CONNECT WITH US  

ಸರ್ಕಾರಿ ಪ್ರಾಯೋಜಿತ ಬಂದ್‌

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಖಂಡಿಸಿ ರಾಜ್ಯದಲ್ಲಿ ನಡೆದ ಬಂದ್‌ ಸರ್ಕಾರಿ ಪ್ರಾಯೋಜಿತವಾಗಿತ್ತು ಎಂದು ವ್ಯಂಗ್ಯವಾಡಿರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂದ್‌ ಹೆಸರಿನಲ್ಲಿ ಕಾಂಗ್ರೆಸ್‌ ಗಲ್ಲಿ ಗಲ್ಲಿಗಳಲ್ಲಿ ಹಿಂಸಾಚಾರ ನಡೆಸಿದ್ದಲ್ಲದೆ, ವಾಹನ ಸಂಚಾರಕ್ಕೆ ಬಲವಂತದ ತಡೆಯೊಡ್ಡಿ ಜನರಿಗೆ ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೇ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಡೆಸುತ್ತಿರುವ ಹುನ್ನಾರ ಈ ಬಂದ್‌ನಿಂದ ಬಯಲಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ರಾಜೇಶ್‌ ನಾಯಕ್‌ ಅವರ ಕಾರಿಗೆ ಕಲ್ಲು ತೂರಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರೇ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ವಿಜಯಪುರದಲ್ಲಿ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿ ಮಗು ಸಾವನ್ನಪ್ಪಲು ಕಾರಣರಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನಲ್ಲಿ ಅಂಗಡಿ ಮುಚ್ಚದ ಮಾಲೀಕರ ಮೇಲೆ ಹಲ್ಲೆ ಮಾಡಲಾಗಿದೆ. ಬಂದ್‌ ವೇಳೆ ಮೈತ್ರಿ ಸರ್ಕಾರವು ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಕೈಗೆ  ದೊಣ್ಣೆ ಕೊಟ್ಟು ಬೀದಿಗಿಳಿಸಿದೆ ಎಂದು ಆಪಾದಿಸಿದರು.


Trending videos

Back to Top