CONNECT WITH US  

ಸಚಿವ ಸ್ಥಾನಕ್ಕೆ ಹೆಚ್ಚುತ್ತಿದೆ ಆಕಾಂಕ್ಷಿಗಳ ಪಟ್ಟಿ

ಶಾಸಕರ ಮನವೊಲಿಕೆಗೆ ರಾಜ್ಯ ಕಾಂಗ್ರೆಸ್‌ ನಾಯಕರ ತೀವ್ರ ಕಸರತ್ತು

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಅವರ ಮನವೊಲಿಕೆ ಮಾಡಿ ಸರ್ಕಾರಕ್ಕೆ ಯಾವುದೇ ವಿಘ್ನ ಬರದಂತೆ ನೋಡಿಕೊಳ್ಳಲು ಪ್ರಮುಖ ನಾಯಕರು ಪ್ರಯತ್ನ ನಡೆಸಿದ್ದಾರೆ. ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲು ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ನಂತರ ಸಚಿವಾಕಾಂಕ್ಷಿಗಳು ತಮ್ಮನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಹಿರಿಯ ನಾಯಕರಿಗೆ ಒತ್ತಡ ಹೇರಲು ಆರಂಭಿಸಿದ್ದಾರೆ.

ಖಾಲಿ ಇರುವ ಆರು ಸ್ಥಾನಗಳಿಗೆ ಇಪ್ಪತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿರುವುದರಿಂದ ಪಕ್ಷದ ರಾಜ್ಯ ನಾಯಕರು ಆಕಾಂಕ್ಷಿಗಳನ್ನು ದೂರವಾಣಿ ಮೂಲಕ ಅಥವಾ ನೇರವಾಗಿ ತಮ್ಮ ಮನೆಗೆ ಕರೆಸಿಕೊಂಡು ಮುಂದಿನ ಅವಧಿಯಲ್ಲಿ ಅವಕಾಶ ಮಾಡಿಕೊಡುವ ಭರವಸೆ ನೀಡಿ,
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತ್ಯೇಕವಾಗಿ ಸಚಿವಾಕಾಂಕ್ಷಿಗಳನ್ನು ಮನವೊಲಿಸುವ ಕಾರ್ಯ ಆರಂಭಿಸಿದ್ದು, ಸಚಿವಾಕಾಂಕ್ಷಿಗಳಾಗಿರುವ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್‌,
ಭದ್ರಾವತಿಯ ಬಿ.ಕೆ.ಸಂಗಮೇಶ್‌, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌, ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್‌ ಸೇರಿ ಹತ್ತಕ್ಕೂ ಹೆಚ್ಚು ಶಾಸಕರನ್ನು ಪ್ರತ್ಯೇಕವಾಗಿ ಮಾತನಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.  ಸಚಿವಾಕಾಂಕ್ಷಿಗಳು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಸಚಿವ ಸ್ಥಾನ ನೀಡದಿದ್ದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದು ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

ಬಿ.ಕೆ.ಸಂಗಮೇಶ್‌ ತಾವು ಮೂರು ಬಾರಿ ಜಯಗಳಿಸಿದ್ದು, ಈ ಬಾರಿಯೂ ಸಚಿವ ಸ್ಥಾನ ನೀಡದಿದ್ದರೆ ಯಾವುದೇ ಹುದ್ದೆ ಬೇಡವೆಂದು ಹೇಳಿದ್ದಾರೆ. ಡಾ.ಸುಧಾಕರ್‌ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸದಿದ್ದರೆ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈಗ ಶಿವಶಂಕರ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಎರಡು ವರ್ಷಗಳ ನಂತರ ಸುಧಾಕರ್‌ಗೆ ನೀಡುವುದಾಗಿ ನಾಯಕರು ಭರವಸೆ ನೀಡಿದ್ದಾರೆ. ಇದನ್ನು ಸುಧಾಕರ್‌ ಒಪ್ಪಿಕೊಂಡಿಲ್ಲ .

ಖಾಲಿ ಇಡುವ ಲೆಕ್ಕಾಚಾರ: ಹೆಚ್ಚಾಗುತ್ತಿರುವ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವುದು ಕಷ್ಟದ ಕೆಲಸವಾಗಿರುವುದರಿಂದ ಕೈ ನಾಯಕರು ಖಾಲಿ ಇರುವ ಆರು ಸ್ಥಾನಗಳನ್ನು ಏಕಕಾಲಕ್ಕೆ ಭರ್ತಿ ಮಾಡದೇ ಎರಡು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ಕುರಿತಂತೆಯೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ, ಎಂ.ಬಿ ಪಾಟೀಲ್‌ ಅವರನ್ನೂ ಸಂಪುಟದಿಂದ ಹೊರಗಿಡಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಎಂ.ಬಿ. ಪಾಟೀಲ್‌ ಸಹೋದರ ಸುನೀಲ್‌ ಪಾಟೀಲ್‌ಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಟಿಕೆಟ್‌ ನೀಡಿರುವುದರಿಂದ ಒಂದೇ ಮನೆಯಲ್ಲಿ ಇಬ್ಬರಿಗೆ
ಅವಕಾಶ ನೀಡಿರುವುದರಿಂದ ಅವರನ್ನು ಸಂಪುಟಕ್ಕೆ ಸೇರಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಅವರನ್ನೂ ಸಂಪುಟದಿಂದ ಹೊರಗಿಡಲು ಉಪ ಮುಖ್ಯಮಂತ್ರಿ ಪರಮೇಶ್ವರ್‌ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ರಾಮಲಿಂಗಾ ರೆಡ್ಡಿಗೆ ಅಧಿಕಾರ ನೀಡಿದರೆ ಬೆಂಗಳೂರು ಉಸ್ತುವಾರಿ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ಪರಮೇಶ್ವರ್‌ ಈ
ಪ್ರಯತ್ನ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ರಾಮಲಿಂಗಾ ರೆಡ್ಡಿಯನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಲೋಕಸಭೆ ಚುನಾವಣೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎನ್ನುವುದು ಕೆಲವು ನಾಯಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ
ಬೆಂಗಳೂರಿನ ಶಾಸಕರು ಮತ್ತು ಪರಮೇಶ್ವರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನಲಾಗಿದೆ. ಜಾತಿ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ಕುರುಬ, ಲಿಂಗಾಯತ, ಅಲ್ಪಸಂಖ್ಯಾತ, ವಾಲ್ಮೀಕಿ ಹಾಗೂ ದಲಿತ ಸಮುದಾಯದವರಿಗೆ ಸಚಿವ ಸ್ಥಾನ ನೀಡಬೇಕಿರುವುದರಿಂದ
ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಮಾಡುವುದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಸಂಪುಟ ವಿಸ್ತರಣೆಗೂ ಮೊದಲೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Trending videos

Back to Top