CONNECT WITH US  

ಪೋಕ್ಸೋ ಪ್ರಕರಣ ವರ್ಷವೂ ಉಲ್ಬಣ

ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಶೇ.10ರಷ್ಟೂ ಇಲ್ಲ

ಬೆಂಗಳೂರು: ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ, ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಶೇ. 10ರಷ್ಟೂ ಇಲ್ಲ!

ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂಬ ನಿರ್ದೇಶನವಿದೆ. ಆದರೆ, ಪೋಕ್ಸೋ ಕಾಯ್ದೆ ಜಾರಿಗೆ ಬಂದ 2012ರಲ್ಲಿ ದಾಖಲಾದ ಆರು ಪ್ರಕರಣಗಳಲ್ಲಿ ಐದು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಒಂದು ಪ್ರಕರಣ ಮಾತ್ರ ಇತ್ಯರ್ಥಗೊಂಡು ಆರೋಪಿಗೆ ಶಿಕ್ಷೆಯಾಗಿದೆ.

ಪೊಲೀಸ್‌ ಇಲಾಖೆ ನೀಡುವ ಅಂಕಿ ಅಂಶಗಳ ಪ್ರಕಾರ 2012ರಿಂದ ಇದುವರೆಗೂ (ಜುಲೈ 31) ಪೋಕ್ಸೋ ಕಾಯ್ದೆಯಡಿ 1,600 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶಿಕ್ಷೆಯಾಗಿರುವುದು ಕೇವಲ 67 ಪ್ರಕರಣಗಳಲ್ಲಿ ಮಾತ್ರ. 1,157 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, 96 ಪ್ರಕರಣಗಳು ಪೊಲೀಸ್‌ ತನಿಖಾ ಹಂತದಲ್ಲಿ ಇವೆ. 31 ಪ್ರಕರಣಗಳಲ್ಲಿ ಬಿ ರಿಪೋರ್ಟ್‌ (ಸೂಕ್ತ ಸಾûಾ$Âಧಾರಗಳಿಲ್ಲದ ಪ್ರಕರಣಗಳು) ಸಲ್ಲಿಸಲಾಗಿದೆ.

ಇದರ ಪರಿಣಾಮ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ತಡೆಗಟ್ಟುವ ಉದ್ದೇಶದಿಂದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದೆಯಾದರೂ ಅದರ ಉದ್ದೇಶ ಮಾತ್ರ ಈಡೇರುತ್ತಿಲ್ಲ. ಆದರೆ, ವರ್ಷದಿಂದ ವರ್ಷಕ್ಕೆಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇದೆ. ಈ ಪೈಕಿ ಕೋರ್ಟ್‌ ಮತ್ತು ಪೊಲೀಸ್‌ ಠಾಣೆಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳದ್ದೇ ಸಿಂಹಪಾಲು. ಪ್ರಕರಣ ಇತ್ಯರ್ಥವಾಗದಿರಲು ಸಂತ್ರಸ್ತರು ಹಾಗೂ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಆರೋಪಿಸಿದರೆ, ತನಿಖಾಧಿಕಾರಿಗಳು ಶೀಘ್ರ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸುತ್ತಿಲ್ಲ. ಹೀಗಾಗಿ ಇತ್ಯರ್ಥ ಸಾಧ್ಯವಾಗುತ್ತಿಲ್ಲ ಎಂದು ವಕೀಲರು ದೂರುತ್ತಾರೆ.ಮೂಲಗಳ ಪ್ರಕಾರ ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಪೋಕ್ಸೋ ಪ್ರಕರಣಗಳ ತನಿಖೆ ಬಗ್ಗೆ ಪೊಲೀಸರಿಗೆ ಸರಿಯಾದ ತರಬೇತಿ ಇಲ್ಲದಿರುವುದು ಪ್ರಕರಣ ಇತ್ಯರ್ಥಗೊಳ್ಳದೇ ಇರಲು ಮತ್ತು ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಸಂತ್ರಸ್ತರು ಹಾಜರಾಗುತ್ತಿಲ್ಲ
ಆರಂಭದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಸಂತ್ರಸ್ತರು ಮತ್ತು ಪೋಷಕರು, ಅನಂತರ ತನಿಖೆಗೆ ಸಹಕಾರ ನೀಡುತ್ತಿಲ್ಲ. ಕೆಲವೊಮ್ಮೆ ಸ್ಥಳ ಬದಲಾವಣೆ ಮಾಡುತ್ತಾರೆ. ಅಂತಹ ಸಂತ್ರಸ್ತರನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸುವುದೇ ದೊಡ್ಡ ಸವಾಲಾಗಿದೆ. ಕೆಲ ಸಂದರ್ಭದಲ್ಲಿ ಆರೋಪಿಗಳ ಬೆದರಿಕೆ ಹಾಗೂ ಹಣದ ಆಮಿಷಕ್ಕೆ ಒಳಗಾಗಿ ಸಂತ್ರಸ್ತರು ಕೋರ್ಟ್‌ಗೆ ಹಾಜರಾಗದೆ ದೂರ ಉಳಿಯುತ್ತಾರೆ. ಮತ್ತೂಂದೆಡೆ ಪೊಲೀಸರು ತ್ವರಿತಗತಿಯಲ್ಲಿ ಪ್ರಕರಣಗಳ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸುತ್ತಿಲ್ಲ. ಸಂತ್ರಸ್ತರು ಹಾಗೂ ಆರೋಪಿಗಳನ್ನು ಸರಿಯಾದ ಸಮಯಕ್ಕೆ ಕೋರ್ಟ್‌ಗೆ ಹಾಜರು ಪಡಿಸುತ್ತಿಲ್ಲ ಎನ್ನುವುದು ಇಂತಹ ಪ್ರಕರಣಗಳ ಪರ ವಕಾಲತ್ತು ವಹಿಸುತ್ತಿರುವ ವಕೀಲರು ಹೇಳುತ್ತಾರೆ.

ಸುಪ್ರೀಂ ಸೂಚನೆ
ವರ್ಷದಿಂದ ವರ್ಷಕ್ಕೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳ ವಿಚಾರಣೆಗೆ ತ್ವರಿತ ಹಾಗೂ ವಿಶೇಷ ಕೋರ್ಟ್‌ಗಳನ್ನು ತೆರೆದು ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಜತೆಗೆ ಪೊಲೀಸರಿಗೂ ನಿಗದಿತ ಸಮಯದೊಳಗೆ ಆರೋಪಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು. ಆದರೂ ಪ್ರಕರಣಗಳು ಇತ್ಯರ್ಥವಾಗುತ್ತಿಲ್ಲ.

2018ರ ಜನವರಿಯಿಂದ ಜುಲೈ 31ರವರೆಗೆ ಬೆಂಗಳೂರು ನಗರದಲ್ಲಿ 207 ಪೋಕ್ಸೋ ಕಾಯ್ದೆ ಪ್ರಕರಣ ದಾಖಲಾಗಿವೆ. ಈ ಪೈಕಿ 75 ಪ್ರಕರಣಗಳು ತನಿಖಾ ಹಂತದಲ್ಲಿದ್ದು, 132 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಕ್ಸೋ ಪ್ರಕರಣಗಳು ಬಹುಬೇಗ ಇತ್ಯರ್ಥವಾಗದಿರಲು ನಿರ್ದಿಷ್ಟ ಕಾರಣವೇನೂ ಇಲ್ಲ. ಪ್ರಕರಣಗಳ ತ್ವರಿತ ತನಿಖೆ ನಡೆಸಿ, ಸಂತ್ರಸ್ತರು ಹಾಗೂ ಆರೋಪಿಗಳ ಹೇಳಿಕೆ ದಾಖಲಿಸಿ ಆರೋಪಪಟ್ಟಿ ಸಲ್ಲಿಸುವಂತೆ ಎಲ್ಲ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಸೀಮಂತ್‌ ಕುಮಾರ್‌ ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ

ಸಂತ್ರಸ್ತರು ಹಾಗೂ ಪೋಷಕರು ಸರಿಯಾದ ರೀತಿಯಲ್ಲಿ ವಿಚಾರಣೆಗೆ ಸಹಕರಿಸದಿರುವುದು ಹಾಗೂ ತನಿಖಾಧಿಕಾರಿಗಳು ನಿಗದಿತ ಸಮಯಕ್ಕೆ ಆರೋಪಪಟ್ಟಿ ಸಲ್ಲಿಸದಿರುವುದೇ ಪೋಕ್ಸೋ ಕಾಯ್ದೆ ಇತ್ಯರ್ಥವಾಗದಿರಲು ಪ್ರಮುಖ ಕಾರಣ.
-ಶಿವರಾಮ್‌, ಬಿ.ಆರ್‌, ವಕೀಲರು

ವರ್ಷ        ಪ್ರಕರಣಗಳು        ಶಿಕ್ಷೆ    ಖುಲಾಸೆ
2012          6                  1          0
2013        130               16        55
2014        293               28        96
2015        273              10         55
2016        301              04         28
2017        390              08         00
2018        270              00         00

- ಮೋಹನ್‌ ಭದ್ರಾವತಿ

Trending videos

Back to Top