚುವವರ ಪ್ರಶ್ನೆಗೆ ಮಾತನಾಡಬಾರದು ಎಂದರು.

ಜಾತಿ, ಧರ್ಮದ ಮಧ್ಯೆ ಜಗಳ ಹಚ್ಚುವವರಿಗೆ ಅಧಿಕಾರ ಸಿಗಬಾರದು. ಬಿಜೆಪಿಯವರು ಕೇವಲ ಜಾತಿ ಮಧ್ಯೆ ಜಗಳ ಹಚ್ಚುತ್ತಾರೆ. ನಾನು ಹಿಂದೂ ವಿರೋಧಿ ಎಂದು ಹೇಳುತ್ತಾರೆ. ಹಾಗಾದರೆ, ನನ್ನ ಹೆಸರು ಸಿದ್ದರಾಮಯ್ಯ ಅಲ್ವೇ. ನಾನೂ ಹಿಂದೂ ಅಲ್ವಾ ಎಂದು ಪ್ರಶ್ನಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಅವರು ಜನರ ದಾರಿ ತಪ್ಪಿಸಿದ್ದರು. ಈ ಬಾರಿ ದಾರಿ ತಪ್ಪಬೇಡಿ ಎಂದರು.

ಮೈತ್ರಿ ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ:
ಬಳಿಕ ಹುಬ್ಬಳ್ಳಿಯಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಆಯಾ ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯಲಿದೆ. ಶಾದಿಭಾಗ್ಯ ಅನುದಾನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಮೈತ್ರಿ ಧರ್ಮ ಕಾಪಾಡಬೇಕಾಗಿರುವುದು ಎಲ್ಲರ ಜವಾಬ್ದಾರಿ. ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.


Trending videos

Back to Top