CONNECT WITH US  

ದೂರವಾಣಿ ಕದ್ದಾಲಿಕೆ ನಿಜ: ಬಿಎಸ್‌ವೈ

ಕೇಂದ್ರದ ಕಡೆಯಿಂದಲೇ ತನಿಖೆ ಮಾಡಿಸಿ: ಎಚ್‌ಡಿಕೆ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವರು ಮತ್ತು ಪ್ರಭಾವಿ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

"ಉದಯವಾಣಿ'ಯಲ್ಲಿ ಬಂದ ದೂರವಾಣಿ ಕದ್ದಾಲಿಕೆ ವರದಿ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ನನ್ನ ಫೋನ್‌ ಅಷ್ಟೇ ಅಲ್ಲ, ಸಿದ್ದರಾಮಯ್ಯ ಸೇರಿದಂತೆ
ಅನೇಕ ನಾಯಕರ ಫೋನ್‌ಗಳನ್ನು ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಹಾಕಿದರು. ನನ್ನ ಫೋನ್‌ ಟ್ಯಾಪ್‌ ಮಾಡಿದ್ದು ನಿಜ. ನೂರಕ್ಕೆ ನೂರರಷ್ಟು ಫೋನ್‌ ಟ್ಯಾಪ್‌ ಆಗ್ತಿದೆ ಎಂದು ಅವರು ಆರೋಪಿಸಿದರು. ಆದರೆ, ಈ ಸುದ್ದಿ ಅಲ್ಲಗಳೆದ ಸಿಎಂ ಕುಮಾರಸ್ವಾಮಿ ಬೇಕಿದ್ದರೆ ಕೇಂದ್ರದಿಂದಲೇ ತನಿಖೆ ಮಾಡಿಸಿಕೊಳ್ಳಲಿ ಎಂದು ಬಿಜೆಪಿಗೆ ಸವಾಲು ಹಾಕಿದರು.

ಈ ಮಧ್ಯೆ ಸರ್ಕಾರಕ್ಕೆ ಅಸ್ಥಿರತೆ ಭಯ ಇರುವುದರಿಂದ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ. ಇದು ಶೋಭೆ ತರುವುದಿಲ್ಲ ಎಂದು ಬಿಎಸ್‌ವೈ ಆಕ್ರೋಶ ವ್ಯಕ್ತ ಪಡಿಸಿದರು.

ಇದಷ್ಟೇ ಅಲ್ಲ, ಹಿಂದೆ ಇದೇ ರೀತಿ ದೂರವಾಣಿ ಕದ್ದಾಲಿಕೆ ಮಾಡಿದ್ದರಿಂದ ಅದರ ಪರಿಣಾಮ ಏನಾಗಿದೆ ಗೊತ್ತಿದೆ. ತಕ್ಷಣ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಉನ್ನತ ಮಟ್ಟದ ತನಿಖೆಯಾಗಲಿ: ಸಚಿವರು,ಶಾಸಕರು, ಪ್ರತಿಪಕ್ಷದ ನಾಯಕರ ಫೋನ್‌  ಕದ್ದಾಲಿಕೆ ಮಾಡುವುದು ಅಪರಾಧ ಎಂದ ಯಡಿಯೂರಪ್ಪ ಅವರು, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸಿಎಂ
ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯದಿಂದ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿಲ್ಲ.ನಮಗೆ ಅದರ ಅಗತ್ಯವೂ ಇಲ್ಲ. ನಮ್ಮ ನಾಯಕರಿಗೂ ನಾನು ಸರ್ಕಾರದ ಬಗ್ಗೆ ಯಾವುದೇ ಹೇಳಿಕೆ ನೀಡಬೇಡಿ ಎಂದು ಹೇಳಿದ್ದೇನೆ ಎಂದರು.

ಈಗಿನ ಪರಿಸ್ಥಿತಿ ನೋಡಿದರೆ ಸಮ್ಮಿಶ್ರ ಸರ್ಕಾರವನ್ನು ಯಾರೂ ಬೀಳಿಸುವ ಅವಶ್ಯಕತೆಯೇ ಇಲ್ಲ.ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರೇ ಕಚ್ಚಾಡಿ ಕೊಳ್ಳುತ್ತಾರೆ. ಅವರಾಗಿಯೇ ಬಡಿದಾಡಿಕೊಂಡು ಸರ್ಕಾರ ಕುಸಿದರೆ ನಾವು ಹೊಣೆಯಲ್ಲ ಎಂದು ಹೇಳಿದರು.

ಪ್ರತಿಕ್ರಿಯೆಗೆ ಸಿದ್ದು ನಿರಾಕರಣೆ: ಇತ್ತ ದೂರವಾಣಿ ಕದ್ದಾಲಿಕೆ ಬಗ್ಗೆ ಭಾರೀ ಸುದ್ದಿಯಾಗುತ್ತಿದ್ದರೂ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಷ್ಟೇ ಹೇಳಿ ನಿರ್ಗಮಿಸಿದರು.

ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ವರದಿ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎದುರಾಗುವುದನ್ನು ತಪ್ಪಿಸಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಸಚಿವರು ಮತ್ತು ಶಾಸಕರ ದೂರವಾಣಿ ಕರೆಗಳ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು 
"ಉದಯವಾಣಿ'ಯಲ್ಲಿ ಪ್ರಕಟಗೊಂಡ ವಿಶೇಷ ವರದಿ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿತು. 

ಕಾಂಗ್ರೆಸ್‌, ಜೆಡಿಎಸ್‌ಗಳಷ್ಟೇ ಅಲ್ಲದೆ ಬಿಜೆಪಿವಲಯದಲ್ಲೂ ಈ ಕುರಿತು ಚರ್ಚೆಗಳು ನಡೆದು ಯಾರ್ಯಾರ ದೂರವಾಣಿ ಕದ್ದಾಲಿಕೆ ಆಗಿರಬಹುದು ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ದೂರವಾಣಿ ಕದ್ದಾಲಿಕೆ ಬಗ್ಗೆ ಕೆಲವು ಸಚಿವರು ಹಾಗೂ ಶಾಸಕರು ಆಂತರಿಕವಾಗಿ ಒಪ್ಪಿಕೊಂಡರೂ ಬಹಿರಂಗವಾಗಿ ಹೇಳಿಕೆ ನೀಡಲು ಹಿಂಜರಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ದೂರವಾಣಿ ಕರೆಗಳು ಸ್ವೀಕರಿಸಿದ ಸಂದರ್ಭದಲ್ಲಿ ಒಂದು ರೀತಿಯ ಶಬ್ದ ಬರುತ್ತಿತ್ತು. ಕೆಲವೊಮ್ಮೆದಿಢೀರ್‌ ಸಂಪರ್ಕ ಕಟ್‌ ಆದ ಅನುಭವ ಆಗಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಶಾಸಕರು ಹೇಳಿದ್ದಾರೆ. 

ಇನ್ನೂ ಕೆಲವು ಶಾಸಕರು ನಾವು ಬಿಜೆಪಿ ಜತೆ ಸಂಪರ್ಕದಲ್ಲಿ ಇಲ್ಲ. ಆದರೂ ನಮ್ಮ ನಾಯಕರಿಗೆ ನಮ್ಮ ಮೇಲೆ ಅನುಮಾನ ಇದ್ದರೆ ಫೋನ್‌ ಟ್ಯಾಪಿಂಗ್‌ ಮಾಡಿಕೊಳ್ಳಲಿ ಬಿಡಿ ಎಂದು ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಯಾರ ಫೋನ್‌ ಕದ್ದಾಲಿಕೆಯನ್ನೂಮಾಡಿಲ್ಲ, ಬೇಕಿದ್ದರೆ ತನಿಖೆ ಮಾಡಿಕೊಳ್ಳಿ.ನಾನು, ಅಂತಹ ಸಂಸ್ಕೃತಿಯಿಂದ ಬಂದವನಲ್ಲ.ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಬೇಕಿದ್ದರೆ ತನಿಖೆ ಮಾಡಿಕೊಳ್ಳಲಿ.
- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ರಾಜ್ಯದಲ್ಲಿ ಯಾವುದೇ ರಾಜಕೀಯ ನಾಯಕರ ಫೋನ್‌ಗಳನ್ನು ಅನಧಿಕೃತವಾಗಿ ಕದ್ದಾಲಿಕೆ ಮಾಡುತ್ತಿಲ್ಲ. ಯಡಿಯೂರಪ್ಪ ಸೇರಿದಂತೆ ಯಾವುದೇ ನಾಯಕರ ಫೋನ್‌ಗಳನ್ನು ರಾಜ್ಯ ಸರ್ಕಾರ ಕದ್ದಾಲಿಸುತ್ತಿಲ್ಲ.
- ಡಾ.ಜಿ.ಪರಮೇಶ್ವರ್‌ , ಉಪ ಮುಖ್ಯಮಂತ್ರಿ

Trending videos

Back to Top