CONNECT WITH US  

ಕೇಂದ್ರ ಸರ್ಕಾರದ ವಿರುದ್ಧ ಬಂದ್‌ ಕರೆ ಖಂಡನೀಯ

ಲೀಟರ್‌ ಪೆಟ್ರೋಲ್‌ನಿಂದ ರಾಜ್ಯಕ್ಕೆ ಸಿಗುವುದು 24.98 ರೂ., ಕೇಂದ್ರದ ಪಾಲು ಕೇವಲ 6.66 ರೂ.: ಬಿಜೆಪಿ

 ಬೆಂಗಳೂರು: ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನೆಪದಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು "ಭಾರತ್‌ ಬಂದ್‌'ಗೆ ಕರೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ದೂರಿದೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪಿ.ಸಿ.ಮೋಹನ್‌, ಒಂದು ಲೀಟರ್‌ ಪೆಟ್ರೋಲ್‌ ದರದಲ್ಲಿ ರಾಜ್ಯ ಸರ್ಕಾರ 24.98 ರೂ.ಪಡೆದರೆ, ಕೇಂದ್ರ ಸರ್ಕಾರಕ್ಕೆ ಕೇವಲ 6.66 ರೂ.ಮಾತ್ರ ಸಿಗಲಿದೆ. ಹೀಗಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇರಿ ಇತರ ಪಕ್ಷಗಳು ಬಂದ್‌ಗೆ ಕರೆ ನೀಡಿರುವುದು ನ್ಯಾಯೋಚಿತವಲ್ಲ ಎಂದರು.

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಒಂದು ಲೀಟರ್‌ ಪೆಟ್ರೋಲ್‌ ದರ 33.71 ರೂ. ಇತ್ತು. ನಂತರದ 10 ವರ್ಷದ ಯುಪಿಎ ಆಡಳಿತ ಅವಧಿಯಲ್ಲಿ 38 ರೂ.ಹೆಚ್ಚಳವಾಗಿ ಪ್ರತಿ ವರ್ಷ 3.80 ರೂ.ನಷ್ಟು ಏರಿಕೆ ಕಂಡಿದೆ. ಯುಪಿಎ ಸರ್ಕಾರ 70,000 ಕೋಟಿ ರೂ.ನಷ್ಟು ತೈಲ ಬಾಂಡ್‌ ಸಾಲ ಪಡೆದಿತ್ತು.

ಬಡ್ಡಿಯೆಲ್ಲ ಸೇರಿ ಅದು 2 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಅದನ್ನು ನಂತರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮರು ಪಾವತಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಹೇಳಿದರು.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ನ್ನು ತರಬೇಕೆಂದು ಒತ್ತಾಯಿಸಲಾಗುತ್ತಿದೆ. ಸಿಎಂ ಎಚ್‌.ಡಿ.ಕುಮಾರಸ್ವಾಮಿ
ಕೂಡಾ ಪೆಟ್ರೋಲ್‌, ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಜಿಎಸ್‌ಟಿ ಜಾರಿಗೂ ಮುನ್ನ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಹಣಕಾಸು ಸಚಿವರ ಸಭೆ ಕರೆದಾಗ 15ಕ್ಕೂ ಹೆಚ್ಚು ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒಪ್ಪಲಿಲ್ಲ. ಹಾಗಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ದೂರಲಾಗುತ್ತಿದೆ ಎಂದು ಆರೋಪಿಸಿದರು.


Trending videos

Back to Top