CONNECT WITH US  

ಸಂಸತ್ತಲ್ಲಿ ಮಾತನಾಡದ ಪ್ರಧಾನಿಗೆ ಏನೆನ್ನಬೇಕು?

ಹುಬ್ಬಳ್ಳಿ: ಬಿಜೆಪಿಯವರು ಮಾತೆತ್ತಿದರೆ ಡಾ.ಮನಮೋಹನ ಸಿಂಗ್‌ ಅವರನ್ನು "ಮೌನಿ ಬಾಬಾ' ಅನ್ನುತ್ತಿದ್ದರು. ಇದೀಗ ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ, ನೋಟ್‌ ಬ್ಯಾನ್‌, ಉದ್ಯೋಗ ಸೃಷ್ಟಿ ಬಗ್ಗೆ ವಿಪಕ್ಷವಾಗಿ ನಾವು ಸಂಸತ್‌ ಒಳಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಪ್ರಶ್ನಿಸಿದರೂ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏನೆಂದು ಕರೆಯಬೇಕು?.

ಹೀಗೆಂದು ಪ್ರಶ್ನಿಸಿದವರು, ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ. "ಉದಯವಾಣಿ'ಯೊಂದಿಗೆ ಮಾತನಾಡುತ್ತಾ ಮೋದಿ, ಬಿಜೆಪಿ, ಎನ್‌ಡಿಎ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಕಿಡಿಕಾರಿದರು.

ಭಯೋತ್ಪಾದನೆ ನಿಂತಿದೆಯೇ?:
ಮೋದಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ, ಮೂರು ತಿಂಗಳು ಪೂರ್ಣಗೊಂಡಿದೆ. ಯಾವುದೇ ಯೋಜನೆಗೂ ಪ್ರಾಮಾಣಿಕ ಒತ್ತು ಕೊಟ್ಟಿಲ್ಲ. ಅನೇಕ ಸುಳ್ಳುಗಳಿಗೆ ಸಾಧನೆಯ ಸುಣ್ಣ ಬಣ್ಣ ಬಳಿದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಯುಪಿಎ ಆಡಳಿತದಲ್ಲಿ ಮೋದಿ ಸೇರಿ ಬಿಜೆಪಿ ನಾಯಕರು ದೇಶದ ಅಖಂಡತೆಗೆ ಧಕ್ಕೆಯಾಗುತ್ತಿದೆ. ಜಮ್ಮು-ಕಾಶ್ಮೀರ ಸೇರಿ ಅನೇಕ ಕಡೆ ಭಯೋತ್ಪಾದನೆ ತಾಂಡವವಾಡುತ್ತಿದೆ. ದೇಶಕ್ಕೆ ರಕ್ಷಣೆ ಕೊಡುವಲ್ಲಿ ಯುಪಿಎ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ನಮಗೆ ಅಧಿಕಾರ ಕೊಡಿ ಭಯೋತ್ಪಾದನೆ ಮಟ್ಟ ಹಾಕುತ್ತೇವೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತೇವೆ. ದೇಶಕ್ಕೆ ಭದ್ರತೆ ಒದಗಿಸುತ್ತೇವೆ ಎಂದೆಲ್ಲ ಅಬ್ಬರಿಸಿದ್ದರು. ಇಂದು ಜಮ್ಮು-ಕಾಶ್ಮೀರ, ಚೀನಾ ಗಡಿಯಲ್ಲಿ ಏನಾಗುತ್ತಿದೆ?, ಭಯೋತ್ಪಾದನೆ ನಿಂತಿದೆಯೆ? ಜನತೆ ಮುಂದೆ ಸತ್ಯ ಬಿಚ್ಚಿಡುವ ಪ್ರಾಮಾಣಿಕ ಜವಾಬ್ದಾರಿಯನ್ನು ಬಿಜೆಪಿ ನಾಯಕರು ಇನ್ನಾದರೂ ತೋರಲಿ. ಸ್ಪಷ್ಟವಾಗಿ ಹೇಳುತ್ತೇನೆ, ನೆಹರು ಚಿಂತನೆ, ಡಾ|ಅಂಬೇಡ್ಕರ ಅವರ ಆಶಯದ ಪ್ರಜಾಸತ್ತಾತ್ಮ ವ್ಯವಸ್ಥೆಗೆ ಬಹುದೊಡ್ಡ ಗಂಡಾಂತರದತ್ತ ಸಾಗುವ ಶಂಕೆ ದಟ್ಟವಾಗುತ್ತಿದೆ.

ಇದೇನಾ ಅಚ್ಛೇ ದಿನ್‌?:
ಯುಪಿಎ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 120-125 ಡಾಲರ್‌ ಇದ್ದಾಗಲೂ ನಾವು ಸಬ್ಸಿಡಿ ಮೂಲಕ ಲೀಟರ್‌ ಪೆಟ್ರೋಲ್‌ನ್ನು 55-60 ರೂ.ಗೆ ನೀಡುತ್ತಿದ್ದೆವು. ಮೋದಿಯವರು ಅಧಿಕಾರಕ್ಕೆ ಬಂದಾಗ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 50 ಡಾಲರ್‌ಗೆ ಇಳಿದರೂ 70 ರೂ.ಗೆ ಲೀಟರ್‌ ಪೆಟ್ರೋಲ್‌, 65 ರೂ.ಗೆ ಡೀಸೆಲ್‌ ನೀಡಲಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದ ಬೆಲೆ ಏರಿಕೆಯಾಗಿದ್ದೇ ತಡ ಇದೀಗ ಪೆಟ್ರೋಲ್‌ ಬೆಲೆ 80-85 ರೂ.ಗೆ, ಡೀಸೆಲ್‌ ಬೆಲೆ 70-75 ರೂ.ಗೆ ಹೆಚ್ಚಳವಾಗಿದೆ.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಸದ್ದೇ ಇಲ್ಲವಾಗಿದ್ದು, ನಿರುದ್ಯೋಗ ಬೆಳೆಯುತ್ತಿದೆ. ವಿದೇಶದಲ್ಲಿ ಕಪ್ಪು ಹಣ ತಂದು ಜನರ ಖಾತೆಗೆ ತಲಾ 15 ಲಕ್ಷ ರೂ.ಹಾಕುವುದಾಗಿ ಲೋಕಸಭೆ ಚುನಾವಣೆ ವೇಳೆ ಚೆಕ್‌ ಮಾದರಿಗಳನ್ನು ಹಂಚಿಕೆ ಮಾಡಿದ್ದ ಬಿಜೆಪಿಯವರು ಇದೀಗ ನಯಾ ಪೈಸೆ ನೀಡದೆ ಮೌನಿ ಬಾಬಾಗಳಾಗಿದ್ದಾರೆ. ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ, ಬೆಲೆಗಳು ಗಗನ ಮುಖೀಯಾಗಿವೆ. ಪ್ರಜಾಸತ್ತಾತ್ಮಕ ಆಶಯಗಳಿಗೆ ಧಕ್ಕೆ ಎದುರಾಗುತ್ತಿದೆ. ಅಚ್ಛೇದಿನ್‌ ಎಂದರೆ ಇದೇನಾ?

ಎನ್‌ಡಿಎಗಿಂತ ಯುಪಿಎನಲ್ಲಿ ಹೆಚ್ಚು ಎಂಎಸ್‌ಪಿ ಘೋಷಣೆ:
ದೇಶದಲ್ಲಿ ಇದೇ ಮೊದಲ ಬಾರಿಗೆ ತಾವೇ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಘೋಷಣೆ ಮಾಡುವ ರೀತಿಯಲ್ಲಿ ಮೋದಿ ಸರ್ಕಾರ ಪ್ರಚಾರ ಪಡೆಯುತ್ತಿದೆ. ಆದರೆ, ಮೋದಿ ಸರ್ಕಾರಕ್ಕಿಂತ ಯುಪಿಎ ಅಧಿಕಾರದಲ್ಲಿ ಹೆಚ್ಚಿನ ಎಂಎಸ್‌ಪಿ ಘೋಷಣೆ ಆಗಿದೆ. ಚುನಾವಣೆ ವೇಳೆ ಡಾ| ಎಂ.ಎಸ್‌.ಸ್ವಾಮಿನಾಥನ್‌ ವರದಿ ಜಾರಿ ಭರವಸೆ ನೀಡಿದ್ದ ಬಿಜೆಪಿ, ಇದೀಗ ಅದು ಅಸಾಧ್ಯ ಎಂದು ಹೇಳುವ ಮೂಲಕ ರೈತ ಸಮುದಾಯಕ್ಕೆ ವಂಚನೆ ಮಾಡಿದೆ.

ಗಮನ ಬೇರೆಡೆಗೆ ಸೆಳೆಯಲು ಹಲವರ ಬಂಧನ:
ಮೋದಿ ಹತ್ಯೆಗೆ ಸಂಚು ನಡೆದಿದ್ದರೆ ನಾವು ತೀವ್ರವಾಗಿ ಖಂಡಿಸುತ್ತೇವೆ, ಈ ವಿಚಾರದಲ್ಲಿ ನಿಜವಾದ ಭಯೋತ್ಪಾದಕರು, ನಕ್ಸಲರನ್ನು ಬಂಧಿಸಲಿ. ಅದನ್ನು ಬಿಟ್ಟು ಚಿಂತಕರು, ವಿಚಾರವಾದಿ, ಸಾಹಿತಿಗಳನ್ನು ಬಂಧಿಸುವುದು ಯಾಕೆ? ಕರ್ನಾಟಕ, ಮಹಾರಾಷ್ಟ್ರದಲ್ಲಿ ಕೆಲ ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಕೈವಾಡ ಇದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಜನರ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಹಲವು ವಿಚಾರವಾದಿಗಳನ್ನು ಬಂಧಿಸುವ ಕೆಲಸ ಮಾಡಲಾಗಿದೆ.

ಬಿಜೆಪಿ, ಆರ್‌ಎಸ್‌ಎಸ್‌ ದಲಿತ ವಿರೋಧಿ:
ನಕ್ಸಲಿಯರ ದಾಳಿಗೆ ಮಧ್ಯಪ್ರದೇಶ ಇನ್ನಿತರ ಕಡೆ ಕಾಂಗ್ರೆಸ್‌ ನಾಯಕರು ಬಲಿಯಾಗಿದ್ದಾರೆ. ಹಿಂಸೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ತಮ್ಮ ವಿಚಾರಗಳ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಬಿಜೆಪಿ, ಆರ್‌ಎಸ್‌ಎಸ್‌ನವರು ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ವಿರುದ್ಧವಾಗಿ ಅನೇಕ ಹೇಳಿಕೆ ನೀಡಿದ್ದಾರೆ. ಕೆಲವರು ಸಂವಿಧಾನ ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಿದ್ದಾರೆ ಅವರೆಲ್ಲರನ್ನು ಬಂಧಿಸಬೇಕಲ್ಲವೇ?

ಬಹಿರಂಗ ಸಭೆಗಳಲ್ಲಿ ವಿವಿಧ ಹಾವ ಭಾವಗಳೊಂದಿಗೆ ವೀರಾವೇಶದ ಭಾಷಣ ಮಾಡಿ ಘರ್ಜಿಸುವ ಮೋದಿ, ಸಂಸತ್‌ನೊಳಗೆ ವಿಪಕ್ಷಗಳ ಪ್ರಸ್ತಾಪ, ಆರೋಪಗಳಿಗೆ ಮೌನವೇ ಉತ್ತರ ಎನ್ನುವಂತಿರುತ್ತಾರೆ. ಮೌನಕ್ಕೆ ಸವಾಲು ಹಾಕುವ ಮಟ್ಟಿಗೆ ಮೌನ ತಾಳಿದ್ದಾರೆ.
- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ.

- ಅಮರೇಗೌಡ ಗೋನವಾರ

Trending videos

Back to Top