CONNECT WITH US  

ಬಿಎಸ್‌ವೈ ವಿರುದ್ಧ ಎಸಿಬಿ ಅಸ್ತ್ರ?

ಬೆಂಗಳೂರು: ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆಂಬ ಮಾತುಗಳ ಬೆನ್ನಲ್ಲೇ ಯಡಿಯೂರಪ್ಪ ವಿರುದ್ಧದ ಕಾಂಗ್ರೆಸ್‌ ಶಾಸಕರಿಗೆ ಹಣ ಹಾಗೂ ಸಚಿವಸ್ಥಾನದ ಆಮಿಷವೊಡ್ಡಿದ್ದರು ಎಂಬ ಆರೋಪಕ್ಕೆ ಮರುಜೀವ ಬಂದಿದೆ. ಯಡಿಯೂರಪ್ಪ, ಗಾಲಿ ಜನಾರ್ದನ ರೆಡ್ಡಿ ಸೇರಿ ಹಲವು ಬಿಜೆಪಿ ನಾಯಕರು ದೂರವಾಣಿ ಮೂಲಕ ಆಮಿಷವೊಡ್ಡಿದ್ದರೆಂದು ಆರೋಪಿಸಿ ಸಲ್ಲಿಕೆಯಾಗಿದ್ದ ದೂರಿನ ವಿಚಾರಣಾ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ ಚುರುಕುಗೊಳಿಸಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎಂಬುವವರು ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿರುವ ಎಸಿಬಿ ತನಿಖಾಧಿಕಾರಿಗಳು, ಸದ್ಯದಲ್ಲಿಯೇ ಯಡಿಯೂರಪ್ಪ, ಜನಾರ್ಧನ ರೆಡ್ಡಿ ಸೇರಿ ಹಲವು ಬಿಜೆಪಿ ನಾಯಕರಿಗೆ ನೋಟಿಸ್‌ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಈಗಾಗಲೇ ದೂರುದಾರರಾದ ದಿನೇಶ್‌ ಕಲ್ಲಹಳ್ಳಿ ಅವರನ್ನು ಆಗಸ್ಟ್‌ 13ರಂದು ಕರೆಸಿಕೊಂಡಿದ್ದ ತನಿಖಾಧಿಕಾರಿಗಳು, ದೂರಿಗೆ ಸಂಬಂಧಿಸಿದ ಸಾಕ್ಷ್ಯಗಳು ಎಂದು ಪರಿಗಣಿಸಲಾದ ಬಿಜೆಪಿ ನಾಯಕರು ಬಿಜೆಪಿಗೆ ಬೆಂಬಲ ಸೂಚಿಸುವಂತೆ ಹಣ ಹಾಗೂ ಸಚಿವ ಸ್ಥಾನದಆಮಿಷವೊಡ್ಡಿದ್ದ ಮಾತುಕತೆಯ ಧ್ವನಿಮುದ್ರಿಕೆಗಳನ್ನು ಪಡೆದುಕೊಂಡಿದೆ. ಇದೀಗ ವಿಚಾರಣಾ ಭಾಗವಾಗಿ ಪ್ರತಿವಾದಿಗಳಾಗಿರುವ ಯಡಿಯುರಪ್ಪ ಸೇರಿ ಹಲವು ಬಿಜೆಪಿ ನಾಯಕರಿಗೆ ನೋಟಿಸ್‌ ಜಾರಿಗೊಳಿಸಲು ಎಸಿಬಿ ಮುಂದಾಗಿದೆ. ಈಗಾಗಲೇ ಪಡೆದುಕೊಂಡಿರುವ ಧ್ವನಿಮುದ್ರಿಕೆಗಳನ್ನು ವಿಧಿವಿಜ್ಞಾನ ಪ್ರಯೋಗಾಯಲಕ್ಕೆ (ಎಫ್ಎಸ್‌ಎಲ್‌ಗೆ) ಕಳುಹಿಸಿಕೊಡಲಾಗಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಉನ್ನತಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಯಾರ್ಯಾರ ಮೇಲೆ ಆರೋಪ? ದೂರಿನಲ್ಲೇನಿದೆ?:
ಬಿ.ಎಸ್‌. ಯಡಿಯೂರಪ್ಪ ಅವರು ಶಾಸಕ ಬಿ.ಸಿ ಪಾಟೀಲ್‌ಗೆ ದೂರವಾಣಿ ಕರೆ ಮಾಡಿ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿದ್ದರು, ಈ ಧ್ವನಿಮುದ್ರಿಕೆಯಲ್ಲಿ ಶಾಸಕ ಬಿ ಶ್ರೀರಾಮುಲು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ ರಾವ್‌, ಅದೇ ರೀತಿ ಜನಾರ್ಧನ ರೆಡ್ಡಿ ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ, ಹಾಲಿ ಸಚಿವರಾಗಿರುವ ಶಿವಶಂಕರ ರೆಡ್ಡಿ, ವೆಂಕಟರಮಣಪ್ಪ ಅವರಿಗೆ ಆಮಿಷವೊಡ್ಡಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಮಾಜಿ ವಿಧಾನಪರಿಷತ್‌ ಸದಸ್ಯ ಬಿ.ಜೆ ಪುಟ್ಟಸ್ವಾಮಿ ಅವರು ಶಾಸಕ ಶಿವರಾಮ್‌ ಹೆಬ್ಟಾರ್‌ ಪತ್ನಿಗೆ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಧ್ವನಿಮುದ್ರಿಕೆಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ. ಹೀಗಾಗಿ ಜನಪ್ರತಿನಿಧಿಗಳಿಗೆ ಹಣದ ಆಮಿಷವೊಡ್ಡಿ ಭ್ರಷ್ಟಾಚಾರಕ್ಕೆ ಸಹಕರಿಸಿದ ಆರೋಪ ಸಂಬಂಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು.

ದೂರಿನ ಸಂಬಂಧ ನೀಡಿದ ನೋಟಿಸ್‌ ಅನ್ವಯ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಶಾಸಕರ ಖರೀದಿಗೆ ಬಿಜೆಪಿ ನಾಯಕರು ಆಮಿಷವೊಡ್ಡಿದ್ದರು ಎಂಬ ಕುರಿತಾದ " ಧ್ವನಿ ಮುದ್ರಿಕೆ'ಗಳನ್ನು ಆಗಸ್ಟ್‌ 13ರಂದು ಸಲ್ಲಿಸಿದ್ದೇನೆ. ಮುಂದಿನ ಕಾನೂನು ಪ್ರಕ್ರಿಯೆಗಳನ್ನು ತನಿಖಾಧಿಕಾರಿಗಳು
ಮುಂದುವರಿಸುವ ವಿಶ್ವಾಸವಿದೆ. 

● ದಿನೇಶ್‌ ಕಲ್ಲಹಳ್ಳಿ, ದೂರುದಾರ ಸಾಮಾಜಿಕ ಕಾರ್ಯಕರ್ತ

● ಮಂಜುನಾಥ ಲಘುಮೇನಹಳ್ಳಿ
 


Trending videos

Back to Top