ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಬಿಡಲ್ಲ: ಖಂಡ್ರೆ
Team Udayavani, Sep 13, 2018, 6:15 AM IST
ಚಿತ್ರದುರ್ಗ: ಜಾರಕಿಹೊಳಿ ಸಹೋದರರು ಹಿರಿಯರಾಗಿದ್ದು, ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದು, ಯಾರೂ ಪಕ್ಷ ಬಿಡಲ್ಲ. ಪಕ್ಷದ ಒಳಗಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ವರಿಷ್ಠರು ಚರ್ಚಿಸಿ ಬಗೆಹರಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಇಬ್ಭಾಗ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಅವಧಿ ಪೂರೈಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ನ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಶಾಸಕರೇ ಕಾಂಗ್ರೆಸ್ಗೆ ಬರುತ್ತಾರೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಆರು ಸಚಿವ ಸ್ಥಾನಗಳು, ನಿಗಮ, ಮಂಡಳಿಗಳ ನೇಮಕ ಸಂದರ್ಭದಲ್ಲಿ ಅವಕಾಶ ವಂಚಿತ ಜಿಲ್ಲೆಗಳ ಎಲ್ಲ ವರ್ಗದವರಿಗೆ ಆದ್ಯತೆ ನೀಡಲಾಗುವುದು ಎಂದರು.