CONNECT WITH US  

ಸಾಲಮನ್ನಾ ಸಂಕಷ್ಟಕ್ಕೆ ರೈತ ಕಲ್ಯಾಣ ತೆರಿಗೆ

ಧಾರವಾಡದ ಸಿಎಂಡಿಆರ್‌ ಸಂಸ್ಥೆಯಿಂದ ಸರ್ಕಾರಕ್ಕೆ ಸಲಹೆ; ವರ್ಷಕ್ಕೆ 18 ಸಾವಿರ ಕೋಟಿ ರೂ.ತೆರಿಗೆ ಸಂಗ್ರಹ

ಸಾಂದರ್ಭಿಕ ಚಿತ್ರ.

ಧಾರವಾಡ: ರೈತರ ಸಾಲಮನ್ನಾದಿಂದಾಗಿ ಸರ್ಕಾರಕ್ಕೆ ಆರ್ಥಿಕ ಹೊರೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಬ್ಯಾಂಕ್‌ಗಳಿಗೆ ಕಷ್ಟ, ಮಾಡದೇ ಹೋದರೆ ಬರಗಾಲದಿಂದ ಕಂಗೆಟ್ಟ ರೈತರಿಗೆ ಇನ್ನೂ ಕಷ್ಟ. ಒಟ್ಟಿನಲ್ಲಿ ಸರ್ಕಾರಕ್ಕೆ ಸಂಕಷ್ಟ.

ಹೀಗಾಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣ ಅಥವಾ ಬೇರೆ ಪರಿಹಾರ ಇಲ್ಲವೇ? ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಸರ್ಕಾರಕ್ಕೆ ಧಾರವಾಡದಲ್ಲಿನ ಸಿಎಂಡಿಆರ್‌ (ಸೆಂಟರ್‌ ಫಾರ್‌ ಮಲ್ಟಿ ಡಿಸಿಪ್ಲೆನರಿ ಆ್ಯಂಡ್‌ ರಿಸರ್ಚ್‌) ಸಂಸ್ಥೆ ಸಂಪನ್ಮೂಲ ಕ್ರೋಡೀಕರಣಕ್ಕೆ ರೈತ ಕಲ್ಯಾಣ ತೆರಿಗೆ ವಿಧಿಸುವ ವಿನೂತನ ಸಲಹೆ ನೀಡಿದೆ.

30 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಏಕಾಏಕಿ ಮನ್ನಾ ಮಾಡಿದರೆ ಬ್ಯಾಂಕುಗಳು ಆರ್ಥಿಕವಾಗಿ ದಿವಾಳಿಯಾಗುವ ಸ್ಥಿತಿಗೆ ಬರುತ್ತವೆ. ಅವುಗಳನ್ನು ಉಳಿಸಿಕೊಂಡು, ರೈತರ ಸಾಲ ಮನ್ನಾ ಮಾಡುವುದಕ್ಕೆ ಇರುವ ಏಕೈಕ ಪರಿಹಾರ ಎಂದರೆ ರೈತ ಕಲ್ಯಾಣ ತೆರಿಗೆ. ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ಹಾಕಿದರೆ ನಗರವಾಸಿಗಳು ರೈತ ಸಂಕುಲಕ್ಕೆ ಶಾಪ ಹಾಕುತ್ತಾರೆ. ಇನ್ನೊಂದೆಡೆ ಇಂಧನ ಬೆಲೆ ಏರಿದಂತೆ ಮಾರುಕಟ್ಟೆಯಲ್ಲಿನ ಅಗತ್ಯ ವಸ್ತುಗಳ ಬೆಲೆಯೂ ಏರುತ್ತವೆ.

ಹೀಗಾಗಿ, ರೈತರು ಉತ್ಪಾದಿಸುವ ಆಹಾರಧಾನ್ಯ, ಹಾಲು, ಕಬ್ಬು ಸೇರಿ ಅನೇಕ ಕೃಷಿ ಉತ್ಪನ್ನಗಳನ್ನು ಅವಲಂಬಿಸಿಯೇ ಶೇ.21ರಷ್ಟು ಕೈಗಾರಿಕೆಗಳು ನಡೆಯುತ್ತವೆ. ಕೃಷಿ ಉತ್ಪನ್ನಕ್ಕೆ ಯೋಗ್ಯ ಬೆಲೆ ಸಿಕ್ಕದೆ ಹೋದರೂ ಮೌಲ್ಯವರ್ಧನೆ ನಂತರ ಅವುಗಳಿಗೆ ತೆರಿಗೆ ವಿಧಿಸಲಾಗುತ್ತಿದೆ. ಇಂತಹ ತೆರಿಗೆ ಭಾಗವಾಗಿಯೇ ಒಂದಿಷ್ಟು ಪ್ರಮಾಣವನ್ನು ರೈತ ಕಲ್ಯಾಣ ತೆರಿಗೆ ಎಂದು ಕಾಯ್ದಿರಿಸಿ ರೈತರನ್ನು ಸಂಪೂರ್ಣ ಸಾಲದಿಂದ ಋಣಮುಕ್ತರನ್ನಾಗಿ ಮಾಡಬಹುದು. ಕೃಷಿ ಉತ್ಪನ್ನದಿಂದ ಸಿದ್ಧಗೊಳ್ಳುವ ಎಲ್ಲಾ ವಸ್ತುಗಳ ಮೇಲೂ ರೈತ ಕಲ್ಯಾಣ ತೆರಿಗೆ ಹಾಕಿದರೆ ಒಂದೇ ವರ್ಷದಲ್ಲಿ 18 ಸಾವಿರ ಕೋಟಿ ರೂ.ಗಳಷ್ಟು ಸಂಪನ್ಮೂಲ ಕ್ರೋಡೀಕರಿಸಲು ಸಾಧ್ಯವಿದೆ ಎಂದು ಕೃಷಿ ತಜ್ಞ ಡಾ|ಎಸ್‌.ಎ.ಪಾಟೀಲ್‌ ನೇತೃತ್ವದ ತಜ್ಞರ ಸಮಿತಿ ಇರುವ ಧಾರವಾಡದ ಸಿಎಂಡಿಆರ್‌ ಸಂಸ್ಥೆ ಸರ್ಕಾರಕ್ಕೆ ಸಲಹೆ ನೀಡಿದೆ.
ಅಲ್ಲದೆ, ರಾಜ್ಯದಲ್ಲಿ ಸಂಗ್ರಹಗೊಳ್ಳುವ ಒಟ್ಟು ಜಿಎಸ್‌ಟಿಯಲ್ಲಿ ಕೇಂದ್ರದ ಮತ್ತು ರಾಜ್ಯದ ಪಾಲಿನಲ್ಲಿ ಶೇ.2 ಅಥವಾ 3ರಷ್ಟು ಹಣವನ್ನು ರೈತ ಕಲ್ಯಾಣ ತೆರಿಗೆ ಎಂದು ಪರಿವರ್ತಿಸಿಕೊಂಡರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಎರಡೇ ವರ್ಷದಲ್ಲಿ ಸಂಪೂರ್ಣವಾಗಿ ಮನ್ನಾ ಮಾಡಲು ಸಾಧ್ಯವಿದೆ ಎಂದು ಆರ್ಥಿಕ ತಜ್ಞರು ಸಿಎಂಡಿಆರ್‌ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ರೈತ ಕಲ್ಯಾಣ ತೆರಿಗೆ ಎಂದು ಈಗಿರುವ ಜಿಎಸ್‌ಟಿಯಲ್ಲಿ ಶೇ.1ರಷ್ಟು ಹೆಚ್ಚಿಸುವ ಕುರಿತು ಕೇರಳ, ಮಹಾರಾಷ್ಟ್ರ ಸರ್ಕಾರಗಳಲ್ಲಿನ ರೈತ ಮುಖಂಡರು, ಕೃಷಿ ತಜ್ಞರು ಈಗಾಗಲೇ ಅಲ್ಲಿನ ಸರ್ಕಾರಗಳ ಗಮನ ಸೆಳೆದಿದ್ದಾರೆ.

ರೈತ ಕಲ್ಯಾಣ ತೆರಿಗೆ ಉತ್ತಮ ವ್ಯವಸ್ಥೆ. ಸಣ್ಣ-ದೊಡ್ಡ ರೈತರು ಎಂಬ ತಾರತಮ್ಯವಿಲ್ಲದೆ ಎಲ್ಲರ ಸಾಲಮನ್ನಾ ಆಗಲಿ. ಇದು ದೀರ್ಘ‌ ಕಾಲದಲ್ಲಿ ರೈತರು, ಕೃಷಿ ಮತ್ತು ಬ್ಯಾಂಕ್‌ನ್ನು ಸದೃಢಗೊಳಿಸುತ್ತದೆ.
- ಡಾ.ಎಸ್‌.ಎ.ಪಾಟೀಲ್‌, ವಿಶ್ರಾಂತ ಕುಲಪತಿ ಕೃಷಿ ವಿವಿ ಧಾರವಾಡ.

ಕೃಷಿ ಉತ್ಪನ್ನಗಳಿಂದಲೇ ಕೈಗಾರಿಕೆಗಳು ನಡೆಯುತ್ತವೆ. ಅಷ್ಟೇ ಅಲ್ಲ, ಒಟ್ಟಾರೆ ಕೃಷಿಯಿಂದ ಆಗುವ ಆರ್ಥಿಕ, ಪ್ರಾಕೃತಿಕ, ಜೀವ ವೈವಿಧ್ಯ ಸಂರಕ್ಷಣೆ ಪರಿಗಣಿಸಿ ರೈತ ಕಲ್ಯಾಣ ತೆರಿಗೆಯನ್ನು ಸರ್ಕಾರ ವಿಧಿಸುವುದು ಸೂಕ್ತ.
- ಶಂಕರಪ್ಪ ಅಂಬಲಿ, ರೈತ ಮುಖಂಡ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡಿದರೆ ಅವು ಮರಳಿ ಚೇತರಿಸಿಕೊಳ್ಳುವುದು ತುಂಬಾ ಕಷ್ಟ. ಹೀಗಾಗಿ, ಸಾಲಮನ್ನಾ ಮಾಡುವ ಮುಂಚೆ ಆ ಹಣವನ್ನು ಇನ್ನೊಂದು ಮೂಲದಿಂದ ಸಂಗ್ರಹಿಸಲು ರೈತ ಕಲ್ಯಾಣ ತೆರಿಗೆ ಸೂಕ್ತ ಎನಿಸುತ್ತದೆ.
- ಕೆ.ಈಶ್ವರ, ಲೀಡ್‌ ಬ್ಯಾಂಕ್‌ ಅಧ್ಯಕ್ಷ.

- ಬಸವರಾಜ ಹೊಂಗಲ್‌

Trending videos

Back to Top