CONNECT WITH US  

ಹತ್ತೇ ದಿನಗಳಲ್ಲಿ ಮನೆ: ಸಿಎಂ ಕುಮಾರಸ್ವಾಮಿ 

ಪುನರ್ವಸತಿ ಕಲ್ಪಿಸಲು ಸರ್ಕಾರದಿಂದ ಸಮರೋಪಾದಿಯ ಕಾರ್ಯಾಚರಣೆ

ಬೆಂಗಳೂರು: ಕೊಡಗಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಹತ್ತು ದಿನದಲ್ಲಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗಿನಲ್ಲಿ ಆಗಿರುವ ಅನಾಹುತ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣಕ್ಕೆ ಸುಮಾರು ಎರಡು ಸಾವಿರ ತಾತ್ಕಾಲಿಕ ಮನೆ ನಿರ್ಮಾಣ ಮಾಡಲಾಗುತ್ತಿದೆ. ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಮೇಲುಸ್ತುವಾರಿಯಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಕೊಡಗಿನಲ್ಲಿ 845 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 773 ಮನೆಗಳು ಭಾಗಶಃ  ಹಾನಿಯಾಗಿವೆ. 123 ಕಿ.ಮೀ. ರಸ್ತೆ ಹಾಳಾಗಿದ್ದು 58 ಸೇತುವೆ, 28 ಸರ್ಕಾರಿ ಕಟ್ಟಡಗಳು ಹಾಗೂ 3800 ವಿದ್ಯುತ್‌ ಕಂಬಗಳು ಹಾನಿಗೊಳಗಾಗಿವೆ. ಸದ್ಯ ಸಂಕಷ್ಟದಲ್ಲಿದ್ದವ ಎಲ್ಲರನ್ನೂ  ರಕ್ಷಿಸಲಾಗಿದೆ. ಪುನರ್ವಸತಿ ಕಾರ್ಯ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿ, ಅಗ್ನಿಶಾಮಕ ದಳದ ಡಿಜಿಪಿ, ಇಬ್ಬರು ಎಡಿಜಿಪಿ, ಇಬ್ಬರು ಅಪರ ಮುಖ್ಯ ಕಾರ್ಯದರ್ಶಿಗಳು, ಎಲ್ಲರೂ ಇನ್ನೂ ಒಂದು ವಾರ ಕೊಡಗಿನಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ. ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆಯ ಪ್ರೊಬೆಷನರಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನೂ ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇನ್ನೆರಡು ದಿನ ಬಿಟ್ಟು ನಾನು ಮತ್ತೆ ಕೊಡಗಿಗೆ ತೆರಳಿ ಪರಿಹಾರ ಕಾರ್ಯ ಪರಿಶೀಲನೆ ನಡೆಸುವುದಾಗಿ  ತಿಳಿಸಿದರು.

3800 ಪರಿಹಾರ:
ಕೊಡಗಿನಲ್ಲಿ  ರಸ್ತೆ, ಮನೆ ಸೇರಿದಂತೆ ಸುಮಾರು 2 ರಿಂದ 3 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಅಡಿಕೆ, ಕಾಫಿ, ಮೆಣಸಿನ ಕಾಳು ಸೇರಿ ಸಾಕಷ್ಟು ಬೆಳೆ ನಷ್ಟವಾಗಿವೆ. ನಿರಾಶ್ರಿತರಾಗಿರುವ ಪ್ರತಿ ಕುಟುಂಬಕ್ಕೂ ಜೀವನಕ್ಕೆ ವಸ್ತುಗಳನ್ನು ಖರೀದಿಸಲು ಸರ್ಕಾರದಿಂದ 3800 ರೂ. ಪರಿಹಾರ ನೀಡಲಾಗುವುದು.

ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಕೆಜಿ ಪಾಮ್‌ ಆಯಿಲ್‌, 1 ಕೆಜಿ ತೊಗರಿ ಬೇಳೆ, 1 ಲೀಟರ್‌ ಸೀಮೆ ಎಣ್ಣೆ  ತಕ್ಷಣಕ್ಕೆ ವಿತರಿಸಲಾಗುವುದು. ಆ ನಂತರ ಬೆಳೆ, ಮನೆ, ರಸ್ತೆ ಸೇರಿದಂತೆ ಒಟ್ಟು ಹಾನಿಯ ಮೌಲ್ಯಮಾಪನ ಮಾಡಿ ಪರಿಹಾರ ನೀಡಲಾಗುವುದು. ನಂತರ ಕೇಂದ್ರ ಸರ್ಕಾರದಿಂದಲೂ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕೊಡಗಿನಲ್ಲಿ 41 ಹಾಗೂ ದಕ್ಷಿಣ ಕನ್ನಡದಲ್ಲಿ 9 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 6620 ಸಂತ್ರಸ್ಥರು ಪರಿಹಾರ ಕೇಂದ್ರದಲ್ಲಿದ್ದಾರೆ. ಪರಿಹಾರ ಕೇಂದ್ರದಲ್ಲಿ ಹಾಲು, ಕುಡಿಯುವ ನೀರು ಒದಗಿಸಲಾಗಿದೆ. ಬಿಬಿಎಂಪಿಯಿಂದ 120 ಸಂಚಾರಿ ಶೌಚಾಲಯಗಳನ್ನು ಕಳುಹಿಸಿಕೊಡಲಾಗಿದೆ. ನಿರಾಶ್ರಿತರಿಗೆ ತಕ್ಷಣವೇ ತಕ್ಷಣವೇ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಪುಸ್ತಕ, ವಿಶೇಷ ತರಗತಿ:ಕೊಡಗು ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ಮಕ್ಕಳಿಗೆ ಶಾಲೆಗಳಿಗೆ ರಜೆ ನೀಡಲಾಗಿದ್ದು, ಪ್ರವಾಹದಲ್ಲಿ ಮಕ್ಕಳು ಪಠ್ಯ ಪುಸ್ತಕ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ.ಅವರಿಗೆ ತಕ್ಷಣ ಸರ್ಕಾರದಿಂದ ಪಠ್ಯ ಪುಸ್ತಕ ಹಾಗೂ ಇಪ್ಪತ್ತು ದಿನ ವಿಶೇಷ ತರಗತಿಗಳನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಹಿಮಾಚಲ ಪ್ರದೇಶದಿಂದ ತಜ್ಞರ ತಂಡ
ಬೆಂಗಳೂರು
: ಕೊಡಗು ಭಾಗದಲ್ಲಿ ಸಂಭವಿಸುತ್ತಿರುವ ಭೂ ಕುಸಿತ ಕುರಿತು ಅಧ್ಯಯನ ನಡೆಸಲು ಹಿಮಾಚಲ ಪ್ರದೇಶದಿಂದ ತಜ್ಞರನ್ನು ಕರೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಭೂ ಕುಸಿತ ಕುರಿತು ಅಧ್ಯಯನ ನಡೆಸುವ ಅಗತ್ಯವಿದ್ದು ಹಿಮಾಚಲಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ.ತಜ್ಞರನ್ನು ಕಳುಹಿಸಲು ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದರು.  

ಆ ಭಾಗದಲ್ಲಿ ಭೂಕಂಪನವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಹೈದರಾಬಾದ್‌ನಿಂದ ನ್ಯಾಷನಲ್‌ ಜಿಯಾಲಾಜಿಕಲ್‌ ಇನ್‌ಸ್ಟಿಟ್ಯೂಟ್‌ನಿಂದ ಭೂ ವಿಜ್ಞಾನಿಗಳನ್ನು ಕರೆಯಿಸಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಧಾನಿ, ರಾಷ್ಟ್ರಪತಿ ಕರೆ: ಕೊಡಗಿನಲ್ಲಿ ಆಗಿರುವ ಮಳೆಯ ಅನಾಹುತದ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.


Trending videos

Back to Top