CONNECT WITH US  

ಸಿದ್ದು ಭಿನ್ನ ಸಂಧಾನ

 ಎಲ್ಲವೂ ಸರಿ ಹೋಗುತ್ತೆ ಸಾವ್ಕಾರ: ಸಿದ್ದರಾಮಯ್ಯ
 ಎಲ್ಲಿ  ಸರಿ ಹೋಗುತ್ರಿ ಸಾಹೇಬ್ರ?: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಬೆಳಗಾವಿ ಕಾಂಗ್ರೆಸ್‌ ನಾಯಕರ ನಡುವಿನ ಭಿನ್ನಮತ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ತಲೆ ನೋವಾಗಿದ್ದು, ಭಿನ್ನಮತ ಶಮನ ಮಾಡುವ ಹೊಣೆಗಾರಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗಲಿಗೆ ಬಿದ್ದಿದೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಭಿನ್ನಮತ ಸ್ಫೋಟವನ್ನು ರವಿವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿಯವರನ್ನು ತಮ್ಮ ನಿವಾಸ "ಕಾವೇರಿ'ಗೆ ಕರೆಸಿಕೊಂಡು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದು, ನಾನು ವಿದೇಶ ಪ್ರವಾಸ ಮುಗಿಸಿ ಬಂದ ಅನಂತರ ಎಲ್ಲರನ್ನೂ ಒಟ್ಟಿಗೆ ಕರೆಯಿಸಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಜತೆಗೆ ದೂರವಾಣಿ ಮೂಲಕ ಮಾತನಾಡಿರುವ ಸಿದ್ದರಾಮಯ್ಯ, ಈಗ ನೀವು ಗೊಂದಲ ಮಾಡಿಕೊಂಡರೆ, ನನಗೆ ತೊಂದರೆಯಾಗುತ್ತದೆ. ನಾನೇ ಇದೆಲ್ಲದಕ್ಕೂ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಹೀಗಾಗಿ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎಲ್ಲವೂ ಸರಿ ಹೋಗುತ್ತೆ ಸಾವ್ಕಾರ
ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ದೂರವಾಣಿ ಮೂಲಕ ಆತ್ಮೀಯವಾಗಿ ಮಾತನಾಡಿರುವ ಸಿದ್ದರಾಮಯ್ಯ, ನಿಮ್ಮ ಭಿನ್ನಾಭಿಪ್ರಾಯದಿಂದ ರಾಜಕೀಯವಾಗಿ ನನಗೆ ತೊಂದರೆ ಯಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ ಸರಿ ಹೋಗುತ್ತದೆ ಸಾವಾRರ. ನಾನು ನಿಮ್ಮ ಜತೆ ಇದ್ದೇನೆ ಎಂದು ಆತ್ಮೀಯ ವಾಗಿಯೇ ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಆದರೆ ಅದಕ್ಕೆ ಸಮಾಧಾನಗೊಳ್ಳದ ಸತೀಶ್‌ ಜಾರಕಿಹೊಳಿ, ಎಲ್ಲಿ ಸರಿ ಹೋಗುತ್ರಿ ಸಾಹೇಬ್ರ, ಭಾಳ ಕಷ್ಟಾ ಐತಿ. ನಾನು ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದಾಗ ಯಾರೂ ಮಾತನಾಡಲಿಲ್ಲ.

ಈಗ ಹೆಣ್ಮಗಳು ಬಂದು ಸಮಸ್ಯೆ ಆಗಿದೆ ಎಂದ ಕೂಡಲೇ ಎಲ್ಲರೂ ಬರ್ತಿರಿ ಎಂದು ತಮ್ಮದೇ ಧಾಟಿಯಲ್ಲಿ ಜಿಲ್ಲೆಯಲ್ಲಿ ಇನ್ನೂ ಗೊಂದಲ ಇದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಗೊತ್ತಾಗಿದೆ. ನಾನು ಸೋಮವಾರದಿಂದ ಎರಡು ವಾರ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು, ಪ್ರವಾಸದಿಂದ ಹಿಂದಿರುಗಿದ ಬಳಿಕ ಎಲ್ಲರನ್ನೂ ಒಟ್ಟಿಗೆ ಕರೆದು ಮಾತುಕತೆ ನಡೆಸುತ್ತೇನೆ. ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನೂ ಕರೆದು ಮಾತನಾಡುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಗೊಂದಲ ಸೃಷ್ಟಿಸುವ ಕೆಲಸ ಮಾಡದಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಡಿಕೆಶಿ ಹಸ್ತಕ್ಷೇಪಕ್ಕೆ ಆಕ್ರೋಶ
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಸಿದ್ದರಾಮಯ್ಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ರಮೇಶ್‌ ಜಾರಕಿಹೊಳಿ 10ಕ್ಕೂ ಹೆಚ್ಚು ಶಾಸಕರ ತಂಡ ಕಟ್ಟಿಕೊಂಡು ಪ್ರವಾಸದ ಹೆಸರಿನಲ್ಲಿ ರಾಜಸ್ಥಾನ ಹಾಗೂ ದಿಲ್ಲಿಗೆ ತೆರಳಿ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದು, ಬಿಜೆಪಿ ಸೇರುವ ಕುರಿತಂತೆ ಬಿಜೆಪಿ ನಾಯಕರ ಜತೆಗೂ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ವೇಣುಗೋಪಾಲ್‌ ಸಂಧಾನ ಪ್ರಯತ್ನ
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಸಚಿವ ರಮೇಶ್‌ ಜಾರಕಿಹೊಳಿಯವರನ್ನು ಪ್ರತ್ಯೇಕವಾಗಿ ಕರೆದು ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ಸೊಪ್ಪು ಹಾಕದ ರಮೇಶ್‌ ಜಾರಕಿಹೊಳಿ, ನಮ್ಮ ಜಿಲ್ಲೆಯ ವಿಷಯದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಿದರೆ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ವಿಚಲಿತರಾಗಿರುವ ವೇಣುಗೋಪಾಲ್‌ ಬೆಳಗಾವಿ ಜಿಲ್ಲಾ ನಾಯಕರ ಸಮಸ್ಯೆಯನ್ನು ಬಗೆಹರಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೆಗಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಟಿಕೆಟ್‌: ಜಾತಿ ಗೊಂದಲ
ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಿಗೂ ಲಿಂಗಾಯತ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆಯನ್ನು ಜಿಲ್ಲೆಯ ಕೆಲವು ನಾಯಕರು ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವ ಮಾಡಿದ್ದಾರೆ. ಆದರೆ ಬೆಳಗಾವಿ ಕ್ಷೇತ್ರದಲ್ಲಿ ಲಿಂಗಾಯತರ ಹೊರತಾಗಿ ಬೇರೆಯವರಿಗೆ ಟಿಕೆಟ್‌ ನೀಡಬೇಕೆಂದು ಜಾರಕಿಹೊಳಿ ಸಹೋದರರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದು ಸಹ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಮುಖಂಡರ ಗೊಂದಲ ಅತ್ಯಂತ ಸಣ್ಣ ವಿಷಯ. ಬೆಳಗಾವಿ ಸಮಸ್ಯೆಯನ್ನು ನಿಮಿಷದಲ್ಲಿ ಬಗೆಹರಿಸಲಾಗುವುದು. ಅದನ್ನು ದೊಡ್ಡದಾಗಿ ಪರಿಗಣಿಸುವ ಅಗತ್ಯವಿಲ್ಲ.
ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ಉಸ್ತುವಾರಿ

Trending videos

Back to Top