CONNECT WITH US  

ಕೊಡಗಿನಲ್ಲಿ ಡೆಂಗ್ಯೂ ಭೀತಿ

ಗ್ರಾಮೀಣ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾಗೃತಿ; ತುರ್ತು ಅಗತ್ಯ ಔಷಧಗಳಿಗಾಗಿ ಜಿಲ್ಲಾಡಳಿತಕ್ಕೆ ಮಾಹಿತಿ

ನಿರಾಶ್ರಿತರಿಗೆ ಪ್ರಾಣಿಕ್‌ ಹೀಲಿಂಗ್‌ ಚಿಕಿತ್ಸೆ.

ಮಡಿಕೇರಿ: ನಿರಂತರ ಸುರಿದ ಮಳೆ ಈಗ ಸ್ವಲ್ಪ ಬಿಡುವು ನೀಡಿದ್ದರಿಂದ ಮಡಿಕೇರಿ ಹಾಗೂ ಕುಶಾಲನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಭೀತಿ ಎದುರಾಗಿದೆ. ಇದಕ್ಕೆ ಕಾರಣ, ಕೆಲ ಪ್ರದೇಶಗಳಲ್ಲಿ ಡೆಂಗ್ಯೂ ಹರಡುವ ಸೊಳ್ಳೆಗಳು ಪತ್ತೆಯಾಗಿವೆ.

ಮಳೆ ಆಗಾಗ ಬರುತ್ತಲೇ ಇರುವುದರಿಂದ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಮೂರ್‍ನಾಲ್ಕು ದಿನಗಳ ಕಾಲ ಒಂದೇ ಕಡೆ ನೀರು ಸಂಗ್ರಹವಾಗುತ್ತಿರುವುದರಿಂದ ಡೆಂಗ್ಯೂ ಹರಡುವ ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಮಡಿಕೇರಿ ಹಾಗೂ ಕುಶಾಲನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ.

ನಿರಾಶ್ರಿತರ ಶಿಬಿರದಲ್ಲಿ ಇರುವವರಿಗೆ ಡೆಂಗ್ಯೂ ಜ್ವರ ಬಂದಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೂ, ಒಂದಿಬ್ಬರ ರಕ್ತದ ಸ್ಯಾಂಪಲ್‌ ಪಡೆದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನಿರಾಶ್ರಿತರ ಶಿಬಿರ ಸೇರಿ ನಗರ ವಾಸಿಗಳಿಗೆ ಇದರಿಂದ ಸಮಸ್ಯೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್‌ ತಿಳಿಸಿದ್ದಾರೆ.

ಪ್ರವಾಹದಿಂದ ಹಾನಿಯಾಗಿರುವ ಹಳ್ಳಿಗಳಲ್ಲಿ ನಿಂತಿರುವ ಕಸದ ರಾಶಿ ಹಾಗೂ ನೀರಿಗೆ ಬ್ಲೀಚಿಂಗ್‌ ಪೌಡರ್‌ ಹಾಗೂ ಫಿನಾಯಿಲ್‌ ಸಿಂಪಡಿಸುವ ಕಾರ್ಯ ಆರಂಭವಾಗಿದೆ. ತುರ್ತಾಗಿ 33 ಸಾವಿರ ಕೆ.ಜಿ. ಬ್ಲೀಚಿಂಗ್‌ ಪೌಡರ್‌ ಅಗತ್ಯವಿದ್ದು, ಸದ್ಯ ಸುಮಾರು 15 ಸಾವಿರ ಕೆ.ಜಿ. ಲಭ್ಯವಿದೆ. ಇನ್ನೂ 18 ಸಾವಿರ ಕೆ.ಜಿ.ಗೆ ಬೇಡಿಕೆ ಇಟ್ಟಿದ್ದೇವೆ. ಪ್ರತಿ ಗ್ರಾಮಕ್ಕೂ 300 ಕೆ.ಜಿ. ಬ್ಲೀಚಿಂಗ್‌ ಪೌಡರ್‌ ಹಾಗೂ ಒಂದೆರೆಡು ಕ್ಯಾನ್‌ ಫಿನಾಯಿಲ್‌ ತುರ್ತಾಗಿ ವಿತರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಜಾಗೃತಿ:
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಬಗ್ಗೆ ವ್ಯಾಪಕ ಅರಿವು  ಮೂಡಿಸುತ್ತಿದ್ದೇವೆ. ಎಸ್ಟೇಟ್‌ ಮಾಲೀಕರನ್ನು ಮನವೊಲಿಸಿ, ಎಸ್ಟೇಟ್‌ ಒಳಗೂ ನೀರು ನಿಲ್ಲದಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇವೆ. ಕಳೆದ ವರ್ಷ 248 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ  ಸಾಂಕ್ರಾಮಿಕ ರೋಗ ತಡೆಯುವುದು ಒಂದು ಸವಾಲಾಗಿದೆ. ಮಡಿಕೇರಿ ಮತ್ತು ಕುಶಾಲ ನಗರದಲ್ಲಿ ಡೆಂಗ್ಯೂ ಸೊಳ್ಳೆಗಳು ಪತ್ತೆಯಾಗಿವೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸುತ್ತಿದ್ದೇವೆ. ಆಶಾ ಕಾರ್ಯಕರ್ತರ ಮೂಲಕ ಗ್ರಾಮದ ಪ್ರತಿ ಮನೆಗೂ ನೀರು ಶುದ್ಧೀಕರಿಸುವ ಮಾತ್ರೆ ವಿತರಿಸಲಾಗುತ್ತಿದೆ ಎಂದಿದ್ದಾರೆ ವೈದ್ಯಾಧಿಕಾರಿಗಳು.

ಪ್ಲಾಸ್ಟಿಕ್‌ ಅಪಾಯ:
ನಿರಾಶ್ರಿತರ ಕೇಂದ್ರದಲ್ಲಿ ಕುಡಿಯುವ ನೀರಿನ ಬಾಟಲ್‌ ಅಪಾರ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ. ಖಾಲಿ ಬಾಟಲಿಗಳನ್ನು ಅಲ್ಲಲ್ಲಿ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಜಿಲ್ಲಾಡಳಿತದಿಂದಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕು. ಬಾಟಲಿಯೊಳಗೆ ಮಳೆ ನೀರು ಸಂಗ್ರಹವಾದರೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದೇವೆ ಎಂದು ಡಾ.ರಾಜೇಶ್‌ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಔಷಧ
ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ತರಾಗಿರುವವರ ಚಿಕಿತ್ಸೆಗೆ ಅಪಾರ ಪ್ರಮಾಣದಲ್ಲಿ ಔಷಧ ಸಾಮಗ್ರಿ ಬಂದಿದೆ. ಔಷಧ ಬಾಕ್ಸ್‌ಗಳನ್ನು ಪ್ರತ್ಯೇಕಿಸಲು 10 ಮಂದಿ ಫಾರ್ಮಸಿಸ್‌ಗಳನ್ನು ಕರೆಸಲಾಗಿದೆ. ಅವಧಿ ಮುಗಿದ ಔಷಧಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸ ಬಾರದು ಎಂದು ಎಲ್ಲರಿಗೂ ಎಚ್ಚರಿಸಲಾಗಿದೆ. ಫಾರ್ಮಸಿಸ್‌ಗಳು ಔಷಧ ಪ್ರತ್ಯೇಕಿಸುವ ಕಾರ್ಯ ಆರಂಭಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿರುವ ಔಷಧ ಸಾಮಗ್ರಗಳನ್ನು ಜಿಲ್ಲೆಯ 29 ಪ್ರಾಥಮಿಕ ಆರೋಗ್ಯ ಕೇಂದ್ರ, 7 ಸಮುದಾಯ ಆರೋಗ್ಯ ಕೇಂದ್ರ ಮತ್ತು 2 ತಾಲೂಕು ಆಸ್ಪತ್ರೆಗಳಿಗೆ ವಿತರಿಸಲು ಇಲಾಖೆ ನಿರ್ಧರಿಸಿದೆ.

ಪ್ಲಾಸ್ಟಿಕ್‌ ಸರ್ಜರಿ
ಕಾಟಗೇರಿಯಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ಒಂದು ದಿನ ಮಣ್ಣಿನ ಅಡಿಯಲ್ಲಿದ್ದ ಯತೀಶ್‌ ಅವರಿಗೆ ಎಡಗಾಲಿನ ಮೊಣಗಂಟಿಗೆ ಆಗಿರುವ ಗಾಯಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ. ಯತೀಶ್‌ ಅವರನ್ನು ಮಣ್ಣಿನಡಿಯಿಂದ ರಕ್ಷಣೆ ಮಾಡಿದ ತಕ್ಷಣ ಕುತ್ತಿಗೆ ನೋವಿನ ಚಿಕಿತ್ಸೆಗಾಗಿ ಮೈಸೂರಿನ ಗೋಪಾಲ ಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕುತ್ತಿಗೆ ನೋವಿಗೆ ಚಿಕಿತ್ಸೆ ನೀಡಿದರು. ಕಾಲಿನ ಗಾಯಕ್ಕೆ ಅಗತ್ಯ ಚಿಕಿತ್ಸೆ ನೀಡಲು ವಾಪಸ್‌ ಮಡಿಕೇರಿಗೆ ಕರೆತಂದಿದ್ದರು. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬೆಂಗಳೂರಿನ ವೈದ್ಯ ಡಾ.ಗುರುರಾಜ್‌ ಮೂಲಕ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ. ಈಗ ಯತೀಶ್‌ ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ರಾಜೇಶ್‌ ಮಾಹಿತಿ ನೀಡಿದರು.

ಆರೋಗ್ಯ ಸೇವೆ ನೀಡಲು ಮೈಸೂರು ಮತ್ತು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ 7 ಮಂದಿ ತಜ್ಞ ವೈದ್ಯರಿದ್ದಾರೆ. ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ, ಸೋಮವಾರಪೇಟೆ ಮೊದಲಾದ ಕಡೆ ಸೇವೆ ಸಲ್ಲಿಸಲು ನಿಯೋಜಿಸಲಾಗಿದೆ. ಮಕ್ಕಳ ತಜ್ಞರು, ಕೀಲು, ಎಲುಬು ತಜ್ಞರು ತಂಡದಲ್ಲಿದ್ದಾರೆ.
- ಡಾ.ರಾಜೇಶ್‌, ಜಿಲ್ಲಾ ವೈದ್ಯಾಧಿಕಾರಿ.

- ರಾಜು ಖಾರ್ವಿ ಕೊಡೇರಿ

Trending videos

Back to Top