CONNECT WITH US  

ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ​​​​​​​

ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಶ್ರೀ ಸುಬುಧೇಂದ್ರ ತೀರ್ಥರು ಅಶ್ವಪೂಜೆ ನೆರವೇರಿಸಿದರು.

ರಾಯಚೂರು: ಯತಿಕುಲ ತಿಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದ ನಿಮಿತ್ತ ಸಪ್ತರಾತ್ರೋತ್ಸವಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರಕಿತು.

ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಮೊದಲ ದಿನ ಪ್ರಾರ್ಥನೋತ್ಸವ, ಪ್ರವಚನ, ದಾಸವಾಣಿ, ಋಗ್ವೇದ ನಿತ್ಯನೂತನ ಉಪಕರ್ಮ, ನೃತ್ಯರೂಪಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಬೆಳಗ್ಗೆ ನೈರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಮತ್ತು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಸಲಾಯಿತು. ನಂತರ, ಪೀಠಾಧಿ ಪತಿಗಳು ನೂತನವಾಗಿ ನಿರ್ಮಿಸಿದ ದಶಾವತಾರ ಮಂಟಪ (ವಸಂತ ಶಿಲಾಮಂಟಪ)ದಲ್ಲಿ ಮೂಲ ರಘುಪತಿ ವೇದವಾಸ್ಯರ ಪೂಜೆ ನೆರವೇರಿಸುವ ಮೂಲಕ ಶಿಲಾಮಂಟಪವನ್ನು ರಾಯರ ಸೇವೆಗೆ ಸಮರ್ಪಿಸಿದರು.

ಮಠದ ಪ್ರವಚನ ಮಂದಿರದಲ್ಲಿ ಬೆಂಗಳೂರಿನ ವಿದ್ವಾನ್‌ ಡಿ.ಧನಂಜಯಾಚಾರ್ಯ ಮತ್ತು ಹೈದರಾಬಾದ್‌ನ ವಿದ್ವಾನ್‌ ಬಿ.ಇ.ನಾಗೇಂದ್ರ ಪ್ರಸಾದಾಚಾರ್ಯರಿಂದ ಪ್ರಾತಃ ಸಂಕಲ್ಪ ಗದ್ಯ, ಮಹಾಭಾರತ ತಾತ್ಪರ್ಯ ನಿರ್ಣಯ ಭಾವಸಂಗ್ರಹ ಎಂಬ ವಿಷಯದ ಮೇಲೆ ಪ್ರವಚನ ನಡೆಯಿತು. ಬಳಿಕ ಮಠದ ಪೂಜಾ ಮಂದಿರದಲ್ಲಿ ಹುಬ್ಬಳ್ಳಿಯ ವಿದ್ವಾನ್‌ ಶ್ರೀಹರಿ ಆಚಾರ್ಯ ವಲ್ವೇಕರ್‌ ಅವರಿಂದ ಭಾಗವತ ಸಪ್ತಾಹ ಮತ್ತು ಋಗ್ವೇದ ನಿತ್ಯನೂತನ ಉಪಕರ್ಮ ನಡೆಯಿತು.

ಸಂಜೆ ಮಠದ ಮುಂಭಾಗದ ಆವರಣದಲ್ಲಿ ಪೀಠಾಧಿ ಪತಿಗಳು ಧ್ವಜಾರೋಹಣ ನೆರವೇರಿಸಿದರು. ಬಳಿಕ, ಅಶ್ವಪೂಜೆ, ಗೋಪೂಜೆ, ಲಕ್ಷಿ ¾à ಹಾಗೂ ಧಾನ್ಯ, ತರಕಾರಿ, ಹಣ್ಣು ಪೂಜೆಗಳನ್ನು ನೆರವೇರಿಸಿದರು. ನಂತರ, ಪ್ರವಚನ ಮಂಟಪದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯರು ಅನುಗ್ರಹ ಸಂದೇಶ ನೀಡಿದರು.

ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಯಾವುದೇ ಒಂದು ಪ್ರಾಂತ, ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಯರು ಇಡೀ ವಿಶ್ವಕ್ಕೆ ಗುರುಗಳಿದ್ದಂತೆ. ಇಂತಹ ಅಪಾರ ಮಹಿಮೆಯುಳ್ಳ ಗುರುಗಳ ಆರಾಧನೆಯನ್ನು ಇಡೀ ವಿಶ್ವವೇ ದೊಡ್ಡ ಉತ್ಸವವಾಗಿ ಆಚರಿಸುತ್ತಿದೆ. ಮಠ ಸೇರಿದಂತೆ ದೇಶ, ವಿದೇಶಗಳಲ್ಲಿರುವ ರಾಯರ ಶಾಖಾ ಮಠಗಳು, ಪ್ರಾರ್ಥನಾ ಮಂದಿರಗಳಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಆರಾಧನೆಯನ್ನು ಆಚರಿಸುತ್ತಿದ್ದಾರೆ ಎಂದರು.

ಬಳಿಕ, ನಡೆದ ಪ್ರಾರ್ಥನೋತ್ಸವದಲ್ಲಿ ಮೀನಾಕ್ಷಿ ಸೋಮಸುಂದರಂ ಅವರಿಂದ ವೀಣಾವಾದನ, ಚೆನ್ನೈನ ಸಾಯಿ ಗಣೇಶ ಕಲಾಲಯ ಅವರಿಂದ ಭರತನಾಟ್ಯ, ಟಿಟಿಡಿ ತಿರುಪತಿಯ ಅನ್ನಮಾಚಾರ್ಯ ಪ್ರಾಜೆಕ್ಟ್‌ನ ವಿದ್ವಾನ್‌ ಸರಸ್ವತಿ ಪ್ರಸಾದ ಅವರಿಂದ ಅನ್ನಮಾಚಾರ್ಯರ ಕೀರ್ತನೆ ನಡೆಯಿತು.

ರಜತ ಬಾಗಿಲು ಲೋಕಾರ್ಪಣೆ
ಮಠದ ಮುಖ್ಯದ್ವಾರದ ಬೃಹತ್‌ ಬಾಗಿಲುಗಳಿಗೆ ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ರಜತದ ಹೊದಿಕೆಗಳನ್ನು ಆರಾಧನೆಯ ಮೊದಲ ದಿನ ಮುಕ್ತಗೊಳಿಸಲಾಯಿತು. ಸುಬುಧೇಂದ್ರ ತೀರ್ಥರು ಪೂಜೆ ಸಲ್ಲಿಸುವ ಮೂಲಕ ದ್ವಾರಗಳನ್ನು ಲೋಕಾರ್ಪಣೆ ಮಾಡಿದರು. 350 ಕೆಜಿ ರಜತದಿಂದ ಹೊದಿಕೆ ಮಾಡಲಾಗಿದೆ. ಈ ಬಾಗಿಲುಗಳನ್ನು ಬೆಂಗಳೂರು ಮೂಲದ ಎಚ್‌.ಡಿ.ರಂಗನಗೌಡ ಎನ್ನುವ ಭಕ್ತರು ಮಾಡಿಸಿದ್ದಾರೆ.

Trending videos

Back to Top