CONNECT WITH US  

ಗೌರಿಹಬ್ಬದ ಸೀರೆಗೆ ನಾರಿಯರ ಪೈಪೋಟಿ! 

15 ಸಾವಿರದ ಸೀರೆ 4,500 ರೂ.ಗೆ ಮಾರಾಟ

ಬೆಂಗಳೂರಿನಲ್ಲಿ ಸೀರೆ ಖರೀದಿಗಾಗಿ ಮುಗಿಬಿದ್ದ ಮಹಿಳೆಯರು 

ಮೈಸೂರು/ಬೆಂಗಳೂರು: ಸೀರೆ ಅಂದ್ರೆ ನೀರೆಯರಿಗೆ ಅದೆಂಥಧ್ದೋ ಖುಷಿ.... ಅದರಲ್ಲೂ ಗೌರಿ- ಗಣೇಶ ಹಬ್ಬದ ಸಂಭ್ರಮದ ವೇಳೆ ಯಲ್ಲೇ 15 ಸಾವಿರದ ರೇಷ್ಮೆ ಸೀರೆಯನ್ನು ನಾಲ್ಕೂವರೆ ಸಾವಿರಕ್ಕೆ ಕೊಡುತ್ತಾರೆಂದರೆ ಕೇಳಬೇಕೇ? ಹೌದು, ಬೆಂಗಳೂರು, ಮೈಸೂರಿನಲ್ಲಿ ಸರ್ಕಾರದ ರಿಯಾಯಿತಿ ದರದ ರೇಷ್ಮೆ ಸೀರೆಗಾಗಿ ಮಹಿಳೆಯರು ಮುಗಿಬಿದ್ದಿದ್ದಾರೆ. ಒಬ್ಬರಿಗೆ ಒಂದೇ ಸೀರೆ, ಅದರಲ್ಲೂ ಆಧಾರ್‌ ಕಾರ್ಡ್‌ ಇದ್ದವರಿಗೆ ಮಾತ್ರ ಎಂಬ ನಿಯಮಗಳು ಕೆಲ ಮಹಿಳೆಯರನ್ನು ಕೆರಳಿಸಿದ್ದು ಸರ್ಕಾರದ ಅಧಿಕಾರಿಗಳ ಜತೆಗೆ ಜಗಳಕ್ಕೂ ಇಳಿದಿದ್ದಾರೆ.

ಮುಗಿಬಿದ್ದ ಜನ: ಮಧ್ಯಮ ವರ್ಗದವರೂ ರೇಷ್ಮೆ ಸೀರೆ ಸಿಗಲಿ ಎಂಬ ಕಾರಣ ದಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಉದ್ದೇಶಿಸಿದ್ದರು. ಮೈಸೂರಿನ ಮೃಗಾಲಯದ ಎದುರಿನ ಕೆಎಸ್‌ಐಸಿ ಸಿಲ್ಕ್ ಮಳಿಗೆಯಲ್ಲಿ ಮತ್ತು ಬೆಂಗಳೂರಿನ ಕೆಂಪೇಗೌಡ ರಸ್ತೆಯ ಬಳಿಯ ಮಳಿಗೆಯಲ್ಲಿ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಮಹಿಳೆಯರು ತಮ್ಮ ಹೆಸರು ನೊಂದಾಯಿಸಲು ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತರು.

ಮಹಿಳೆಯರ ಪ್ರತಿಭಟನೆ: ಮೈಸೂರಿನಲ್ಲಿ ಹೆಸರು ನೊಂದಣಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಕೆಎಸ್‌ಐಸಿ ಅಂಗಡಿ ಮುಂಭಾಗ ಪ್ರತಿಭಟನೆ ನಡೆಸಿದರು.  ಆಧಾರ್‌ ಕಾರ್ಡ್‌ ಕಡ್ಡಾಯ ಬದಲು ಸರದಿಯಲ್ಲಿ ನಿಂತ ಎಲ್ಲರಿಗೂ ಸೀರೆ ವಿತರಣೆ ಮಾಡ ಬೇಕೆಂದು ಪಟ್ಟು ಹಿಡಿದರು. ಜತೆಗೆ ಆಧಾರ್‌ ಕಾರ್ಡ್‌ ಇಲ್ಲ ದವರಿಗೂ ಸೀರೆ ನೀಡುವಂತೆ ಒತ್ತಾಯಿಸಿದರು. ಈ ನಡುವೆ ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯರನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು.

1500 ಸೀರೆ ವಿತರಣೆ: ಸರ್ಕಾರದ ಆದೇಶದ ಮೇರೆಗೆ ಕಡಿಮೆ ದರದಲ್ಲಿ ರೇಷ್ಮೆ ಸೀರೆ ನೀಡಲಾಗುತ್ತಿದ್ದು, 1500 ಪಕ್ಕಾ ಜರಿ ರೇಷ್ಮೆ ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಲಾಟರಿ ಮೂಲಕ ಸೀರೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಇದೀಗ ರೇಷ್ಮೆ ಸೀರೆ ಖರೀದಿಸಲು ಆಧಾರ್‌  ಕಾರ್ಡ್‌ ಕಡ್ಡಾಯ ಮಾಡಲಾಗಿದ್ದು, ಆಧಾರ್‌ ಕಾರ್ಡ್‌ ಹೊಂದಿದ ಮಳೆಯರಿಗೆ ಮಾತ್ರ ಸೀರೆ ನೀಡಲಾಗುತ್ತಿದೆ.

ಐದು ಕಡೆ ವಿತರಣೆ
ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ 4,500 ರೂ.ಗೆ ರೇಷ್ಮೆ ಸೀರೆ ಖರೀದಿಸಲು ಮೈಸೂರು ಸೇರಿದಂತೆ ರಾಮನಗರ, ಬೆಳಗಾವಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಕೆಎಸ್‌ಐಸಿ ಮಳಿಗೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ರಾತ್ರಿ 8 ಗಂಟೆಯಾದರೂ ಸೀರೆ ಖರೀದಿಗೆಂದು ಬಂದಿದ್ದ ಮಹಿಳೆಯರು ಮನೆಗೆ ಹೋಗಲು ಒಪ್ಪಲಿಲ್ಲ. ಕಡೆಗೆ ಪೊಲೀಸರ ಮನವಿ ಮೇರೆಗೆ ಬುಧವಾರ ವಾಪಸ್‌ ಬರುವುದಾಗಿ ಹೇಳಿ ಹೋದರು.


Trending videos

Back to Top