CONNECT WITH US  

ಬೆಳಗಾವಿ ಪಿಎಲ್‌ಡಿ ಕದನ ಕುತೂಹಲ:ಸಂಧಾನವೋ?ಸಂಗ್ರಾಮವೋ? 

ಬೆಳಗಾವಿ: ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯ ಪ್ರಕ್ರಿಯೆಗಳು ಬಿರುಸಿನಿಂದ ನಡೆಯುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕೆಪಿಸಿಸಿ ಸಂಧಾನ ಯಶಸ್ವಿಯಾಗುವುದೋ, ಸರ್ಕಾರದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವ ಪ್ರಶ್ನೆ ಮೂಡಿದೆ.

ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್‌ಕರ್‌ ನಡುವಿನ ಸಂಘರ್ಷದ ಬೆಂಕಿ ಯನ್ನು ನಂದಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಸಂಧಾನ ನಡೆಸಿದ್ದಾರೆ. 

ಸಂಧಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ 'ಎಲ್ಲೂರೂ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳು, ಎಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದಾರೆ.ಮೈತ್ರಿ ಸರ್ಕಾರ ಭದ್ರವಾಗಿದ್ದು ಯಾವುದೇ ಅಪಾಯ ಇಲ್ಲ' ಎಂದಿದ್ದಾರೆ.

ಲಕ್ಷ್ಮಿ ಗೆ ಭಾರಿ ಭದ್ರತೆ 
ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರು ಬೆಳಗ್ಗೆ ತಮ್ಮ ನಿವಾಸದಿಂದ ಪಿಎಲ್‌ಡಿ ಬ್ಯಾಂಕ್‌ಗೆ 9 ಮಂದಿ ನಿರ್ದೇಶಕರೊಂದಿಗೆ ತೆರಳಿದ್ದಾರೆ. ಅವರಿಗೆ ಬಿಗಿ ಪೊಲೀಸ್‌ ಭದ್ರತೆ ನೀಡಲಾಗಿದೆ. 

ಮನಸ್ಸಿಗೆ ನೋವಾಗಿದೆ
'ನಾನು ಸ್ಲಂನಲ್ಲಿ ಹುಟ್ಟಿರಬಹುದು,ಆದರೆ ಏನಾದರೂ ಆಗಿರಬಹುದು. ಆದರೆ ಸಂಸ್ಕೃತಿ ಯ ಎಲ್ಲೆ ಮೀರಿ ಹೋಗಿಲ್ಲ. ಜನತೆ  ಗಮನಿಸುತ್ತಿದ್ದಾರೆ. ನನಗೆ ಮನಸಿಗೆ ಭಾರೀ ನೋವಾಗಿದೆ. ಜಾರಕಿಹೊಳಿ ಅವರು ನನ್ನ ವಿರುದ್ದ ಆ ರೀತಿ ಮಾತನಾಡಬಾರದಿತ್ತು. ಹಾಗೇ ಮಾಡುವುದರಿಂದ ಅವರೇನು ಸಾಧಿಸುತ್ತಾರೆ' ಎಂದು ಕಿಡಿ ಕಾರಿದ್ದಾರೆ. 

ಗೆಲುವು ನಮ್ಮದೇ!
'ಲಕ್ಷ್ಮಿ ಅವರ ಬೆಂಬಲಿಗ ನಿರ್ದೇಶಕರಾದ ಬಾಪುಗೌಡ ಪಾಟೀಲ್‌ ಅವರು ನಮ್ಮ ಬಣವೇ ಗೆಲುವು ಸಾಧಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ನಮಗೆ ಹಣ ಪಡೆಯುವಂತಹ ಅವಶ್ಯಕತೆ ಇಲ್ಲ' ಎಂದರು. 

ರಮೇಶ್‌ ಕೊಲ್ಹಾಪುರದಲ್ಲಿ
ಸಚಿವ ರಮೇಶ್‌ ಜಾರಕಿಹೊಳಿ ಅವರು ಕೊಲ್ಹಾಪುರ ದೇವಾಲಯಕ್ಕೆ ತೆರಳಿದ್ದು , ಸಂಜೆಯೆ  ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಫ‌ಲಿತಾಂಶದತ್ತ ಕುತೂಹಲ
ಫ‌ಲಿತಾಂಶ ಪ್ರಕಟವಾಗಿ ಲಕ್ಷ್ಮಿ ಬಣ ಗೆಲುವು ಸಾಧಿಸಿದಲ್ಲಿ  ಜಾರಕಿಹೊಳಿ ಕುಟುಂಬದ ಪ್ರತಿಷ್ಠೆ ಮಣ್ಣು ಪಾಲಾಗುವುದು ಖಚಿತವಾಗಿದ್ದು , ತಕ್ಷಣ ಅವರು ಉಗ್ರ ತೀರ್ಮಾನ ಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. 

Trending videos

Back to Top