CONNECT WITH US  

ಎರಡನೇ ಬಾರಿಯೂ ಚಲಿಸುವ ರೈಲಲ್ಲೇ ಹೆರಿಗೆ

ರಾಯಬಾಗ: ಓಡುವ ರೈಲಿಗೂ ರಾಯಬಾಗದ ಯಲ್ಲವ್ವನಿಗೂ ಏನೋ ಕನೆಕ್ಷನ್‌ ಇದ್ದಂತಿದೆ. ಸೋಮವಾರ ಹೆರಿಗೆಗೆಂದು ಸ್ವಗ್ರಾಮಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯೆ ಈಕೆಗೆ ಹೆರಿಗೆಯಾಗಿದೆ. ವಿಶೇಷ ಇದಲ್ಲ. ಕಳೆದ ವರ್ಷವೂ ಇದೇ ರೈಲಿನಲ್ಲಿ ಈಕೆಗೆ ಹೆರಿಗೆಯಾಗಿದ್ದು, ಎರಡು ಬಾರಿಯೂ ಗಂಡು ಮಕ್ಕಳೇ ಜನಿಸಿರುವುದು ವಿಶೇಷ.

ಸುಲಲಿತ ಹೆರಿಗೆಯಾಗಿ ಈಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳಿಸಲು ಅನುಕೂಲ ಕಲ್ಪಿಸಲು  ರೈಲು ಅರ್ಧ ಗಂಟೆಗೂ ಹೆಚ್ಚುಕಾಲ ರಾಯಬಾಗ ರೈಲ್ವೆ ನಿಲ್ದಾಣದಲ್ಲಿ ನಿಂತು ನಂತರ ಚಲಿಸಿದೆ. ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ. ಆರ್‌.ಎಚ್‌.ರಂಗಣ್ಣವರ ತಿಳಿಸಿದ್ದಾರೆ.

ಯಾವಾಗ ಹೆರಿಗೆ?: ಕೊಲ್ಲಾಪುರ- ಹೈದರಾಬಾದ್‌ ರೈಲಿನಲ್ಲಿ ರಾಯಬಾಗ ತಾಲೂಕಿನ ಶಾಹುಪಾರ್ಕ್‌ ಗ್ರಾಮದ ಯಲ್ಲವ್ವ ಮಯೂರ ಗಾಯಕವಾಡ (23)  ಬೆಳಗ್ಗೆ 7 ಗಂಟೆಗೆ ರಾಯಬಾಗದತ್ತ ಪ್ರಯಾಣಿಸುತ್ತಿದ್ದರು. ರೈಲು ಚಿಂಚಲಿ ರೈಲ್ವೆ ನಿಲ್ದಾಣಕ್ಕೆ ಬಂದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ರಾಯಬಾಗ ಸ್ಟೇಶನ್‌ಗೆ ಬರುವಷ್ಟರಲ್ಲಿ ಚಲಿಸುವ ರೈಲಿನಲ್ಲಿಯೇ ಈಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.  ಕೂಡಲೇ ಸಹ ಪ್ರಯಾಣಿಕರು ಆಂಬ್ಯುಲೆನ್ಸ್‌ಗೆ  ಕರೆಮಾಡಿ ರಾಯಬಾಗ ಸರಕಾರಿ  ಆಸ್ಪತ್ರೆಗೆ ಮಹಿಳೆ ಹಾಗೂ ಮಗುವನ್ನು ಕಳುಹಿಸಿದ್ದಾರೆ.

ಮಹಿಳೆಯ ಕುಟುಂಬದವರು 7-8 ವರ್ಷಗಳಿಂದ  ಕೊಲ್ಲಾಪುರದಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದಾರೆ. ಕಳೆದ ವರ್ಷ ಕೂಡ ಈಕೆ ಇದೇ ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಗ ಸ್ವಗ್ರಾಮಕ್ಕೆ ಬರುವ ಸಮಯದಲ್ಲಿ ಹಾತಗಣಂಗಲಾ ರೈಲ್ವೆ ಸ್ಟೇಶನ್‌ನಲ್ಲಿ ಹೆರಿಗೆಯಾಗಿತ್ತು.


Trending videos

Back to Top