CONNECT WITH US  

ಗಣೇಶ ಹಬ್ಬ: ಖಾಸಗಿ ಬಸ್‌ಗಳಿಂದ ಭಾರೀ ಸುಲಿಗೆ

ಸಾಂದರ್ಭಿಕ ಚಿತ್ರ.

ಬೆಂಗಳೂರು: ಬೆಂಗಳೂರಿನಿಂದ ಗಣೇಶ ಹಬ್ಬಕ್ಕಾಗಿ ಪರ ಊರುಗಳಿಂದ ಬಂದು ಇಲ್ಲಿ ನೆಲೆ ನಿಂತ ಹಲವರು ಸ್ವಂತ ಊರುಗಳತ್ತ ಮುಖಮಾಡಿದ್ದಾರೆ. ಆದರೆ, ಹೀಗೆ ಹಬ್ಬಕ್ಕೆ ತೆರಳಲು ಅವರೆಲ್ಲರೂ ತೆತ್ತ ದಂಡದ ಮೊತ್ತ ಎಷ್ಟು ಗೊತ್ತಾ?
- ಅಂದಾಜು 3 ಕೋಟಿ ರೂ.!

ಈ ಹಣವನ್ನು ಖಾಸಗಿ ಬಸ್‌ಗಳು ಪ್ರಯಾಣ ದರದ ರೂಪದಲ್ಲಿ ಸುಲಿಗೆ ಮಾಡಿವೆ. ಈ ಸುಲಿಗೆ ನಡೆಯುತ್ತಿರುವುದು ಇದೇ ಮೊದಲಲ್ಲ. ಪ್ರತಿ ಹಬ್ಬದ ಸೀಸನ್‌ಗಳಲ್ಲಿ ನಡೆಯುತ್ತಿದೆ. ಅರಿವಿದ್ದೂ ಜನ ಅನಿವಾರ್ಯವಾಗಿ ಹಣ ಪಾವತಿಸಿ ಹೋಗುತ್ತಿದ್ದಾರೆ. ಆದರೆ, ಬೇಕಾಬಿಟ್ಟಿ ದರ ವಿಧಿಸುವವರ ವಿರುದ್ಧ ಇದುವರೆಗೆ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ.
ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕನಿಷ್ಠ ಮೂರು ಸಾವಿರ ಖಾಸಗಿ ಬಸ್‌ಗಳು ಬೇರೆ ಬೇರೆ ಊರುಗಳಿಗೆ ತೆರಳುತ್ತವೆ. ಇವೆಲ್ಲವೂ ಪ್ರೀಮಿಯರ್‌ ಬಸ್‌ಗಳೇ ಆಗಿದ್ದು, ಪ್ರಯಾಣ ದರವನ್ನು ಸಾಮಾನ್ಯ ದಿನಗಳಿಗಿಂತ ಸರಾಸರಿ 500 ರೂ. ಹೆಚ್ಚುವರಿ ವಿಧಿಸಲಾಗಿದೆ. ಇದರ ಅಂದಾಜು ಮೊತ್ತ ಮೂರು ಕೋಟಿ ರೂ. ದಾಟುತ್ತದೆ. ಇದನ್ನು ಸ್ವತಃ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಈ ಸುಲಿಗೆ ಕೇವಲ ಒಂದು ದಿನದಲ್ಲಿ ನಡೆಯುತ್ತದೆ. ಇದೇ ರೀತಿ, ಬೇರೆ ಬೇರೆ ಕಡೆಗಳಿಂದ ನಗರಕ್ಕೆ ಹಿಂತಿರುಗುವಾಗಲೂ ಯದ್ವಾತದ್ವಾ ಹಣ ವಸೂಲು ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಮೂಲದ ಶಿವು ಹಿರೇಮಠ ಆರೋಪಿಸುತ್ತಾರೆ.

ಲೆಕ್ಕಾಚಾರ ಹೀಗೆ
ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ದಾವಣಗೆರೆ, ಹೈದರಾಬಾದ್‌ ಸೇರಿದಂತೆ ಪ್ರಮುಖ 8-10 ಮಾರ್ಗಗಳನ್ನು ಆಯ್ಕೆ ಮಾಡಿ, ಅಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೋಲಿಕೆ ಮಾಡಲಾಗಿದೆ. ಈ ವೇಳೆ ವೋಲ್ವೊ ಮತ್ತು ನಾನ್‌ಎಸಿ ಸ್ಲಿàಪರ್‌ ಬಸ್‌ಗಳಲ್ಲಿ ಸರಾಸರಿ 500 ರೂ. ಅಂತರ ಕಂಡುಬಂದಿದ್ದು, ಅದನ್ನು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಒಟ್ಟಾರೆ 1.20 ಲಕ್ಷ ಪ್ರಯಾಣಿಕರಿಗೆ (3 ಸಾವಿರ ಬಸ್‌ಗಳಿದ್ದು, ಪ್ರತಿ ಬಸ್‌ಗೆ 40 ಸೀಟುಗಳಂತೆ) ಲೆಕ್ಕಹಾಕಿದಾಗ, 6 ಕೋಟಿ ರೂ. ದಾಟುತ್ತದೆ. ಇದರರ್ಧದಷ್ಟು ಜನರನ್ನು ತೆಗೆದುಕೊಂಡರೂ 3 ಕೋಟಿ ರೂ. ಆಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು 
"ಉದಯವಾಣಿ'ಗೆ ಮಾಹಿತಿ ನೀಡಿದರು.

ಬೆಂಗಳೂರಿನಿಂದ ನಿತ್ಯ ಬೇರೆ ಬೇರೆ ಊರುಗಳಿಗೆ 2,800 ಬಸ್‌ಗಳು ತೆರಳುತ್ತವೆ. ಈ ಬಾರಿ ಹಬ್ಬದ ಹಿನ್ನೆಲೆಯಲ್ಲಿ 1,200 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳ ಪ್ರಯಾಣ ದರ ಸಾಮಾನ್ಯಕ್ಕಿಂತ ಶೇ. 20ರಷ್ಟು ಮಾತ್ರ ಹೆಚ್ಚು ಇದ್ದು, ಇದಕ್ಕೆ ಕಾರಣ- ವಿವಿಧ ಕಡೆಗಳಿಂದ ಈ ಬಸ್‌ಗಳು ಬೆಂಗಳೂರಿಗೆ ಹೆಚ್ಚು-ಕಡಿಮೆ ಖಾಲಿ ಬಂದಿರುತ್ತವೆ. ಆ ಹೊರೆಯನ್ನು ಸರಿದೂಗಿಸಲು ಈ ದರ ವಿಧಿಸಲಾಗಿರುತ್ತದೆ. ಆದರೆ, ಖಾಸಗಿ ಬಸ್‌ಗಳ ಪ್ರಯಾಣ ದರ ಕೆಲವೆಡೆ ದುಪ್ಪಟ್ಟು ಇದೆ. ಸರ್ಕಾರಿ ಬಸ್‌ಗೆ ಹೋಲಿಸಿದಾಗ, ಗರಿಷ್ಠ ಸಾವಿರ ರೂ.ವರೆಗೆ ಅಂತರ ಇರುವುದನ್ನು ಆನ್‌ಲೈನ್‌ನಲ್ಲಿ ಕೂಡ ನೋಡಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
ಮೇಲ್ನೋಟಕ್ಕೆ ಈ ಮೂರು ಕೋಟಿ ರೂ. ಉತ್ಪ್ರೇಕ್ಷೆ ಎನಿಸಬಹುದು. ಆದರೆ, ಇದು ವಾಸ್ತವ. ಹಬ್ಬದ ಸೀಜನ್‌ಗಳಲ್ಲಿ ಕೆಎಸ್‌ಆರ್‌ಟಿಸಿಯ 120 ಪ್ರೀಮಿಯಂ ಬಸ್‌ಗಳಿರುವ ಘಟಕವೊಂದರಲ್ಲೇ ದಿನಕ್ಕೆ 1 ಕೋಟಿ ರೂ. ಆದಾಯ ಬರುತ್ತದೆ ಎಂದೂ ಅಧಿಕಾರಿಗಳು ಹೇಳುತ್ತಾರೆ.

ಕೆಎಸ್‌ಆರ್‌ಟಿಸಿ ಇರುವುದು ಜನರಿಗೆ ಸೇವೆ ಒದಗಿಸುವುದು ಮತ್ತು ಸುಲಿಗೆ ತಪ್ಪಿಸುವುದು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಹೆಚ್ಚು ಬಸ್‌ಗಳನ್ನು ನಿಯೋಜಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಖಾಸಗಿ ಬಸ್‌ಗಳಿಂದ ನಡೆಯುತ್ತಿರುವ ಸುಲಿಗೆಗೆ ಸರ್ಕಾರ ಕಡಿವಾಣ ಹಾಕಲಿದೆ.
- ಎಸ್‌.ಆರ್‌. ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ.

ಹಬ್ಬ ಮತ್ತು ಸಾಲು-ಸಾಲು ರಜೆಗಳ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಯದ್ವಾತದ್ವಾ ದರ ವಿಧಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ, ಕ್ರಮ ಕೈಗೊಳ್ಳಲಾಗುವುದು.
- ಡಾ.ಬಿ. ಬಸವರಾಜು, ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ.

ಬೆಂಗಳೂರಿನಿಂದ ಕೆಲವು ಪ್ರಮುಖ ಮಾರ್ಗಗಳಿಗೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ವೋಲ್ವೊ ಬಸ್‌ಗಳ ಪ್ರಯಾಣ ದರ ಹೀಗಿದೆ.
ಮಾರ್ಗ    ಕೆಎಸ್‌ಆರ್‌ಟಿಸಿ    ಖಾಸಗಿ (ರೂ.ಗಳಲ್ಲಿ)
ಹುಬ್ಬಳ್ಳಿ          900                 1,600
ಬೆಳಗಾವಿ       1,080               2,500
ವಿಜಯಪುರ   1,100                1,400
ಮಂಗಳೂರು   1,070               1,600
ಶಿವಮೊಗ್ಗ        570                 1,600
ಹೊಸಪೇಟೆ        -                    1,200
ಹೈದರಾಬಾದ್‌  1,300               2,000

- ವಿಜಯಕುಮಾರ ಚಂದರಗಿ

Trending videos

Back to Top