CONNECT WITH US  

ಶಿರಾಡಿ ಘಾಟಿಯಲ್ಲಿ ಸಂಚರಿಸಲು ಲಘು ವಾಹನಗಳಿಗೆ ಅವಕಾಶ

ಸಕಲೇಶಪುರ:  ಮಂಗಳೂರು ಹಾಸನ ಮಾರ್ಗದ ಶಿರಾಡಿ ಘಾಟಿ ಬುಧವಾರ ಮಧ್ಯಾಹ್ನದಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಂಗಳವಾರ ಸಂಜೆಯೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರದಿಂದ ಶಿರಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಬುಧವಾರ ಬೆಳಗ್ಗೆಯಿಂದಲೇ ವಾಹನ ಸವಾರರು ದೋಣಿಗಾಲ್‌ ಚೆಕ್‌ಪೋಸ್ಟ್‌ ಸಮೀಪ ಗೇಟು ತೆರೆಯುವವರೆಗೂ ಕಾದುನಿಂತಿದ್ದರು.

ಇದೇ ವೇಳೆ ಜಿಲ್ಲಾಧಿಕಾರಿಗಳ ಆದೇಶ ಪ್ರತಿ ತಾಲೂಕು ಆಡಳಿತಕ್ಕೆ ಸಿಗುವುದು ತಡವಾಗಿದ್ದರಿಂದ ಬುಧವಾರ ಮಧ್ಯಾಹ್ನದ ವೇಳೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು. ಇದರಿಂದ ದೋಣಿಗಾಲ್‌ ಚೆಕ್‌ ಪೋಸ್ಟ್‌ ಸಮೀಪ ವಾಹನಗಳ ದಟ್ಟಣೆ ಉಂಟಾಗಿತ್ತು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿಯ ಅಲ್ಲಲ್ಲಿ ಭೂಕುಸಿತ ಉಂಟಾಗಿ ರಸ್ತೆ ಬಂದ್‌ ಆಗಿತ್ತು. ಇದರಿಂದ ಮಂಗಳೂರು ಕಡೆಗೆ ಹೋಗುವವರಿಗೆ ಸಂಪರ್ಕವೇ ಇಲ್ಲದಂತಾಗಿತ್ತು. ಶಿರಾಡಿ ಘಾಟಿ ಬಂದ್‌ ಆಗಿದ್ದರಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು ಭಾಗಕ್ಕೆ ಹೋಗುವವರು ಚಾರ್ಮಾಡಿಯನ್ನೇ ಅವಲಂಬಿಸುವಂತಾಗಿ ಅಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈಗ ಶಿರಾಡಿ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದರಿಂದ ಚಾರ್ಮಾಡಿಯ ಟ್ರಾಫಿಕ್‌ ಸ್ವಲ್ಪ ಕಡಿಮೆಯಾಗಲಿದೆ.

"ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ. ಯಾವುದೇ ಅನಾಹುತ ಸಂಭವಿಸಿದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಹೊಣೆ' ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.


Trending videos

Back to Top