CONNECT WITH US  

ಗಂಗಾವತಿ ನಗರಸಭೆಯಲ್ಲಿ ಆಪರೇಷನ್‌ ಕಮಲ?

ಗಂಗಾವತಿ: ಇಕ್ಬಾಲ್‌ ಅನ್ಸಾರಿ ಪ್ರಭಾವ ಹೊಂದಿರುವ ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವುದರಿಂದ ಅಧಿಕಾರ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್‌, ಬಿಜೆಪಿ ಕಸರತ್ತು ನಡೆಸಿವೆ. 

ಈ ನಡುವೆ ಫ‌ಲಿತಾಂಶ ಬಂದ ಕ್ಷಣದಿಂದಲೇ ಪಕ್ಷೇತರ ಸದಸ್ಯರಾದ ಶರಭೋಜಿರಾವ್‌ ಹಾಗೂ ಸಿ. ವೆಂಕಟರಮಣ ಜತೆ ಕೆಲ ಬಿಜೆಪಿ ಸದಸ್ಯರು ಅನಾಮಧೇಯ ಸ್ಥಳಕ್ಕೆ ತೆರಳಿದ್ದಾರೆ. ಕಾಂಗ್ರೆಸ್‌ ಮುಖಂಡರ ಸಂಪರ್ಕಕ್ಕೂ ಸಿಗದೆ, ಎರಡು ದಿನಕ್ಕೊಮ್ಮೆ ತಾವಿರುವ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

35 ವಾರ್ಡ್‌ಗಳ ಪೈಕಿ 17ರಲ್ಲಿ ಕಾಂಗ್ರೆಸ್‌, 14 ಬಿಜೆಪಿ, 2 ಜೆಡಿಎಸ್‌ ಹಾಗೂ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಮ್ಯಾಜಿಕ್‌ ಸಂಖ್ಯೆಗೆ ಉಭಯ ಪಕ್ಷದ ನಾಯಕರು ಕಸರತ್ತು ನಡೆಸಿದ್ದಾರೆ. ಬಿಜೆಪಿಗೆ ಇಬ್ಬರು ಪಕ್ಷೇತರರು ಬೆಂಬಲ ನೀಡಿದರೂ ಇನ್ನೂ ಎರಡು ಕೊರತೆ ಬೀಳುತ್ತವೆ. ಆದರೆ, ಜೆಡಿಎಸ್‌ ಸದಸ್ಯರಿಗೆ ಕಾಂಗ್ರೆಸ್‌ ಜತೆ ಕೈ ಜೋಡಿಸುವುದು ಇಷ್ಟವಿಲ್ಲ. ಹೀಗಾಗಿ ಅವರೂ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಜೆಡಿಎಸ್‌ ಸದಸ್ಯರಿಗೆ ಸಿಎಂ ಕುಮಾರಸ್ವಾಮಿ ಬುಲಾವ್‌ ಬಂದಿದ್ದರಿಂದ ಬೆಂಗಳೂರಿಗೆ ತೆರಳಿದ್ದಾರೆ.

ನಗರಸಭೆ ಚುನಾವಣೆಯ ಪ್ರಚಾರ ವೇಳೆ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಬಿಚ್ಚಗತ್ತಿ ಮನೆಯವರನ್ನು ಸೋಲಿಸುವಂತೆ ಕರೆ ನೀಡಿ ಅವಮಾನ ಮಾಡಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಜತೆ ಹೋಗದಿರಲು ಜೆಡಿಎಸ್‌ ಸದಸ್ಯ ಮಹಮದ್‌ ಉಸ್ಮಾನ್‌ ಆಪ್ತರಿಗೆ ತಿಳಿಸಿದ್ದಾರೆ. ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಎಚ್‌.ಆರ್‌. ಶ್ರೀನಾಥ ಸಹ ಉಸ್ಮಾನ್‌ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.


Trending videos

Back to Top