CONNECT WITH US  

ಏಕ ವೇದಿಕೆಯಲ್ಲಿ ಗಣೇಶ-ಪಾಂಜಾ

ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ 13ಕ್ಕೆ ಗಣಪ, 16ಕ್ಕೆ ಪಾಂಜಾಗಳ ಪ್ರತಿಷ್ಠಾಪನೆ

ಪಾಂಜಾ ದೇವರ ಮೆರವಣಿಗೆ(ಸಂಗ್ರಹ ಚಿತ್ರ)

ಹುಬ್ಬಳ್ಳಿ: ಈ ಬಾರಿ ಹುಬ್ಬಳ್ಳಿಯ ಕೆಲವೆಡೆ ಗಣೇಶನ ಜತೆಗೆ ಮುಸ್ಲಿಮರ "ಪಾಂಜಾ ದೇವರು' ಕೂಡ ಪ್ರತಿಷ್ಠಾಪನೆಗೊಳ್ಳಲಿದ್ದಾನೆ!

36 ವರ್ಷಗಳ ನಂತರದಲ್ಲಿ ಗಣೇಶ ಉತ್ಸವ ಹಾಗೂ ಮೊಹರಂ ಹಬ್ಬ ಏಕಕಾಲಕ್ಕೆ ಬಂದಿದ್ದು, ನಗರದ ಕೆಲವು ಕಡೆ ಒಂದೇ ಮಂಟಪದಲ್ಲಿ ಗಣೇಶ ಮೂರ್ತಿ ಹಾಗೂ ಪಾಂಜಾ ದೇವರನ್ನು ಪ್ರತಿಷ್ಠಾಪಿಸಲು ಹಿಂದೂ-ಮುಸ್ಲಿಂ ಸಮುದಾಯದವರು ನಿರ್ಧರಿಸಿದ್ದಾರೆ. ಈ ಮೂಲಕ ಕೋಮು ಸೌಹಾರ್ದದ ಅರಿವು ಮೂಡಿಸಲು ಮುಂದಾಗಿದ್ದಾರೆ.

ಇಲ್ಲಿನ ಬಮ್ಮಾಪುರ ಓಣಿಯ ವಿಘ್ನೇಶ್ವರ ಉತ್ಸವ ಸಮಿತಿ ಹಾಗೂ ಸೈಯದ್‌ ಸಾದರ ಜಮಾತಗಳು ಎಲ್ಲ ಸಿದ್ಧತೆ ಮಾಡಿಕೊಂಡಿವೆ. ಓಣಿಯ ಹಿಂದೂ-ಮುಸ್ಲಿಂ ಸಮುದಾಯದ ಹಿರಿಯರು ಒಂದೇ ಮಂಟಪದಲ್ಲಿ ಗಣೇಶ ಹಾಗೂ ಮೊಹರಂನ ಪಾಂಜಾ ದೇವರುಗಳ ಪ್ರತಿಷ್ಠಾಪಿಸಲು ಚರ್ಚೆ ನಡೆಸಿದ್ದಾರೆ.

ಸೆ.13ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣಪತಿ 9 ದಿನಗಳ ಕಾಲ ವಿಶೇಷ ಪೂಜೆಯೊಂದಿಗೆ ನಿರ್ಗಮಿಸಲಿದ್ದಾನೆ. ಇನ್ನು ಸೆ.16ರಂದು ಮೊಹರಂ ಹಬ್ಬದ ಪಾಂಜಾಗಳು ಪ್ರತಿಷ್ಠಾಪನೆಗೊಳ್ಳಲಿವೆ. ಇದಕ್ಕಾಗಿ ಈಗಾಗಲೇ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಮಂಡಳದ ಪದಾಧಿಕಾರಿಗಳಾದ ವಿನಾಯಕ ಹೊಸಕೇರಿ ಹಾಗೂ ಸುನೀಲ ಮಿರ್ಜಿ ಹೇಳಿದ್ದಾರೆ.

ಬಿಡ್ನಾಳ ಗ್ರಾಮದಲ್ಲೂ ಹಿಂದೂ-ಮುಸ್ಲಿಂ ಸಮುದಾಯದವರು ಕೂಡಿಕೊಂಡು ಒಂದೇ ವೇದಿಕೆಯಲ್ಲಿ ಗಣೇಶಮೂರ್ತಿ ಹಾಗೂ ಮೊಹರಂ ಹಬ್ಬದ ಪಾಂಜಾ ದೇವರುಗಳನ್ನು  ಪ್ರತಿಷ್ಠಾಪಿಸುತ್ತಿದ್ದಾರೆ. ಸುಮಾರು 20/25ರ ವೇದಿಕೆಯಲ್ಲಿ ಎರಡೂ ದೇವರುಗಳ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗುರು ಅಸುಂಡಿ, ಮಕು¤ಂಸಾಬ್‌ ಕುಸುಗಲ್ಲ, ಗಂಗಾಧರ ಕಲ್ಲಣ್ಣವರ, ಶೌಕತಅಲಿ ತುಗ್ಗಾನಟ್ಟಿ, ಮೋಹನ ನಂದಿಹಳ್ಳಿ, ಮಹ್ಮದಗೌಸ ನದಾಫ್.

ಕೇಶ್ವಾಪುರ ನಾಗಶೆಟ್ಟಿಕೊಪ್ಪದಲ್ಲಿರುವ ಮಾರುತಿ ದೇವಸ್ಥಾನ ಬಳಿ ಹಾಗೂ ಬೆಂಗೇರಿ ದರ್ಗಾ ಬಳಿ, ಸರಾಫ್ ಗಟ್ಟಿಯಲ್ಲಿ, ಹಳೇಹುಬ್ಬಳ್ಳಿಯ ಕೆಲ ಭಾಗದಲ್ಲಿ ಗಣೇಶ ಮೂರ್ತಿ ಹಾಗೂ ಮೊಹರಂ ದೇವರುಗಳನ್ನು ಅಕ್ಕಪಕ್ಕದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಏಕಕಾಲಕ್ಕೆ ಬಂದ ಹಬ್ಬಗಳು: ಗಣೇಶೋತ್ಸವ ಹಾಗೂ ಮೊಹರಂ ಹಬ್ಬಗಳು ಏಕಕಾಲದಲ್ಲಿ ಆಗಮಿಸುವುದು ವಿರಳ. ಪ್ರತಿ ವರ್ಷ ಹಿಂದೆ-ಮುಂದೆ ಬರುತ್ತಿದ್ದ ಹಬ್ಬಗಳು ಈ ಬಾರಿ ಒಂದೇ ಬಾರಿಗೆ ಆಗಮಿಸಿರುವುದು ವಿಶೇಷ. ಕಳೆದ 36 ವರ್ಷಗಳ ಹಿಂದೆ ಇದೇ ರೀತಿ ಈ ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿದ್ದವು. ಆಗ ಎರಡೂ ಸಮುದಾಯದ ಹಿರಿಯರು ಕೂಡಿಕೊಂಡು ಹಬ್ಬ ಆಚರಿಸಿರುವುದನ್ನು ಬಮ್ಮಾಪುರ ಓಣಿಯ ಹಿರಿಯರಾದ ಹನುಮಂತ ಹೂಗಾರ, ಇಷ್ಟಲಿಂಗಪ್ಪಾ ಮಿರ್ಜಿ, ಈರಣ್ಣಾ ಬಡ್ನಿ, ನಾಮದೇವ ಪಾಸ್ತೆ, ಅಬ್ಟಾಸಲಿ ನರಗುಂದ, ಮಕು¤ಂ ಅಹ್ಮದ್‌ ಬ್ಯಾಹಟ್ಟಿ, ಬಾಬಾಜಾನ ಪಾನವಾಲೆ, ಮುಸ್ತಾಕಅಹ್ಮದ್‌ ತೋಟೆಗಾರ ಮುಂತಾದ ಹಿರಿಯರು ಸ್ಮರಿಸುತ್ತಾರೆ.

- ಬಸವರಾಜ ಹೂಗಾರ
 


Trending videos

Back to Top