CONNECT WITH US  

ಆ.25ರಿಂದ ಗುರುರಾಯರ ಆರಾಧನೆ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ಆ.25 ರಿಂದ 31ವರೆಗೆ ಜರುಗಲಿದ್ದು, ಈ ನಿಮಿತ್ತ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

25ರಿಂದ ಸಪ್ತರಾತ್ರೋತ್ಸವಕ್ಕೆ ಚಾಲನೆ ಸಿಗಲಿದ್ದು, ಆ.27ರಂದು ಪೂರ್ವಾರಾಧನೆ,28ರಂದು ಮಧ್ಯಾರಾಧನೆ ಹಾಗೂ 29ರಂದು ಉತ್ತರಾರಾಧನೆ ಜರುಗಲಿದೆ. ಅದೇ ದಿನ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಈ ಬಾರಿಯೂ ಆರಾಧನಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಸುಮಾರು 4 ನಾಲ್ಕು ಲಕ್ಷಕ್ಕೂ ಅ ಧಿಕ ಪರಿಮಳ ಪ್ರಸಾದದ ಸಿದ್ಧತೆ ನಡೆದಿದೆ. ತುಂಗಭದ್ರಾ ನದಿ ಪಾತ್ರದಲ್ಲಿ  ಸ್ನಾನಘಟ್ಟ ನಿರ್ಮಾಣ, ವಸ್ತ್ರ ಬದಲಾವಣೆಗೆ ಪ್ರತ್ಯೇಕ ಕೋಣೆ ನಿರ್ಮಿಸಲಾಗುತ್ತಿದೆ.

ಬೆಂಗಳೂರಿನ ಭಕ್ತರು ಕಳೆದೆರಡು ದಿನಗಳಿಂದ ಕ್ಷೇತ್ರದಲ್ಲಿ ಸ್ವತ್ಛತಾ ಕಾರ್ಯ ಕೈಗೊಂಡಿದ್ದಾರೆ. ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ರಾಯರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಮಠದ ಮುಖ್ಯದ್ವಾರಕ್ಕೆ ರಾಯರ ಅಂತರಂಗ ಭಕ್ತರಾದ ಬೆಂಗಳೂರಿನ ಉದ್ಯಮಿ ಎಚ್‌.ಜಿ. ರಂಗನಗೌಡ ಕೋಟಿ ರೂ.ವೆಚ್ಚದಲ್ಲಿ 350 ಕೆಜಿ ತೂಕದ ರಜತ ಹೊದಿಕೆ ಸಮರ್ಪಿಸುತ್ತಿದ್ದಾರೆ ಎಂದರು.

ಉದ್ಘಾಟನೆಗೆ ಸಿದ್ಧವಾದ ಆಸ್ಪತ್ರೆ: ಸುಜಯೀಂದ್ರ ವಸತಿ ಸಂಕೀರ್ಣದ 33 ಗೃಹಗಳನ್ನು ಆಧುನೀಕರಣಗೊಳಿಸಲಾಗಿದೆ. ವಸತಿ ಮುಂದೆ ಉದ್ಯಾನ ನಿರ್ಮಿಸಲಾಗಿದೆ. ಸುಜಯೀಂದ್ರ ತೀರ್ಥರ ಹೆಸರಿನಲ್ಲಿರುವ ವೈದ್ಯ ಶಾಲೆಯನ್ನು ಆಧುನೀಕರಣಗೊಳಿಸಲಾಗಿದೆ. ಅಲ್ಟ್ರಾಸೌಂಡ್‌, ಸ್ಕ್ಯಾನಿಂಗ್‌, ಆಕ್ಸಿಜನ್‌ ಪಾಯಿಂಟ್‌ ಸೇರಿ ಅತ್ಯಾಧುನಿಕ ಯಂತ್ರಗಳೊಂದಿಗೆ ಆಸ್ಪತ್ರೆ ಸೇವೆಗೆ ಸಿದ್ಧಗೊಂಡಿದ್ದು, ಆರಾಧನಾ ಮಹೋತ್ಸವ ದಲ್ಲಿ ಉದ್ಘಾಟಿಸಲಾಗುವುದು. ಮಂತ್ರಾಲಯದ ಬಸ್‌ ನಿಲ್ದಾಣದ ಎದುರಿನಲ್ಲಿ ಮಠದ ನಿವೇಶನಗಳಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವನ್ನು ಆ.28 ರಂದು ಉದ್ಘಾಟಿಸಲಾಗುವುದು. ಮಠದ ಎದುರಿಗಿರುವ ನಿವೇಶನದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಕೊಡಗು, ಕೇರಳಕ್ಕೆ ತಲಾ 15 ಲಕ್ಷ ದೇಣಿಗೆ: ಕೊಡಗು ಹಾಗೂ ಕೇರಳದ ಸಂತ್ರಸ್ತರ ನೆರವಿಗಾಗಿ ಪ್ರತ್ಯೇಕವಾಗಿ ತಲಾ 15 ಲಕ್ಷ ರೂ.ದೇಣಿಗೆ ನೀಡಲಾಗುತ್ತಿದೆ.ಈಗಾಗಲೇ ನಮ್ಮ ಮಠದ ಪ್ರತಿನಿಧಿಗಳು ಕೊಡಗಿಗೆ ಭೇಟಿ ನೀಡಿ ನೆರವು ಕಾರ್ಯದಲ್ಲಿ ತೊಡಗಿದ್ದಾರೆ. ತಾತ್ಕಾಲಿಕ ಪರಿಹಾರಾರ್ಥ 15 ಲಕ್ಷ ರೂ. ಧನಸಹಾಯ, ಅಗತ್ಯ ದವಸಧಾನ್ಯಗಳನ್ನು ನೀಡಲಾಗುವುದು. ಚಾತುರ್ಮಾಸ್ಯ ಮುಗಿದ ಬಳಿಕ ಖುದ್ದು ಭೇಟಿ ನೀಡಿ ಶಾಶ್ವತ ಕಾರ್ಯಕ್ಕೆ ಸೂಚನೆ ನೀಡಲಾಗುವುದು. ಈ ಕಾರಣಕ್ಕೆ ಈ ಬಾರಿ ಆರಾಧನೆಯಲ್ಲಿ ಆಡಂಬರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.

ವಿಶೇಷ ದೀಪಾಲಂಕಾರ: ಈ ಬಾರಿ ಮಠಕ್ಕೆ ವಿಶೇಷ ದೀಪಾಲಂಕಾರ ಮಾಡಿದ್ದು, ಬೆಂಗಳೂರು ಮೂಲದ ಶಂಕರ್‌ ಎಲೆಕ್ಟ್ರಿಕಲ್ಸ್‌ನ ರಾಜೇಶ ಶೆಟ್ಟಿ ಎನ್ನುವವರು ದೇಣಿಗೆ ನೀಡಿದ್ದಾರೆ. ವರ್ಷವಿಡೀ ದಿನಕ್ಕೊಂದು ಬಣ್ಣದಲ್ಲಿ ರಾಯರ ಮಠವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದರು.

ಆರಾಧನೆ ವೇಳೆಯಲ್ಲೇ ಮಂತ್ರಾಲಯದಲ್ಲಿ ಆರ್‌ ಎಸ್‌ಎಸ್‌ ಬೈಠಕ್‌ ನಡೆಯುತ್ತಿದೆ. ಈ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಬರುತ್ತಿದ್ದಾರೆ. ಅವರು ಆ ವೇಳೆ ಮಠಕ್ಕೆ ಬಂದು ಗುರುರಾಯರ ಆಶೀರ್ವಾದ ಪಡೆಯುವ ಸಾಧ್ಯತೆಗಳಿವೆ. ಆದರೆ, ಸಭೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.
- ಶ್ರೀ ಸುಬುಧೇಂದ್ರ ತೀರ್ಥರು, ಪೀಠಾಧಿಪತಿ ಮಂತ್ರಾಲಯ ಮಠ

Trending videos

Back to Top