CONNECT WITH US  

ದರ್ಶನ್‌ ನೋಡಲು ಮುಗಿಬಿದ್ದ ಜನ

ರಾಮನಗರ: ನಗರದ ಮೂಲಕ  ಹಾದು ಹೋಗಿರುವ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ  ನೂತನ ಖಾಸಗಿ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ನಟ ದರ್ಶನ್‌ ನೋಡಲು ಮಹಿಳೆಯರು, ಯುವತಿಯರು, ಯುವಕರಾದಿಗಾಗಿ ಸಾವಿರಾರು ಮಂದಿ ಮುಗಿಬಿದ್ದ ಕಾರಣ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ ಪ್ರಸಂಗ ಬುಧವಾರ ನಡೆದಿದೆ.

ಬುಧವಾರ ಬೆಳಗ್ಗೆ  10 ಗಂಟೆ ವೇಳೆಗೆ ನೂತನ ಆಭರಣ ಮಳಿಗೆಯ ಉದ್ಘಾಟನೆಗೆ ನಟ ದರ್ಶನ್‌ ಆಗಮಿಸಬೇಕಿತ್ತು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಮಂದಿ ಮಳಿಗೆಯ ಬಳಿ ಜಮಾಯಿಸಿದ್ದರು. ನೂತನ ಮಳಿಗೆಯ ಅಕ್ಕ-ಪಕ್ಕ, ಎದುರುಗಡೆ ಇರುವ ಕಟ್ಟಡಗಳ ಮೇಲು ಜನ ಜಮಾಯಿಸಿದ್ದರು. 

ಲಾಠಿಪ್ರಹಾರ: ಹೆದ್ದಾರಿ ರಸ್ತೆಯ ಎರಡೂ ಬದಿಗಳಲ್ಲಿ ಜನ ಜಮಾಯಿಸಿದ್ದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾದ ಕಾರಣ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಯಿತು. ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನೆಡಸಿದರು. 

ನಟ ದರ್ಶನ್‌ 11.50ರ ವೇಳೆಗೆ ಆಗಮಿಸಿದಾಗ ಅಭಿಮಾನಿಗಳಲ್ಲಿ ನಟನನ್ನು ನೋಡುವ ತವಕ ಹೆಚ್ಚಾಗಿ ಮಳಿಗೆಯ ಕಡೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತೆ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದರು. ನೂಕುನುಗ್ಗಲಿನಿಂದಾಗಿ ಎಳೆ ಮಕ್ಕಳನ್ನು ಕರೆದುತಂದಿದ್ದ ಕೆಲವರ ಪಾಡು ಹೇಳತೀರದ್ದಾಗಿತ್ತು.

ಪೊಲೀಸರ ಸರ್ಪಗಾವಲಿನಲ್ಲಿ ಮಳಿಗೆ ಉದ್ಘಾಟಿಸಿದ ನಟ ದರ್ಶನ್‌ ಕೆಲವೇ ನಿಮಿಷಗಳಲ್ಲಿ ನಿರ್ಗಮಿಸಿದರು. ವೇದಿಕೆಯನ್ನೇರಿ ಮಾತನಾಡಲಿದ್ದಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಯಿತು. ತಾವು ಬಂದಿದ್ದ ಕಾರಿನ ಬಾಗಿಲಿನ ಬಳಿ ನಿಂತು ಅಭಿಮಾನಿಗಳತ್ತ ಕೈಬೀಸಿ ಹೊರಟುಹೋದರು. 

Trending videos

Back to Top