CONNECT WITH US  

ಕಾಂಗ್ರೆಸ್‌ನಿಂದ ಶಾಸಕರ ಪರೇಡ್‌

ಆಪರೇಷನ್‌ ಕಮಲ ಭೀತಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಗುಲ್ಲಿಗೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌, ಆಪರೇಷನ್‌ ಕಮಲದ ಭೀತಿಯ ಶಾಸಕರನ್ನು ಪಕ್ಷದ ಕಚೇರಿಗೆ ಕರೆಸಿ ಒಗ್ಗಟ್ಟು ತೋರಿಸುವ ಪ್ರಯತ್ನ ಮಾಡಿತು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು, ಆಪರೇಷನ್‌ ಕಮಲದಲ್ಲಿ ಕೇಳಿ ಬರುತ್ತಿರುವ ಶಾಸಕರನ್ನು ಪಕ್ಷದ ಕಚೇರಿಗೆ ಕರೆಸಿ ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡಿಸಿದರು. ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌, ಹೊಸಪೇಟೆ ಶಾಸಕ ಆನಂದ್‌ ಸಿಂಗ್‌, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವರಾಜ್‌ ದದ್ದಲ್‌ ಹಾಜರಾಗಿ ಪಕ್ಷ ನಿಷ್ಠೆ ತೋರುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ದಿನೇಶ್‌ ಗುಂಡೂರಾವ್‌, ಬಿಜೆಪಿಯವರು ಮಾಧ್ಯಮಗಳ ಮೂಲಕ ಕೇಳಿಬರುತ್ತಿರುವ ಪಟ್ಟಿಯಲ್ಲಿರುವ ಯಾವ ಶಾಸಕರೂ ಬಿಜೆಪಿ ಸೇರುತ್ತಿಲ್ಲ. ಅಮರೇಗೌಡ ಬಯ್ನಾಪುರ, ರಹೀಂಖಾನ್‌, ನಾರಾಯಣ ರಾವ್‌, ಮಹೇಶ್‌ ಕಮಟಳ್ಳಿ, ಶ್ರೀಮಂತ ಪಾಟೀಲ್‌, ಎಂ.ಟಿ.ಬಿ. ನಾಗರಾಜ್‌ ಎಲ್ಲರೂ ಪಕ್ಷದ ಜೊತೆಗೆ ಇರುವುದಾಗಿ ಹೇಳಿದರು. ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಅವರಿಗೂ ಆಮಿಷ ಒಡ್ಡಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ಆಮಿಷಗಳನ್ನು ಒಡ್ಡಿ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ನಾವು ಅವರಂತೆ ಹೀನ ಕೆಲಸಕ್ಕೆ ಕೈ ಹಾಕುವ ಕೆಲಸ ಮಾಡುವುದಿಲ್ಲ. ಬಿಜೆಪಿಯ ಏಳು ಶಾಸಕರು ಕಾಂಗ್ರೆಸ್‌ಗೆ ಬರಲು ಸಿದ್ಧರಿದ್ದಾರೆ. ಅವರು ಇದೇ ರೀತಿ ಮುಂದುವರಿಸಿದರೆ, ಅವರ ಬುಡಕ್ಕೆ ಕೈ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ವಿಷಯದಲ್ಲಿ ಜಾರಕಿಹೊಳಿ ಸಹೋದರರ ಸಮಸ್ಯೆ ಇದೆ. ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುತ್ತಿದೆ. ಅದನ್ನು ಬಿಟ್ಟರೆ ಕಾಂಗ್ರೆಸ್‌ನ ಯಾವುದೇ ಶಾಸಕರು ಪಕ್ಷ ಹಾಗೂ ಸರ್ಕಾರದ ಬಗ್ಗೆ ಅಸಮಾಧಾನ ಹೊರ ಹಾಕಿಲ್ಲ. ಆದರೂ, ಶಾಸಕರ ಹೆಸರುಗಳನ್ನು ಪಟ್ಟಿ ಮಾಡುವುದರಿಂದ ಅವರ ಕ್ಷೇತ್ರದಲ್ಲಿ ಗೊಂದಲ ಉಂಟಾಗುತ್ತದೆ. ಬಿಜೆಪಿಯವರು ಈ ಪ್ರಯತ್ನ ಕೈ ಬಿಡಬೇಕು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌. ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌, ಹೊಸಪೇಟೆ ಶಾಸಕ ಆನಂದ್‌ ಸಿಂಗ್‌, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಇದ್ದರು.


Trending videos

Back to Top