CONNECT WITH US  

ಫ‌ಲಿತಾಂಶ ಆಧಾರದಲ್ಲಿ ಲೋಕಾ ಮೈತ್ರಿ

ತುಮಕೂರು, ಮೈಸೂರು ಭಾಗದಲ್ಲಿ ಜೆಡಿಎಸ್‌ನಿಂದಾಗಿ ಕಾಂಗ್ರೆಸ್‌ಗೆ ಕೆಲವೆಡೆ ಹಿನ್ನಡೆ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶದ ಆಧಾರದ ಮೇಲೆ ಲೋಕಸಭೆ ಚುನಾವಣೆಯ ಲೆಕ್ಕಾಚಾರಗಳು ಶುರುವಾಗಿವೆ.

ಪ್ರಮುಖವಾಗಿ ಜೆಡಿಎಸ್‌ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆದಿರುವುದರಿಂದ ಕಾಂಗ್ರೆಸ್‌ಗೆ ಇಲ್ಲಿ ನಷ್ಟವಾಗಿದೆ. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಲಾಭ ತರುತ್ತಾ ಎಂಬ ಬಗ್ಗೆಯೂ ಚರ್ಚೆಗಳು ಪ್ರಾರಂಭವಾಗಿವೆ.

ತುಮಕೂರು, ಮೈಸೂರು ಭಾಗದಲ್ಲಿ ಜೆಡಿಎಸ್‌ನಿಂದಾಗಿ ಕಾಂಗ್ರೆಸ್‌ಗೆ ಕೆಲವೆಡೆ ಹಿನ್ನಡೆಯಾಗಿದೆ. ಅದೇ ರೀತಿ ಶಿವಮೊಗ್ಗ, ಚಿತ್ರದುರ್ಗ,ದಾವಣಗೆರೆಯ ಹಲವೆಡೆ ಕಾಂಗ್ರೆಸ್‌ ಭದ್ರಕೋಟೆಯನ್ನು ಬಿಜೆಪಿ ವಶ ಮಾಡಿಕೊಂಡಿದೆ.

ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದಾ ಎಂಬ ಆತಂಕವೂ ಕಾಂಗ್ರೆಸ್‌ನವರಿಗೆ ಕಾಡುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನಾಯಕತ್ವ ಜೆಡಿಎಸ್‌ ವಹಿಸಿರುವುದರಿಂದ ಅವರಿಗೆ ಲಾಭವಾಗುತ್ತದೆ. ನಮಗೆ ನಷ್ಟವಾಗಬಹುದೆಂಬ ವಾದ ಕಾಂಗ್ರೆಸ್‌ ನಾಯಕರಲ್ಲಿದೆ.

ಈ ಮಧ್ಯೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ಹಾಗೂ ಕರಾವಳಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌, ತುಮಕೂರು ,ಮಂಡ್ಯ, ಹಾಸನದಲ್ಲಿ ಜೆಡಿಎಸ್‌ ಪಾರುಪತ್ಯ ಸಾಧಿಸಿದೆ.

21 ಜಿಲ್ಲೆಗಳ 105 ನಗರ ಸ್ಥಳೀಯ ಸಂಸ್ಥೆಗಳ 2527 ಸ್ಥಾನಗಳಲ್ಲಿ ಕಾಂಗ್ರೆಸ್‌ 982 ಸ್ಥಾನ ಗಳಿಸುವ ಮೂಲಕ ನಂ.1 ಸ್ಥಾನ ಪಡೆದಿದ್ದರೂ ರಾಜ್ಯದಲ್ಲಿ ಜೆಡಿಎಸ್‌ ನೇತೃತ್ವದ ಸರ್ಕಾರ ಇರುವುದರಿಂದ ಸಹಜವಾಗಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಇದರ ಒಳ ಹೊಡೆತ ಬಿದ್ದಿದೆ. ಮೂರೂ ಪಕ್ಷಗಳು ತಮ್ಮ ಸಾಧನೆ ಬಗ್ಗೆ ಮೇಲ್ನೋಟಕ್ಕೆ ತೃಪ್ತಿ
ವ್ಯಕ್ತಪಡಿಸಿವೆಯಾದರೂ ಉ.ಕ. ಮತ್ತು ಕರಾವಳಿ ಭಾಗದಲ್ಲಿ ಬಹುತೇಕ ಕಡೆ ಶೂನ್ಯ ಸಾಧನೆ ಮಾಡಿರುವುದು ಜೆಡಿಎಸ್‌ಗೆ ಬೇಸರ ತಂದಿದೆ.

ಹಳೇ ಮೈಸೂರು ಭಾಗ ಹಾಗೂ ಉ.ಕ.ದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫ‌ಲಿತಾಂಶ ಬಂದಿಲ್ಲ. ಬಿಜೆಪಿ ಹೆ-ಕ ಭಾಗದಲ್ಲಿ ಹಿನ್ನೆಡೆ ಅನುಭವಿಸಿದೆ.

ಕರಾವಳಿ ಭಾಗದಲ್ಲಿ ಹಿನ್ನಡೆ ಕಾಂಗ್ರೆಸ್‌ ಪಕ್ಷ ಅತಿ ಹೆಚ್ಚು ಸ್ಥಾನ ಪಡೆದಿದ್ದರೂ ಮುಂಬೈ ಕರ್ನಾಟಕ, ಕರಾವಳಿ ಭಾಗದಲ್ಲಿ ಹಿನ್ನಡೆ ಅನುಭವಿಸಿದೆ. ಅತಂತ್ರ ಇರುವ ಕಡೆ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಅಧಿಕಾರ ಹಿಡಿಯಲು ವೇದಿಕೆ ಸಿದ್ಧಗೊಂಡಿದೆಯಾದರೂ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್‌ ಹಿನ್ನಡೆ ಸಾಧಿಸಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಗೆದ್ದಿದ್ದ ಸ್ಥಾನಗಳನ್ನೂ ತನ್ನ ವಶ ಮಾಡಿಕೊಂಡಿದ್ದು ಸರ್ಕಾರದ ಪ್ರಭಾವ ಕೆಲಸ ಮಾಡಿದೆ. ಕಾಂಗ್ರೆಸ್‌ಗೆ ಬಿಜೆಪಿ ತೀವ್ರ ಸವಾಲು ಒಡ್ಡಿರುವುದು ಫ‌ಲಿತಾಂಶದಲ್ಲಿ ವ್ಯಕ್ತವಾಗಿದೆ.

ಮೈಸೂರು ಪಾಲಿಕೆಯಲ್ಲಿ ಕಳೆದ ಬಾರಿ ಕಾಂಗ್ರೆಸ್‌ 21 ಸ್ಥಾನ ಗಳಿಸಿತ್ತಾದರೂ ಇದೀಗ 19 ಕ್ಕೆ ಇಳಿದಿದೆ. ತುಮಕೂರು ಪಾಲಿಕೆಯಲ್ಲಿ ಕಳೆದ ಬಾರಿ 12 ಸ್ಥಾನ ಪಡೆದಿದ್ದ ಕಾಂಗ್ರೆಸ್‌ 10 ಸ್ಥಾನಕ್ಕೆ ಇಳಿದಿದೆ. ಹಾಸನದಲ್ಲಿ 9 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಈಗ 2 ಸ್ಥಾನಕ್ಕೆ ಇಳಿದಿದೆ. ಚನ್ನರಾಯಪಟ್ಟಣದಲ್ಲಿ 9 ಸ್ಥಾನದಿಂದ 8 ಕ್ಕೆ ಕುಸಿದಿದೆ. ಸಕಲೇಶಪುರದಲ್ಲಿ 6 ರಿಂದ ನಾಲ್ಕು ಸ್ಥಾನಕ್ಕೆ ಇಳಿದಿದೆ.

ಹೊಳೆನರಸೀಪುರದಲ್ಲಿ ಕಳೆದ ಬಾರಿ ಐದು ಸ್ಥಾನಗಳಿಸಿದ್ದ ಕಾಂಗ್ರೆಸ್‌ ಇದೀಗ ಶೂನ್ಯ ಸಾಧನೆ ಮಾಡಿದೆ. ಚಾಮರಾಜನಗರದ ಕೊಳ್ಳೇಗಾಲದಲ್ಲೂ ಕಳೆದ ಬಾರಿ 20 ಸ್ಥಾನಗಳಿಸಿದ್ದ ಕಾಂಗ್ರೆಸ್‌ ಈ ಬಾರಿ 8 ಕ್ಕೆ ಇಳಿದಿದೆ.ಇನ್ನು ಶಿವಮೊಗ್ಗ ಪಾಲಿಕೆಯಲ್ಲಿ ಕಳೆದ ಬಾರಿ 12 ಸ್ಥಾನ ಪಡೆದಿದ್ದ ಕಾಂಗೆಸ್‌ ಈ ಬಾರಿ 7 ಸ್ಥಾನಕ್ಕೆ ಇಳಿದಿದೆ. ಮುಂಬೈ ಕರ್ನಾಟಕ ಭಾಗದಲ್ಲೂ ಕಾಂಗ್ರೆಸ್‌ಗೆ ಬಿಜೆಪಿಯಿಂದ ಹೊಡೆತ ಬಿದ್ದಿದೆ. ಒಟ್ಟಾರೆ, ಕಳೆದ ಬಾರಿಗಿಂತ ಶೇ.2 ರಷ್ಟು ಸ್ಥಾನಗಳು ಕಡಿಮೆ ಬಂದಿವೆ. ಸಿದ್ದರಾಮಯ್ಯ ಅವರ ಸ್ವ ಕ್ಷೇತ್ರದ ಬಾದಾಮಿ ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 13 ಸ್ಥಾನ ಕಾಂಗ್ರೆಸ್‌ ಪಡೆದಿದೆ. ಡಾ.ಜಿ.ಪರಮೇಶ್ವರ್‌ ಅವರ ಕ್ಷೇತ್ರವಾದ ಕೊರಟಗೆರೆ ಪ.ಪಂ.ಯಲ್ಲಿ ಕಾಂಗ್ರೆಸ್‌ 15ರ ಪೈಕಿ ಕೇಲ 5 ಸ್ಥಾನ ಮಾತ್ರ ಗಳಿಸಿದೆ. ಇಲ್ಲಿ ಜೆಡಿಎಸ್‌ 8 ಸ್ಥಾನ ಗಳಿಸಿದೆ.

ತುಮಕೂರು, ಶಿವಮೊಗ್ಗ, ಮೈಸೂರು ಪಾಲಿಕೆಗಳಲ್ಲಿ ಬಿಜೆಪಿ ಬಲವೃದ್ಧಿ ಬಿಜೆಪಿಗೆ ಫ‌ಲಿತಾಂಶ ಒಂದು ರೀತಿಯಲ್ಲಿ ಸಮಾಧಾನ ತಂದಿದೆ. ಏಕೆಂದರೆ ಕಳೆದ ಬಾರಿ ಕೆಜೆಪಿ, ಬಿಎಸ್‌ಆರ್‌ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿದಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿದ್ದ ಕ್ಷೇತ್ರಗಳಲ್ಲಿ ಇದೀಗ ಮೇಲುಗೈ ಸಾಧಿಸಿದೆ. ತುಮಕೂರು, ಶಿವಮೊಗ್ಗ,ಮೈಸೂರು ನಗರ ಪಾಲಿಕೆಗಳಲ್ಲಿ ಬಲವೃದ್ಧಿಸಿಕೊಂಡಿರುವುದು ಇದಕ್ಕೆ ಸಾಕ್ಷಿ.

ಮೈಸೂರಿನಲ್ಲಿ 13 ಸ್ಥಾನದಿಂದ 22,ತುಮಕೂರಿನಲ್ಲಿ 8 ರಿಂದ 12, ಶಿವಮೊಗ್ಗದಲ್ಲಿ 9 ರಿಂದ 15 ಸ್ಥಾನಕ್ಕೆ ಏರಿಕೆಯಾಗಿದೆ. ಬೆಳಗಾವಿ,ವಿಜಯಪುರ, ಬಾಗಲಕೋಟೆ ಭಾಗದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಮುಂಬೈ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ ಭಾಗದ ದಾವಣಗೆರೆ, ಚಿತ್ರದುರ್ಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದೆ.

ಆದರೆ, ಹಳೇ ಮೈಸೂರು ಭಾಗದಲ್ಲಿ ನಿರೀಕ್ಷಿತ ಸ್ಥಾನಗಳು ಬಂದಿಲ್ಲ. ಆದರೆ, ಮೈಸೂರಿನಲ್ಲಿ, ಚಾಮರಾಜನಗರ ನಗರಸಭೆಯಲ್ಲಿ 31ರಲ್ಲಿ 15, ಹಾಸನದಲ್ಲಿ ಇದೇ ಮೊದಲ ಬಾರಿಗೆ 13 ಸ್ಥಾನ ಪಡೆದಿರುವುದು ಗಮನಾರ್ಹ. ಹಾಸನದಲ್ಲಿ ಕಳೆದ ಬಾರಿ 1 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 13 ಸ್ಥಾನ ಪಡೆದಿದೆ.

12 ಕಡೆ ಜೆಡಿಎಸ್‌ಗೆ ಅಧಿಕಾರ 105 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕೇವಲ 12 ಕಡೆಯಷ್ಟೇ ಅಧಿಕಾರ ಪಡೆಯುವಲ್ಲಿ ಜೆಡಿಎಸ್‌ ಯಶಸ್ವಿಯಾಗಿದೆ. ಆದರೆ, ಮಂಡ್ಯ, ತುಮಕೂರು, ಹಾಸನದಲ್ಲಿ ಬಲ
ವೃದ್ಧಿಸಿಕೊಂಡಿದೆ.

ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಪಕ್ಷ ತನ್ನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರೆ, ತುಮಕೂರು ಜಿಲ್ಲೆಯಲ್ಲಿ ಸಾಮರ್ಥ್ಯವನ್ನು
ವಿಸ್ತಾರಗೊಳಿಸಿದೆ. ಮೈಸೂರು ನಗರದಲ್ಲಿ ಶಕ್ತಿ ಕಳೆದುಕೊಂಡಿದ್ದರೂ ಒಂದು ಕಡೆ ಅಧಿಕಾರಕ್ಕೆ ಬಂದು ಇನ್ನೆರಡು
ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯ ಬಲ ಹೆಚ್ಚಿಸಿಕೊಂಡಿದೆ. ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಶೂನ್ಯ ಸಾಧನೆ ಮಾಡಿದೆ.

ಹಾಸನ ನಗರಸಭೆಯಲ್ಲಿ 2 ಸ್ಥಾನಗಳನ್ನು ಜೆಡಿಎಸ್‌ ಕಳೆದುಕೊಂಡಿದೆ. ಉಳಿದಂತೆ ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ,ಸಕಲೇಶಪುರ, ಹೊಳೆನರಸೀಪುರ ಪುರಸಭೆಗಳಲ್ಲಿ ಅಧಿಕಾರ ಪಡೆದಿದೆ. ಸಚಿವ ಎಚ್‌.ಡಿ.ರೇವಣ್ಣ ಅವರ ಸ್ವಕ್ಷೇತ್ರ ಹೊಳೆನರಸೀಪುರ ಪುರಸಭೆಯಲ್ಲಿ 23ಕ್ಕೆ 23 ಸ್ಥಾನ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿದೆ.

ಮೈಸೂರು ಪಾಲಿಕೆಯಲ್ಲಿ ಕಳೆದ ಚುನಾವಣೆಯಲ್ಲಿ 20 ಸ್ಥಾನಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಜೆಡಿಎಸ್‌ ಈ ಬಾರಿ 18 ಸ್ಥಾನಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದು ಕಾಂಗ್ರೆಸ್‌ ವಶದಲ್ಲಿದ್ದ ಪಿರಿಯಾಪಟ್ಟಣ ಪುರಸಭೆಯನ್ನು ವಶಕ್ಕೆ ತೆಗೆದುಕೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ ನಗರಸಭೆ ಸೇರಿ 4 ಕಡೆ ಅಧಿಕಾರಕ್ಕೆ ಬಂದಿದೆ.ತುಮಕೂರು ಮಹಾನಗರ ಪಾಲಿಕೆಯಲ್ಲಿ
ಕಳೆದ ಬಾರಿ 13 ಸ್ಥಾನಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಪಕ್ಷ ಈ ಬಾರಿ 10 ಸ್ಥಾನಗಳೊಂದಿಗೆ 2ನೇ ಸ್ಥಾನಕ್ಕೆ ಇಳಿದಿದೆ. ಚಿಕ್ಕನಾಯಕನಹಳ್ಳಿ ಪುರಸಭೆ, ಗುಬ್ಬಿ ಪ.ಪಂ.ನಲ್ಲಿ ಅಧಿಕಾರ ಉಳಿಸಿಕೊಂಡಿದೆ.

ತಾಯಿ-ಮಗ ಗೆಲುವು
ಚಿಕ್ಕೋಡಿ
: ಚಿಕ್ಕೋಡಿ ಪುರಸಭೆಯ 22ನೇ ವಾರ್ಡಿನಿಂದ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಅವರ ಸಹೋದರ ಜಗದೀಶ ಕವಟಗಿಮಠ ಐದನೇ ಬಾರಿಗೆ ಆಯ್ಕೆಯಾದರೆ, ಅವರ ಪತ್ನಿ ವೀಣಾ 20ನೇ ವಾರ್ಡಿನಿಂದ ಗೆದ್ದು ಇದೇ ಮೊದಲ ಬಾರಿಗೆ ಪುರಸಭೆ ಪ್ರವೇಶಿಸಿದ್ದಾರೆ. ಮಹಾಂತೇಶ ಕವಟಗಿಮಠ ಸಹೋದರ ಸಂಬಂಧಿ  ಸಂಜಯ ಕವಟಗಿಮಠ ವಾರ್ಡ್‌ ನಂ.5ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಕವಟಗಿಮಠ ಕುಟುಂಬದ ಮೂವರು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನು, 14ನೇ ವಾರ್ಡ್‌ನಲ್ಲಿ ಮುತುರ್ಜಾ ಜಮಾದಾರ ಹಾಗೂ 15ನೇ ವಾರ್ಡಿನಿಂದ ಅವರ ಮಗ ಸಾಬೀರ ಜಮಾದಾರ ಜಯಗಳಿಸಿ ಗಮನ ಸೆಳೆದಿದ್ದಾರೆ.

ಈಶ್ವರಪ್ಪಗೆ ಮುಖಭಂಗ
ಶಿವಮೊಗ್ಗ
: ಮಹಾನಗರ ಪಾಲಿಕೆಯಲ್ಲಿ 20 ಸ್ಥಾನದಲ್ಲಿ ಗೆಲುವು ಸಾಧಿ ಸಿದ್ದರೂ ಈಶ್ವರಪ್ಪ ಮನೆ ಇರುವ ಮಲ್ಲೇಶ್ವರ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಯೋಗೀಶ್‌ ಸತತ ಮೂರನೇ ಬಾರಿ ಜಯಗಳಿಸಿದ್ದು,ಈಶ್ವರಪ್ಪ ಮುಖಭಂಗ ಎದುರಿಸಿದ್ದಾರೆ. ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಎಂಎಲ್‌ಸಿ ಎಸ್‌.ರುದ್ರೇಗೌಡ ಮನೆ ಇರುವ ಗಾಂಧಿ ನಗರ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ನಾಗರಾಜ್‌ ಕಂಕಾರಿ ಸತತ ಮೂರನೇ ಜಯಗಳಿಸಿದ್ದು, ಇಬ್ಬರು ಶಾಸಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ವಿಫಲರಾಗಿದ್ದಾರೆ.

ವಿಜಯೋತ್ಸವ ಆಚರಣೆ ವೇಳೆ ಹಲ್ಲೆ
ಚಿಕ್ಕೋಡಿ:
ಪುರಸಭೆ ವಾರ್ಡ್‌ ನಂ 8ರಲ್ಲಿ ಗೆಲುವು ಸಾಧಿಸಿದ ಇರ್ಫಾನ್‌ ಬೇಪಾರಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಮಾಜಿ ಸದಸ್ಯ ಅಸ್ಲಂ ಬೇಪಾರಿ ಮನೆ ಮುಂದೆ ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಆಗ ಇರ್ಫಾನ್‌ ಹಾಗೂ ಅಸ್ಲಂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ, ಇರ್ಫಾನ್‌ ಬೆಂಬಲಿಗ ಸೋಹಲ್‌ ಗಾಯಗೊಂಡಿದ್ದಾರೆ.

ಅತ್ತೆಯನ್ನೇ ಸೋಲಿಸಿದ ಸೊಸೆ
ಚನ್ನರಾಯಪಟ್ಟಣ:
ಪುರಸಭೆಯ 9ನೇ ವಾರ್ಡಿನಲ್ಲಿ ಕಾಂಗ್ರೆಸ್‌ನ ಉಷಾಮಣಿಯವರು ತಮ್ಮ ಸ್ವಂತ ಅತ್ತೆ, ಜೆಡಿಎಸ್‌ನ ಭಾಗ್ಯಮ್ಮ ಅವರನ್ನು 77 ಮತಗಳಿಂದ ಸೋಲಿಸಿದ್ದಾರೆ.

ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಮೇಲುಗೈ
ಬೆಂಗಳೂರು:
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಹಾಲಿ
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರ ತವರು ಜಿಲ್ಲೆಗಳ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ
ಮೇಲುಗೈ ಸಾಧಿಸಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯನ್ನು ನೆಚ್ಚಿಕೊಳ್ಳಬೇಕಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ತನ್ನದಾಗಿಸಿಕೊಂಡಿದೆ. ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಈ ಮಹಾನಗರ ಪಾಲಿಕೆ ಯಡಿಯೂರಪ್ಪ ಹಾಗೂ ಕೆ.ಎಸ್‌. ಈಶ್ವರಪ್ಪ ಪಾಲಿಗೆ ಪ್ರತಿಷ್ಠೆಯಾಗಿತ್ತು. 35 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಇಬ್ಬರು ನಾಯಕರು ಗೆಲುವಿನನಗೆ ಬೀರಿದ್ದಾರೆ. ಕಾಂಗ್ರೆಸ್‌ 7 ಸ್ಥಾನಕಷ್ಟೇ ಸೀಮಿತವಾಗಿದೆ. ಜೆಡಿಎಸ್‌ 2 ಸ್ಥಾನ ಗೆದ್ದಿದ್ದರೆ, 6 ಮಂದಿ ಪಕ್ಷೇತರರು ಗೆದ್ದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಮಹಾನಗರ ಪಾಲಿಕೆಯಲ್ಲಿ 65 ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನ ಗೆದ್ದು ಮೇಲುಗೈ ಸಾಧಿಸಿದೆ. 19 ಸ್ಥಾನ ಗೆದ್ದು ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡಿದೆ. 18 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್‌ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಿಚ್ಚಳವಾಗಿದೆ. ಹಾಲಿ ಉಪಮುಖ್ಯಮಂತ್ರಿ ಪರಮೇಶ್ವರ್‌ಅವರ ತವರು ಜಿಲ್ಲೆ ತುಮಕೂರು ಮಹಾನಗರ ಪಾಲಿಕೆಯಲ್ಲಿ 35 ಸ್ಥಾನಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ತಲಾ 10 ಸ್ಥಾನ ಗೆದ್ದು ಸಮಬಲ ಕಾಯ್ದುಕೊಂಡಿದ್ದರೆ, 12 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇಲ್ಲೂ ಸಹ ದೋಸ್ತಿ ಕೆಲಸ ಮಾಡಲಿದೆ.

ಅಪ್ಪ-ಮಗ ಜಯ; ಪತಿ-ಪತ್ನಿ ಹ್ಯಾಟ್ರಿಕ್‌
ಖಾನಾಪುರ
: ಖಾನಾಪುರ ಪಟ್ಟಣ ಪಂಚಾಯತ್‌ನ ವಾರ್ಡ್‌ವೊಂದರಲ್ಲಿ ರμàಕ ಖಾನಾಪುರಿ ಜಯ ಗಳಿಸಿದರೆ, 12ನೇ ವಾರ್ಡಿನಲ್ಲಿ ಅವರ ಪುತ್ರ ಮಝರ್‌ ಖಾನಾಪುರಿ ಗೆಲುವು ಪಡೆದರು. ತಂದೆ ಮತ್ತು ಮಗ ಏಕಕಾಲಕ್ಕೆ ಸದಸ್ಯರಾಗಿ ಇಲ್ಲಿ ಆಯ್ಕೆಯಾಗಿರುವುದು ಇದೇ ಮೊದಲು. ಈ ಮಧ್ಯೆ, 5ನೇ ವಾರ್ಡಿನಿಂದ ಸಿಧ್ದೋಜಿ ಗಾವಡೆ ಜಯ ಗಳಿಸಿದರೆ ಅವರ ಪತ್ನಿ ಶೋಭಾ ಗಾವಡೆ 14 ನೇ ವಾರ್ಡಿನಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ಸಿದ್ದು ಗಾವಡೆ ಹಾಗೂ ಶೋಭಾ ಗಾವಡೆ ಸತತ ಮೂರನೇ ಬಾರಿ ಜಯಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಮತ ಎಣಿಕೆ ಕೇಂದ್ರದಲ್ಲೇ ನಮಾಜ್‌
ವಿಜಯಪುರ:
ಮುದ್ದೇಬಿಹಾಳ ಪುರಸಭೆಯ 20ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ, ಮೆಹಬೂಬ ಗೊಳಸಂಗಿಯವರು ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದಲ್ಲೇ ನೆಲಕ್ಕೆ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಕಳೆದ ಬಾರಿ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದ ಮೆಹಬೂಬ, ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.

ಆದರೆ, ಸೋಲುವ ಭೀತಿಯಿಂದ ದೇವರ ಮೊರೆ ಹೋಗಿದ್ದ ಮೆಹಬೂಬ, ಅಂತಿಮವಾಗಿ 82 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

ಒಂದು ಮತದಿಂದ ಇಬ್ಬರ ಗೆಲುವು
ಹುಮನಾಬಾದ:
ಹಳ್ಳಿಖೇಡ(ಬಿ) ಪುರಸಭೆಯ 2ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಮರಳಿ ಅವರು 258 ಮತ ಪಡೆದು ವಿಜಯ ಸಾಧಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಸಂಗೀತಾ ಶಾಮಣ್ಣ ಅವರು 257 ಮತ ಪಡೆದು ಕೇವಲ 1 ಮತದಿಂದ ಪರಾಭವಗೊಂಡಿದ್ದಾರೆ. 21ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಹುರಮತ್‌ ಬೇಗಂ 121 ಮತಗಳನ್ನು ಪಡೆದು ವಿಜಯ ಸಾ ಧಿಸಿದರೆ, ಬಿಜೆಪಿ ಅಭ್ಯರ್ಥಿ ವಿಜಯಲಕ್ಷಿ ¾à ನೆಹರು 120 ಮತ ಪಡೆದು ಕೇವಲ 1 ಮತದಿಂದ ಪರಾಭವಗೊಂಡಿದ್ದಾರೆ. 15ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧನರಾಜ ಹಮೀಲಪೂರಕರ್‌ ಒಂದೂ ಮತ ಪಡೆಯಲಾಗದೇ ಶೂನ್ಯಸಾಧನೆ ಮಾಡಿದ್ದಾರೆ.


Trending videos

Back to Top