CONNECT WITH US  

ಅಕ್ರಮ ಮರಳು ಮಾಫಿಯಾ ನಿಯಂತ್ರಿಸಿ: ಕುಮಾರಸ್ವಾಮಿ 

ಬೆಂಗಳೂರು: ರಾಜ್ಯದಲ್ಲಿನ ಅಕ್ರಮ ಮರಳು ಮಾಫಿಯಾ ನಿಯಂತ್ರಿಸಿ ಸಾಮಾನ್ಯರಿಗೆ ಸುಲಭವಾಗಿ ಮರಳು ದೊರೆಯುವಂತೆ ಮಾಡಿ, ಸರ್ಕಾರಕ್ಕೆ ಸೂಕ್ತ ಆದಾಯ ಬರುವಂತೆ ಮರಳು ನೀತಿಯಲ್ಲಿ ಬದಲಾವಣೆಗೆ ಪ್ರಸ್ತಾಪ ಸಲ್ಲಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದಲ್ಲಿ ಅಕ್ರಮ ಮರಳು ದಂಧೆ ಹೆಚ್ಚಾಗಲು ಅಧಿಕಾರಿಗಳ ವರ್ತನೆಯೇ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳು ಮರಳು ಸಾಗಣೆಗೆ ನಿಯಂತ್ರಣ ಹೇರುತ್ತಿರುವುದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಎಲ್ಲ ಪಕ್ಷದ ಶಾಸಕರು ದೂರು ನೀಡಿದ್ದಾರೆ. ಆದರೆ, ಅಧಿಕಾರಿಗಳು ಸಣ್ಣಪುಟ್ಟ ಮರಳು ಸಾಗಣೆದಾರರನ್ನು ಬಂಧಿಸಿ ತೊಂದರೆ ಕೊಟ್ಟು, ಬಲಿಷ್ಠರಿಗೆ ಮುಕ್ತವಾಗಿ ಅಕ್ರಮ ಮರಳು ಸಾಗಣೆ ಮಾಡಲು ಅವಕಾಶ ಕೊಡುತ್ತಿರುವುದರಿಂದ ಅಕ್ರಮ ಮರಳು ಗಣಿಗಾರಿಕೆ ನಿರಂತರ ನಡೆಯುತ್ತಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಜೀವಂತವಾಗಿರುವುದಕ್ಕೆ ಮರಳು ಮಾಫಿಯಾ ಕಾರಣವಾಗಿದೆ. ಹೀಗಾಗಿ, ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಮಾಫಿಯಾ ತಡೆಗಟ್ಟಲು ಮರಳು ನೀತಿಗೆ ಸೂಕ್ತ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಎಂ.ಸ್ಯಾಂಡ್‌ಗೆ ಸಾರ್ವಜನಿಕರಿಂದ ಆಕ್ಷೇಪ: ಎಂ.ಸ್ಯಾಂಡ್‌ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿದೆ ಎಂದ ಅವರು, ಕಟ್ಟಡ ಕಲ್ಲು ಹಾಗೂ ಜಲ್ಲಿಯು ಕಡಿಮೆ ದರದಲ್ಲಿ ಸಿಗಲು ಈಗಿರುವ ವ್ಯವಸ್ಥೆ ಹಾಗೂ ಕಾಯ್ದೆಯ ಮಾರ್ಗಸೂಚಿಯಲ್ಲಿ ಸೂಕ್ತ ಬದಲಾವಣೆ ಮಾಡಿ ಹೊಸ ನೀತಿ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಮರಳು ಮತ್ತು ಕಲ್ಲುಗಣಿಗಾರಿಕೆ ಕುರಿತ ಕಾಯ್ದೆ ಹಾಗೂ ನಿಯಮಗಳ ಬಗ್ಗೆ ಅಧ್ಯಯನ ನಡೆಸಿದ ತಂಡದ ವರದಿ ಆಧರಿಸಿ ಮರಳು ನೀತಿಯಲ್ಲಿ ಮಾರ್ಪಾಡು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಭೆ ಬಳಿಕ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್‌, ಮರಳು ನೀತಿಯಲ್ಲಿ ಗೊಂದಲ ಇರುವುದರಿಂದ ವಿದೇಶದಿಂದ ಆಮದು ಮಾಡಿಕೊಂಡ ಮರಳು ಮಾರಾಟವಾಗದೆ ಬಂದರಿನಲ್ಲಿಯೇ ಉಳಿದುಕೊಂಡಿದೆ. 3 ಸಾವಿರ ಮೆಟ್ರಿಕ್‌ ಟನ್‌ ಮರಳನ್ನು ಆಮದು ಮಾಡಿಕೊಂಡಿದ್ದರೂ, 500 ಮೆಟ್ರಿಕ್‌ ಟನ್‌ ಮರಳು ಮಾರಾಟವಾಗಿಲ್ಲ. ಹೀಗಾಗಿ, ಹದಿನೈದು ದಿನದಲ್ಲಿ ಮರಳು ನೀತಿಯಲ್ಲಿ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ. ಕಡಿಮೆ ದರದಲ್ಲಿ ಎಲ್ಲರಿಗೂ ಉತ್ತಮ ಗುಣಮಟ್ಟದ ಮರಳು ದೊರೆಯುವಂತೆ ಮಾಡಲು ಮರಳು ನೀತಿಯಲ್ಲಿ ಸೂಕ್ತ ಬದಲಾವಣೆ ತರಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಂಶಪೂರ್‌, ಪಶುಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ, ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಉಪಸ್ಥಿತರಿದ್ದರು.

ನಾಳೆ ಮಧ್ಯಂತರ ವರದಿ ನೀಡಲು ಸಿಎಂ ಸೂಚನೆ
ಬೆಂಗಳೂರು:
ಅತಿವೃಷ್ಠಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟದ ಕುರಿತು ಸೋಮವಾರ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಲಿದ್ದು, ಆ.31ರಂದು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಚಟುವಟಿಕೆಗಳು ಮತ್ತು ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ರಾಜ್ಯದ ಮಳೆ ಪರಿಸ್ಥಿತಿ, ಬಿತ್ತನೆ ಪ್ರಮಾಣ, ಅತಿವೃಷ್ಠಿ,ಹಾಗೂ ಅನಾವೃಷ್ಟಿಯಿಂದಾಗಿರುವ ಬೆಳೆ ನಷ್ಟ, ಕೃಷಿ ಇಲಾಖೆಗೆ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. 

ಸಭೆ ಬಳಿಕ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ಬೆಳೆ ಸಾಲದ ಶೇ.12ರಷ್ಟು ಬಡ್ಡಿಯನ್ನು ನಾಲ್ಕು ಕಂತಿನಲ್ಲಿ ಪಾವತಿಸಿದರೂ, ಒಂದೇ ಹಂತದಲ್ಲಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡುವ ಕುರಿತು ಚರ್ಚಿಸಲಾಯಿತು ಎಂದು ಹೇಳಿದರು.

Trending videos

Back to Top