CONNECT WITH US  

ಮಲೆನಾಡು, ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ

ಬೆಂಗಳೂರು: ಮಲೆನಾಡು, ಕರಾವಳಿ, ಹಳೆ ಮೈಸೂರು, ಕೊಡಗಿನಲ್ಲಿ ಆಶ್ಲೇಷಾ ಮಳೆ ಅಬ್ಬರಿಸುತ್ತಿದ್ದು, ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ನೀರು  ಬಿಡಲಾಗುತ್ತಿದ್ದು, ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ, ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ- ಕುಮಾರಧಾರಾ ಮೈದುಂಬಿ ಹರಿಯುತ್ತಿವೆ. ಕುಮಾರಧಾರಾ ಹೊಸ ಸೇತುವೆಯ ಬಳಿ ಇರುವ ಜೋಪಡಿಯಲ್ಲಿ ಬೀಡು ಬಿಟ್ಟಿದ್ದ ಕುಟುಂಬವೊಂದು ಅಪಾಯಕ್ಕೆ ಸಿಲುಕಿದ್ದು, ಅಧಿಕಾರಿಗಳು ಅವರನ್ನು ರಕ್ಷಿಸಿದರು. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಸ್ನಾನಘಟ್ಟದಲ್ಲಿ ನಿರ್ಮಿಸಿದ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ ಕೂಡ ಸಂಪೂರ್ಣ ಮುಳುಗಡೆಯಾಗಿದೆ. ಪಕ್ಕದ ಮಂಜೇಶ್ವರ-ಸುಬ್ರಹ್ಮಣ್ಯ ಸೇತುವೆ ಗುರುವಾರ ಮುಳುಗಡೆಯಾಗಿದ್ದು, ಸಂಪರ್ಕ ಸ್ಥಗಿತಗೊಂಡಿದೆ. ಕುಮಾರಧಾರಾ ಉಪನದಿ ದರ್ಪಣ ತೀರ್ಥ ನದಿಯಲ್ಲೂ ನೆರೆ ಬಂದಿದೆ. 

ಮಳೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಹಾಗೂ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಶಿರಾಡಿ ಗ್ರಾಮದ ಅಡ್ಡಹೊಳೆ ಪರಿಶಿಷ್ಟ ಜಾತಿ ಕಾಲನಿಯ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತರಿಗೆ ಸರಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಹಲವು ಮನೆಗಳು ಹಾನಿಗೊಳಗಾಗಿವೆ. ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನ ಜಲಾವೃತಗೊಂಡಿದ್ದು, ಸಮೀಪದ ಕಿಂಡಿ ಅಣೆಕಟ್ಟಿನ ಸೇತುವೆ ಕೂಡ ಮುಳುಗಿದೆ. ಕಪಿಲಾ ದಂಡೆಯಲ್ಲಿರುವ ಆಂಜನೇಯ ದೇವರ ಗರ್ಭಗುಡಿ ಭಾಗಶಃ ಮುಳುಗಿದ್ದು, ಇಚಿಲಂಪಾಡಿ ಗ್ರಾಮದಲ್ಲಿ ಐದಾರು ಮನೆಗಳು ಜಲಾವೃತಗೊಂಡಿವೆ. ಧರ್ಮಸ್ಥಳದಲ್ಲಿಯೂ ನೇತ್ರಾವತಿ ಸ್ನಾನ ಘಟ್ಟ ಸಹಿತ ಸುತ್ತಮುತ್ತಲ ಪ್ರದೇಶ ಜಲಾವೃತಗೊಂಡಿದೆ. ಅಲ್ಲದೆ, ಧರ್ಮಸ್ಥಳ-ಮುಂಡಾಜೆ ರಸ್ತೆಯ ಪಿಲತ್ತಡ್ಕ ಬಳಿ ಭೂಕುಸಿತ ಉಂಟಾಗಿದೆ. 

ಶಾಲೆಗಳಿಗೆ ರಜೆ: 
ಮಳೆ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಾಗಿದೆ. ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 45 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಪ್ರವಾಸಿ ತಾಣ ಬಲಮುರಿ ಫಾಲ್ಸ್‌ಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮತ್ತೂಂದು ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರ ದೋಣಿ ವಿಹಾರ ಸ್ಥಗಿತಗೊಂಡಿದೆ. 

ಕೇರಳದ ವೈನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಕಬಿನಿ (2284.00 ಅಡಿ) ಭರ್ತಿಯಾಗಿದೆ. 70 ಸಾವಿರ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ನಂಜನಗೂಡು ತಾಲೂಕಿನ ಕುಳ್ಳಂಕನ ಹುಂಡಿ ಗ್ರಾಮಕ್ಕೆ ಪ್ರವಾಹದ ಭೀತಿ ಎದುರಾಗಿದೆ. ಸರಗೂರು ಪಟ್ಟಣ ಸಮೀಪದ ಸೋಮೇಶ್ವರ ದೇವಾಲಯ ಬಳಿ ಇರುವ ಶಿವನ ಮೂರ್ತಿ, ಚಕ್ಕೂರು ಬಳಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಟ್ಟಲ್ಲಿ ನಂಜನಗೂಡು ತಾಲೂಕಿನ ನದಿಪಾತ್ರದ 10 ರಿಂದ 15 ಹಳ್ಳಿಗಳಿಗೆ ನೀರು ನುಗ್ಗುವ ಅಪಾಯವಿದೆ. ಇದೇ ವೇಳೆ, ಹಾರಂಗಿ ಜಲಾಶಯದಿಂದ 13,099, ಹೇಮಾವತಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಆರ್ಭಟಿಸುತ್ತಿದ್ದು, ಕೆಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮತ್ತೂಮ್ಮೆ ಮುಳುಗುವ ಹಂತ ತಲುಪಿದೆ.
 
ಬೆಂಗಳೂರಿನಲ್ಲೂ ಗುರುವಾರ ಮಧ್ಯಾಹ್ನ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದರು. ಈ ಮಧ್ಯೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳ ಒಂದೆರಡು ಕಡೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

ಗುರುವಾರವೂ ರೈಲು ಸಂಚಾರವಿಲ್ಲ
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ ಬಳಿ ಬುಧವಾರ ಹಳಿ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ವಿಳಂಬವಾಗಿದೆ. ಗುರುವಾರವೂ ಕಾರ್ಮಿಕರು ತೆರವು ಕಾರ್ಯ ನಡೆಸಿದರು. ಆದರೆ, ಮಳೆಗೆ ಗುಡ್ಡ ಮತ್ತೆ ಕುಸಿಯುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ತೆರವು ಕಾರ್ಯ ವಿಳಂಬ ಹಿನ್ನೆಲೆಯಲ್ಲಿ ಗುರುವಾರ ಕೂಡ ಬೆಂಗಳೂರು-ಮಂಗಳೂರು ರೈಲು ಯಾನವನ್ನು ರದ್ದುಪಡಿಸಲಾಗಿತ್ತು.

Trending videos

Back to Top