CONNECT WITH US  

ಕೊಡಗಿನಲ್ಲಿ ಭೂಕಂಪ ದಾಖಲಿಸುವ ಸಿಸ್ಮೋಮೀಟರ್‌ ಮಾಪಕ ಅಳವಡಿಕೆ

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ಅಧ್ಯಯನ ನಡೆಸಲು ಮಡಿಕೇರಿಗೆ ಆಗಮಿಸಿರುವ ಹಿರಿಯ ಭೂ ವಿಜ್ಞಾನಿಗಳ ತಂಡ, ಗಾಳಿಬೀಡು ನವೋದಯ ಕೇಂದ್ರೀಯ ವಿದ್ಯಾಲಯದಲ್ಲಿ ಭೂಕಂಪನವನ್ನು ದಾಖಲಿಸುವ ಸಿಸ್ಮೋಮೀಟರ್‌ ಮಾಪಕವನ್ನು ಅಳವಡಿಸಿದೆ.

ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಭೂಗರ್ಭಶಾಸ್ತ್ರ ಅಧ್ಯಯನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ|ರಾಘವನ್‌ ಮತ್ತು ಅಧಿಕಾರಿಗಳು ಭೂಕುಸಿತಕ್ಕೊಳಗಾದ ಸ್ಥಳಗಳ ಪರಿಶೀಲನೆ ನಡೆಸಿದ್ದು, ಕೆಲವು ಭಾಗಗಳಲ್ಲಿ ಬೆಟ್ಟ ಕುಸಿದಿರುವ ಮಣ್ಣನ್ನು ಪರೀಕ್ಷೆಗೆ ಒಳಪಡಿಸಲು ಹೈದರಾಬಾದ್‌ಗೆ ಕೊಂಡೊಯ್ದಿದ್ದಾರೆ. ವಿದ್ಯಾಲಯದ ಕೊಠಡಿಯಲ್ಲಿ 3 ಅಡಿ ಆಳದಲ್ಲಿ ಗುಂಡಿ ತೋಡಿ, ಸಿಸ್ಮೋಮೀಟರ್‌ ಮಾಪಕ ಅಳವಡಿಸಲಾಗಿದೆ. ಈ ಮಾಪಕಕ್ಕೆ ದಿನವಿಡೀ ಕಾರ್ಯ ನಿರ್ವಹಿಸಲು ಸಾಧ್ಯವಾಗುವಂತೆ ಸೋಲಾರ್‌, ಬ್ಯಾಟರಿ ಮತ್ತು ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮಾಪಕ ದಾಖಲಿಸುವ ಕಂಪನಗಳನ್ನು ಹೈದರಾಬಾದ್‌ನಲ್ಲಿರುವ ಭೂಗರ್ಭಶಾಸ್ತ್ರ ಅಧ್ಯಯನ ಸಂಸ್ಥೆಗೆ ಸಂಪರ್ಕಿಸಲು ವಿಶೇಷವಾದ ಅಂತರ್ಜಾಲ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದ್ದು, ಪ್ರತಿ ಕ್ಷಣದ ನಿಖರ ಮಾಹಿತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ಯಂತ್ರವನ್ನು ಅಮೆರಿಕದಿಂದ ಖರೀದಿಸಿ ತರಲಾಗಿದ್ದು, ಇದರ ಬೆಲೆ 6 ಲಕ್ಷ ರೂ. ಇದು ರಾಜ್ಯದಲ್ಲಿ ಅಳವಡಿಸಲಾಗಿರುವ 2ನೇ ಮಾಪಕವಾಗಿದ್ದು, ಮೊದಲ ಮಾಪಕ ಧಾರವಾಡದಲ್ಲಿದೆ. ಈ ಮಾಪಕ ಭೂ ಪದರದ ಕಂಪನವನ್ನು ದಾಖಲಿಸಿ, ಹೈದರಾಬಾದ್‌ನ ರಿಸೀವ್‌ ಸೆಂಟರ್‌ಗೆ ದತ್ತಾಂಶ ಸಹಿತ ವರದಿ ಮಾಡುತ್ತದೆ. ಜಗತ್ತಿನ ಯಾವುದೇ ಭಾಗದಲ್ಲಿ 5 ಮತ್ತು ಮೇಲ್ಪಟ್ಟ ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪಿಸಿದರೆ ಇದರಲ್ಲಿ ವಿವರ ದಾಖಲಾಗುತ್ತದೆ. 3 ರಿಂದ 5ರಷ್ಟು ಪ್ರಮಾಣದ ಕಂಪನ ಭಾರತದ ಯಾವುದೇ ಭಾಗದಲ್ಲಿ ಸಂಭವಿಸಿದರೂ ಅದನ್ನು ದಾಖಲಿಸಿ ಹೈದರಾಬಾದ್‌ನಲ್ಲಿರುವ ತರಂಗಾಂತರ ಸ್ವೀಕೃತಿ ಕೇಂದ್ರಕ್ಕೆ ರವಾನಿಸುತ್ತದೆ.

ಈ ಮಧ್ಯೆ, ಎರಡು ದಿನಗಳಿಂದ ಕಾಲೂರು, ಗಾಳಿಬೀಡು, ಮೊಣ್ಣಂಗೇರಿ ಹಾಗೂ ಸಂಪಾಜೆ ಭೂ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಪನವಾಗಿರುವುದು ಕಂಡು ಬಂದಿದೆ. ಆದರೆ, ಯಾವುದೇ ಅಪಾಯವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.


Trending videos

Back to Top