CONNECT WITH US  

ಸಮ್ಮಿಶ್ರ ಸರ್ಕಾರ ಸಂಪೂರ್ಣ ದಿವಾಳಿ: ಅಶೋಕ್‌

ಮಂಡ್ಯ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಒಂದು ಗೋಮುಖ ವ್ಯಾಘ್ರ ಸರ್ಕಾರ. ಖಜಾನೆ ಬರಿದು ಮಾಡಿಕೊಂಡು ದಿವಾಳಿಯಾಗಿರುವ ಸರ್ಕಾರದಿಂದ ಯಾವುದೇ ಅಭಿವೃದ್ಧಿಯನ್ನೂ ನಿರೀಕ್ಷಿಸಲಾಗದು ಎಂದು ಜರಿದರು.

ಅಭಿವೃದ್ಧಿಗೆ ಹಣವಿಲ್ಲದೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ, ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ದೇವರ ಹುಂಡಿಗಳನ್ನು ಹಣಕ್ಕಾಗಿ ಒಡೆಯುವ ಹೀನಾಯ ಪರಿಸ್ಥಿತಿಯಲ್ಲಿದ್ದೇವೆ. ಸರ್ಕಾರದ ಬಳಿ ಹಣವಿಲ್ಲದೇ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವುದಕ್ಕೂ ಆಗುತ್ತಿಲ್ಲ. ಯಾವುದೇ ಕೆಲಸಗಳೂ ನಡೆಯುತ್ತಿಲ್ಲ. ಸರ್ಕಾರದ ಬಗ್ಗೆ ನಂಬಿಕೆಯಿಲ್ಲದೆ ಅಧಿಕಾರಿಗಳು ಹಣ ಖರ್ಚು ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ತೋರಿಸಿ:
ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಬರೀ ಹಣವಿಲ್ಲವೆಂದು ಮಾತ್ರ ಭಾವಿಸಬೇಡಿ. ಒಳ್ಳೆಯ ಗುಣವೂ ಇಲ್ಲ. ಇದೊಂದು ಗೋಮುಖ ವ್ಯಾಘ್ರ ಸರ್ಕಾರ. ಜನರ ಹಣ ಲೂಟಿ ಮಾಡುವುದೊಂದೇ ಅದಕ್ಕೆ ಗೊತ್ತಿರುವುದು. ಅಭಿವೃದ್ಧಿ ಬೇಕಿಲ್ಲ. ಸರ್ಕಾರ ಬಂದು ಇಷ್ಟು ದಿನಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ತೋರಿಸಲಿ ನೋಡೋಣ ಎಂದು ಸವಾಲೆಸೆದರು.

ತಾನಾಗೇ ಸರ್ಕಾರ ಪತನ:
ಈ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಇದು ಜನರ ಅರಿವಿಗೂ ಬಂದಿದೆ. ಹಾಗಂತ ನಾವೇನು ಸರ್ಕಾರ ಬೀಳಿಸುವ ಪ್ರಯತ್ನವನ್ನೂ ನಡೆಸುವುದಿಲ್ಲ. ಯಾರೂ ಬೀಳಿಸಬೇಕಾದ ಅವಶ್ಯಕತೆಯೂ ಇಲ್ಲ. ಸರ್ಕಾರ ತಂತಾನೇ ಬಿದ್ದುಹೋಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಗ್ಲೆಂಡ್‌ನಿಂದಲೇ ಬಾಣ ಬಿಡುತ್ತಿದ್ದಾರೆ. ಅದು ಎಲ್ಲಿಗೆ ಹೋಗಿ ತಲುಪುತ್ತದೋ ಗೊತ್ತಿಲ್ಲ ಎಂದು ನುಡಿದರು.

ಅಪವಿತ್ರ ಮೈತ್ರಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ 130 ಸ್ಥಾನಗಳಲ್ಲಿದ್ದ ಕಾಂಗ್ರೆಸ್‌ 80 ಸ್ಥಾನಕ್ಕೆ ಕುಸಿಯಿತು. 44 ಸ್ಥಾನಗಳಲ್ಲಿದ್ದ ಬಿಜೆಪಿ 104 ಸ್ಥಾನಕ್ಕೇರಿತು. ಜನರು ನೀಡಿದ ತೀರ್ಪಿಗೆ ವಿರುದ್ಧವಾಗಿ ಕಾಂಗ್ರೆಸ್‌ ಜೆಡಿಎಸ್‌ನೊಡನೆ ಅಪವಿತ್ರ ಮೈತ್ರಿ ಬೆಳೆಸಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಿತು. ಇದನ್ನು ಜನರೂ ಒಪ್ಪುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಮುಖಂಡ ಎನ್‌.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ನಗರ ಘಟಕದ ಅಧ್ಯಕ್ಷ ಹೆಚ್‌.ಆರ್‌.ಅರವಿಂದ್‌, ಹೆಚ್‌.ಪಿ.ಮಹೇಶ್‌ ಇತರರಿದ್ದರು.

ಬಿಜೆಪಿ ಗೆದ್ದರೆ ಮಂಡ್ಯ ಮಹಾನಗರ ಪಾಲಿಕೆ
ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ನಗರಾಭಿವೃದ್ಧಿಗಾಗಿ ಮಂಡ್ಯ ನಗರಸಭೆಗೆ 150 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿತ್ತು. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಂದು ಅಧಿಕಾರದಲ್ಲಿದ್ದವರು ವಿಫ‌ಲರಾದರು. ನಗರಗಳ ಅಭಿವೃದ್ಧಿಗೆ ನಗರೋತ್ಥಾನ ಆರಂಭಿಸಿದ್ದು ಬಿಜೆಪಿ ಸರ್ಕಾರ. ಬೃಹತ್‌ ಮಂಡ್ಯ ಯೋಜನೆ ಸಾಕಾರಗೊಳಿಸಿ ಮಂಡ್ಯ ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವ ಆಶಯವೂ ನಮ್ಮದೇ ಆಗಿದೆ. ಇಂತಹ ಅಭಿವೃದ್ಧಿ ಕನಸುಗಳು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗಿಲ್ಲ. ಕಳೆದ ಅವಧಿಯ ನಗರಸಭೆ ಸ್ಥಿತಿ ನೋಡಿದರೆ ನಾಚಿಕೆಯಾಗುತ್ತದೆ. 6 ತಿಂಗಳಿಗೊಬ್ಬ ಅಧ್ಯಕ್ಷರನ್ನು ತಂದು ಕೂರಿಸುವ ಪ್ರಯತ್ನದೊಂದಿಗೆ ಸಂಪೂರ್ಣ ಡೋಲಾಯಮಾನ ಸ್ಥಿತಿಯಲ್ಲೇ ಕಾಲಹರಣ ಮಾಡಲಾಯಿತು ಎಂದು ಆರ್‌. ಅಶೋಕ್‌ ಟೀಕಿಸಿದರು.

ಮಂಡ್ಯ ನಗರಕ್ಕೆ ಹೊಸ ರೂಪ: ಅಶೋಕ್‌
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ರಾಜ್ಯದಲ್ಲೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದರಿಂದ ನಗರಸಭೆಯಲ್ಲೂ ಬಿಜೆಪಿಗೆ ಅಧಿಕಾರ ನೀಡಲು ನಗರದ ಮತದಾರರು ಮನಸ್ಸು ಮಾಡಬೇಕು. ಆಗ ಕೇಂದ್ರ ಮತ್ತು ರಾಜ್ಯದಿಂದ ಹೆಚ್ಚಿನ ಹಣ ತಂದು ಮಂಡ್ಯ ನಗರಕ್ಕೆ ಅಭಿವೃದ್ಧಿಯಲ್ಲಿ ಹೊಸ ರೂಪ ನೀಡಬಹುದು ಎಂದು ಆರ್‌. ಅಶೋಕ್‌ ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಮೈಸೂರು ಸಕ್ಕರೆ ಕಂಪನಿಗೆ 250 ಕೋಟಿ ರೂ.ಗೂ ಹೆಚ್ಚು ಹಣ ಬಿಡುಗಡೆ ಮಾಡಿತ್ತು. ಆಸ್ಪತ್ರೆ, ನೀರಾವರಿ, ನಾಲೆಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಅಭಿವೃದ್ಧಿ ಪರವಾಗಿರುವ ಬಿಜೆಪಿಗೆ ಶಕ್ತಿ ತುಂಬುವ ಮೂಲಕ ನಗರಸಭೆಯಲ್ಲಿ ಅಧಿಕಾರ ಹಿಡಿಯುವುದಕ್ಕೆ ಮತದಾರರು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.


Trending videos

Back to Top