CONNECT WITH US  

ಭಾರತ್‌ ಬಂದ್‌ಗೆ ಉತ್ತಮ ಪ್ರತಿಕ್ರಿಯೆ​​​​​​​

ಕೆಲವೆಡೆ ಘರ್ಷಣೆ ; ರಾಜ್ಯಕ್ಕೆ ಕೋಟ್ಯಂತರ ರೂ. ನಷ್ಟ

ಭಾರತ್‌ ಬಂದ್‌ನಿಂದಾಗಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ವಾಹನ ಸಂಚಾರ ಸ್ತಬ್ಧವಾಗಿತ್ತು.

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಸೇರಿದಂತೆ
ಇತರೆ ಪಕ್ಷಗಳು ಸೋಮವಾರ ಕರೆ ನೀಡಿದ್ದ "ಭಾರತ್‌ ಬಂದ್‌' ರಾಜ್ಯದಲ್ಲಿ ಬಹುತೇಕ ಯಶಸ್ವಿಯಾಗಿದೆ.

ಸರ್ಕಾರಿ ಸಾರಿಗೆ ಬಸ್‌ಗಳು ಸೇರಿದಂತೆ ಖಾಸಗಿ ಬಸ್‌, ವಾಹನಗಳು, ಆಟೋರಿಕ್ಷಾ, ಕ್ಯಾಬ್‌, ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದ್ದರಿಂದ ಜನ ಪರದಾಡುವಂತಾಗಿತ್ತು. ಆಹಾರಧಾನ್ಯ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು, ಸರಕು ಸಾಗಣೆಯು ಬಹುಪಾಲು ಸ್ಥಗಿತವಾಗಿದ್ದರಿಂದ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜತೆಗೆ ವ್ಯಾಪಾರ, ವಾಣಿಜ್ಯ ವಹಿವಾಟಿನಲ್ಲಿನ ಏರುಪೇರಿನಿಂದಾಗಿ ಕೋಟ್ಯಂತರ ರೂ. ನಷ್ಟವಾಗಿದ್ದರೆ, ರಾಜ್ಯ ಸರ್ಕಾರಕ್ಕೂ ನೂರಾರು ಕೋಟಿ ರೂ. ತೆರಿಗೆ ಖೋತಾ ಉಂಟಾಗಿದೆ.

ಮಣಿಪಾಲ, ಮಂಗಳೂರು, ಉಡುಪಿಯಲ್ಲಿ ಕಾಂಗ್ರೆಸ್‌- ಬಿಜೆಪಿ ಕಾರ್ಯಕರ್ತರ ಘರ್ಷಣೆ,ಬಲವಂತವಾಗಿ ಹೋಟೆಲ್‌ಗ‌ಳನ್ನು ಮುಚ್ಚಿಸಿದ ಘಟನೆಗಳಿಗೆ ಸಂಬಂಧಪಟ್ಟಂತೆ ಪೊಲೀಸರು 10ಕ್ಕೂಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಉಡುಪಿಯಲ್ಲಿ ಲಾಠಿ ಪ್ರಹಾರ ನಡೆಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಕೆಲವೆಡೆ ಕಲ್ಲು ತೂರಾಟ, ಬಲವಂತವಾಗಿ ಅಂಗಡಿ, ಮುಂಗಟ್ಟು ಮುಚ್ಚಿಸಿದ ಘಟನೆಗಳನ್ನು ಹೊರತು  ಪಡಿಸಿದರೆ ಎಲ್ಲಿಯೂ ಅಹಿತಕರ ಘಟನೆ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಬಂದ್‌ಗೆ ತೆರೆ ಬೀಳುತ್ತಿದ್ದಂತೆ ಸರ್ಕಾರಿ ಸಾರಿಗೆ ಬಸ್‌ಗಳು, ಖಾಸಗಿ ಸಾರಿಗೆ ಸೇವೆಯು ಆರಂಭವಾಗಿದ್ದರಿಂದ ಸಂಜೆ ಹೊತ್ತಿಗೆ ಬಹುತೇಕ ವ್ಯಾಪಾರ- ವಹಿವಾಟು ಸಹಜ ಸ್ಥಿತಿಗೆ ಮರಳಿತು.

ಸಾರಿಗೆ ನಿಗಮಕ್ಕೆ 9.34 ಕೋಟಿ ರೂ. ನಷ್ಟ: ಕೆಎಸ್‌ಆರ್‌ಟಿಸಿ ವತಿಯಿಂದ ಸೋಮವಾರ 3,953 ಬಸ್‌ಗಳ ಸಂಚಾರ ರದ್ದಾಗಿತ್ತು. ಪರಿಣಾಮವಾಗಿ 5.34 ಕೋಟಿ ರೂ.ನಷ್ಟು ಆದಾಯ ಖೋತಾ ಉಂಟಾಗಿದೆ. ಬಿಎಂಟಿಸಿಗೂ ಸೋಮವಾರ 4 ಕೋಟಿ ರೂ. ಆದಾಯ ಕಡಿತವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ಬಂದ್‌
ಮೈಸೂರು, ಚಾಮರಾಜನಗರ, ತುಮಕೂರು, ಧಾರವಾಡ, ಗದಗ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ,ಬಳ್ಳಾರಿ, ಕಾರವಾರ, ಹುಬ್ಬಳ್ಳಿಯಲ್ಲಿ ಬಂದ್‌ ಯಶಸ್ವಿಯಾಗಿತ್ತು. ರಾಮನಗರ, ಮಂಡ್ಯ, ಬೀದರ್‌,ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ,ಬೆಳಗಾವಿ, ಬಾಗಲಕೋಟೆ, ವಿಜಯಪುರ,ಹಾವೇರಿಯಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಯಿತು.

2000 ಕೋಟಿ ನಷ್ಟ
ಸೋಮವಾರ ರಾಜ್ಯಾದ್ಯಂತ ವ್ಯಾಪಾರ, ವಾಣಿಜ್ಯ ವಹಿವಾಟು, ಕೈಗಾರಿಕೆ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನ ಆಧಾರಿತ ವಲಯದ ವಹಿವಾಟು ಬಹುತೇಕ ಸ್ಥಗಿತಗೊಂಡಿದ್ದು, ಸುಮಾರು 2000 ಕೋಟಿ ರೂ.ನಷ್ಟವಾಗಿರುವ ಅಂದಾಜು ಇದೆ. ಜತೆಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಸುಮಾರು 180 ಕೋಟಿ ರೂ. ತೆರಿಗೆ ನಷ್ಟ ಉಂಟಾಗಿದೆ. ಹಬ್ಬದ ಸಂದರ್ಭವಾದ್ದರಿಂದ ವ್ಯಾಪಾರ- ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಆದಾಯದಲ್ಲಿ ಸ್ವಲ್ಪ ಬಿಟ್ಟುಕೊಡುವ ಮೂಲಕ ಜನರ ಮೇಲಿನ ಹೊರೆ ತಗ್ಗಿಸಬೇಕು ಎಂದು ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ ಹೇಳಿದ್ದಾರೆ.

ಕೇಂದ್ರದ ವಿರುದ್ಧ ಕಿಡಿ
ನವದೆಹಲಿ:
ದೇಶಾದ್ಯಂತ ನಡೆದ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಮಿಜೋರಾಂ ಹೊರತುಪಡಿಸಿ, ಕಾಂಗ್ರೆಸ್‌ ಹಾಗೂ ವಿಪಕ್ಷಗಳು ಆಡಳಿತವಿರುವ ರಾಜ್ಯಗಳಾದ ಕರ್ನಾಟಕ, ಪಂಜಾಬ್‌, ಕೇರಳ ಮುಂತಾದೆಡೆ ಮಾತ್ರ ಬಂದ್‌ಗೆ ಬೆಂಬಲ ಸಿಕ್ಕಿತ್ತು. ಗೋವಾದಲ್ಲಿ ಪ್ರತಿಭಟನೆ ನಡೆಯಲಿಲ್ಲ. ಪುದುಚೇರಿಯಲ್ಲಿ ಮಾತ್ರ ಅಲ್ಲಲ್ಲಿ ಪ್ರತಿಭಟನೆ, ಕಲ್ಲು ತೂರಾಟ ನಡೆದವು. ಇನ್ನು, ಬಿಜೆಪಿ ಹಾಗೂ ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆ ಇತ್ತು. ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ 21 ಪಕ್ಷಗಳಿಂದ ಪ್ರತಿಭಟನೆ ನಡೆಯಿತು. ಈ ಮಧ್ಯೆ ಪ್ರತಿಭಟನೆಯಿಂದಾಗಿ ಬಿಹಾರದ ಜೆಹಾನಾಬಾದ್‌ ಜಿಲ್ಲೆಯ ಬಲಾಬಿಘಾ ಎಂಬ ಹಳ್ಳಿಯಿಂದ ಅತಿಸಾರದಿಂದ ಅಸ್ವಸ್ಥಗೊಂಡಿದ್ದ ಗೌರಿ ಕುಮಾರಿ (2) ಎಂಬ ಮಗುವೊಂದು ಆಸ್ಪತ್ರೆಗೆ ಸಕಾಲದಲ್ಲಿ ಸಾಗಿಸಲು ಸಾಧ್ಯವಾಗದಿದ್ದರಿಂದ ಸಾವನ್ನಪ್ಪಿದೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ದರವೂ ಕಮ್ಮಿ ಇದೆ. ಆದರೂ ಸೆಸ್‌ ಕಡಿಮೆ ಮಾಡುವ ಚಿಂತನೆ ಇದೆ. ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.
- ಎಚ್‌.ಡಿ.ಕುಮಾರಸ್ವಾಮಿ, ಸಿಎಂ

ಜನವಿರೋಧಿ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ವಿಪಕ್ಷಗಳು ಒಗ್ಗೂಡಬೇಕು.
- ಮನಮೋಹನ್‌ ಸಿಂಗ್‌, ಮಾಜಿ ಪ್ರಧಾನಿ

ಬಂದ್‌ನಿಂದಾಗಿ ಬಿಹಾರದಲ್ಲಿ ಮಗು ಸಾವನ್ನಪ್ಪಿದ್ದು, ಇದರ ನೈತಿಕ ಹೊಣೆಯನ್ನು ರಾಹುಲ್‌ ಗಾಂಧಿ ಹೊರುವರೇ?
- ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ


Trending videos

Back to Top