CONNECT WITH US  

ಎಂಬಿಪಿ ಮನವೊಲಿಕೆ ಕಸರತ್ತು​​​​​​​

ಮಠಾಧೀಶರ ಮೂಲಕ ಒತ್ತಡ ಹೇರಲು ಮುಂದಾದ ಬಿಜೆಪಿ

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಬಿಜೆಪಿ ನಾಯಕರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಎಂ.ಬಿ. ಪಾಟೀಲರನ್ನು ಮಠಾಧೀಶರ ಮೂಲಕ ಪಕ್ಷಕ್ಕೆ ಸೆಳೆಯಲು ಕಸರತ್ತು ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಎಂ.ಬಿ. ಪಾಟೀಲ್‌ ಇತ್ತ ಸಂಪುಟಕ್ಕೂ ಸೇರಲಾಗದೇ, ಮಠಾಧೀಶರ ಒತ್ತಡವನ್ನೂ ನಿರಾಕರಿಸಲಾಗದೇ ಗೊಂದಲಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ರಾಜ್ಯ ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶೀಘ್ರ ಸಂಪುಟ ವಿಸ್ತರಣೆ ಮಾಡಬೇಕು. ಆಗಲೂ ತಮಗೆ ಸಚಿವ ಸ್ಥಾನ ನೀಡದಿದ್ದರೆ, ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಎಂ.ಬಿ. ಪಾಟೀಲ್‌ಗೆ ಸಚಿವ ಸ್ಥಾನ ಸಿಗದಿದ್ದಾಗ ಪಕ್ಷಕ್ಕೆ ಸೆಳೆಯಲು ಒಂದು ಹಂತದ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೇ ಮೌನವಹಿಸಿದ್ದ  ಪಾಟೀಲ್‌ರನ್ನು ಈಗ ಮಠಾಧೀಶರ ಮೂಲಕ ಮನವೊಲಿಸುವ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ನಾಯಕರ ವಿರುದ್ಧ ಮುನಿಸು: ರಾಜ್ಯ ಕಾಂಗ್ರೆಸ್‌ ನಾಯಕರು ಸಂಪುಟ ವಿಸ್ತರಣೆಗೆ ಮೀನ ಮೇಷ ಎಣಿಸುತ್ತಿರುವುದು ಎಂ.ಬಿ.ಪಾಟೀಲ್‌ ಸೇರಿದಂತೆ ಅನೇಕ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಾಗತೊಡಗಿದೆ. ಇದರ ಲಾಭ ಪಡೆಯಲು ಬಿಜೆಪಿ ನಾಯಕರು ಎಂ.ಬಿ. ಪಾಟೀಲ್‌, ಬಿ.ಕೆ. ಸಂಗಮೇಶ್‌, ಬಿ.ಸಿ. ಪಾಟೀಲ್‌ ಸೇರಿದಂತೆ ಲಿಂಗಾಯತ ಶಾಸಕರ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಸಂಖ್ಯಾ ಬಲದ ಆಧಾರದ ಮೇಲೆ ಸರ್ಕಾರ ತಾನಾಗಿಯೇ ಪತನವಾಗಲಿದೆ ಎನ್ನುವ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜ್ಯ ಬಿಜೆಪಿ ನಾಯಕರು 16 ಕಾಂಗ್ರೆಸ್‌ ಶಾಸಕರ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೈಗೆ ನೀಡಿದ್ದಾರೆ ಎನ್ನಲಾಗಿದ್ದು, ಆದರೆ, ಅಮಿತ್‌ ಶಾ ತಕ್ಷಣಕ್ಕೆ ಆಪರೇಶನ್‌ ಕಮಲ ನಡೆಸಲು ಹಿಂದೇಟು ಹಾಕಿದ್ದಾರೆ. ಬಿಜೆಪಿ ಸರ್ಕಾರ ಉರುಳಿಸಿತು ಎನ್ನುವ ಆರೋಪ ಬರದಂತೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ರಾಜೀನಾಮೆಯಿಂದಲೇ ಸರ್ಕಾರ ಪತನವಾಯಿತು ಎಂಬ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಲು ಅಮಿತ್‌ ಶಾ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲದೇ, ರಾಜ್ಯ ಬಿಜೆಪಿ ನಾಯಕರು ನೀಡಿರುವ ಪಟ್ಟಿಯಲ್ಲಿರುವ ಎಲ್ಲರ ಬಗ್ಗೆಯೂ ಅಮಿತ್‌ ಶಾ ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗುತ್ತಿದೆ.  ಕೆಲವರು ರಾಜಿನಾಮೆ ನೀಡಿದರೂ ಭವಿಷ್ಯದಲ್ಲಿ ಪಕ್ಷಕ್ಕೆ ಅವರಿಂದ ಆಗುವ ಲಾಭ ನಷ್ಟದ ಬಗ್ಗೆಯೂ ಅಮಿತ್‌ ಶಾ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.ಬಿಜೆಪಿಯ ಹಿರಿಯ ನಾಯಕರಾದ ಪ್ರಭಾಕರ ಕೋರೆ ಹಾಗೂ ವಿಜಯ ಸಂಕೇಶ್ವರ್‌ ಕೂಡ ಎಂ.ಬಿ. ಪಾಟೀಲರ ಮನವೊಲಿಸುವ ಪ್ರಯತ್ನಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


Trending videos

Back to Top