CONNECT WITH US  

ಶಾಲೆ ಕಾಲೇಜು ಸಂಪೂರ್ಣ ಬಂದ್‌

ಬೆಂಗಳೂರು : ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಮತ್ತು ಶಿಕ್ಷಣ ಸಂಸ್ಥೆಗಳು ಪರೋಕ್ಷವಾಗಿ ಬಂದ್‌ಗೆ ಬೆಂಬಲ ನೀಡಿದಂತಾಗಿದೆ.

ಸರ್ಕಾರಿ ಶಾಲೆಗಳ ಸಹಿತವಾಗಿ ರಾಜ್ಯದ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲಾಡಳಿತ ಮಂಡಳಿಗಳು ಭಾನುವಾರ ಸಂಜೆಯೇ ಸೋಮವಾರದ ರಜೆ ಖಚಿತಪಡಿಸಿದ್ದರಿಂದ ಪಾಲಕ-ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ಖಾಸಗಿ ಶಾಲಾಡಳಿತ ಮಂಡಳಿಗಳು ತರಗತಿ ಕೊಠಡಿ ಸಹಿತವಾಗಿ ಶಾಲೆಯ ಪರಿಕರಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಭಾನುವಾರವೇ ತೆಗೆದುಕೊಂಡಿದ್ದರು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ, ಮಂಗಳೂರು, ರಾಯಚೂರು, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ, ಶಿವಮೊಗ್ಗ ಸಹಿತವಾಗಿ ರಾಜ್ಯದ ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾನುವಾರ ಸಂಜೆಯೇ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿದ್ದರು. ಹೀಗಾಗಿ ರಾಜ್ಯದ ಯಾವುದೇ ಶಾಲಾ, ಕಾಲೇಜು ಸೋಮವಾರ ತೆರೆದಿರಲಿಲ್ಲ. ಕೆಲವೊಂದು ಜಿಲ್ಲೆಯ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಕ, ಉಪನ್ಯಾಸಕರು ಸೋಮವಾರವೂ ಶಾಲಾ ಕಾಲೇಜಿಗೆ ಹೋಗಿ ಆಡಳಿತಾತ್ಮಕ ಕೆಲಸ ನಡೆಸಿದ್ದಾರೆ. ಎಲ್ಲಿಯೂ ತರಗತಿಗಳು ನಡೆದಿಲ್ಲ ಎಂದು ಶಿಕ್ಷಣ ಇಲಾಖೆ ಖಚಿತ ಪಡಿಸಿದೆ.

ಖಾಸಗಿ ಶಾಲಾಡಳಿತ ಮಂಡಳಿಗಳು ಬಂದ್‌ನಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು ಅಥವಾ ಶಾಲೆಯ ಪರಿಕರಗಳ ನಾಶವಾಗ ಬಹುದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳು ರಜಾ ಘೋಷಣೆ ಮಾಡುವ ಮೊದಲೇ ತಮ್ಮ ಶಾಲೆಗಳಿಗೆ ರಜೆ ನೀಡಿ, ಪಾಲಕ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರ ಮಾಹಿತಿ ನೀಡಿದ್ದರು. ಹೀಗಾಗಿ ಸೋಮವಾರ ಖಾಸಗಿ ಶಾಲೆಗಳಲ್ಲೂ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆದಿಲ್ಲ.

ಖಾಸಗಿ ಶಾಲೆಗಳು ಸೋಮವಾರ ತರಗತಿಯನ್ನು ಶನಿವಾರ ಮಧ್ಯಾಹ್ನ ಅಥವಾ ಬೇರ್ಯಾವುದಾದರು ಸರ್ಕಾರಿ ರಜಾ ದಿನದಲ್ಲಿ ನಡೆಸುವ ಸಾಧ್ಯತೆ ಇದೆ. ಆದರೆ, ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜಾ ಕಡಿತಗೊಳಿಸಿ, ಅದರಲ್ಲೇ ಸೋಮವಾರದ ತರಗತಿಯನ್ನು ಸೇರಿಸುವ ಸಾಧ್ಯತೆ ಇದೆ.

Trending videos

Back to Top