CONNECT WITH US  

ಬಾಹ್ಯಾಕಾಶಕ್ಕೆ ಮೈಸೂರು ಇಡ್ಲಿ, ಸಾಂಬಾರ್‌!

ಸಾಂದರ್ಭಿಕ ಚಿತ್ರ.

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ, 2022ಕ್ಕೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲೇ ಇಡ್ಲಿ-ಸಾಂಬಾರ್‌ ರುಚಿ ಸವಿಯಲಿದ್ದಾರೆ. ತಂಪುಪಾನೀಯ ಸೇವಿಸಲಿದ್ದಾರೆ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೂಂದೆಡೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿರುವ ಮಾನವನಿಗೆ ಅಗತ್ಯ ಆಹಾರ ತಯಾರಿಕೆಗೂ ಸಿದ್ಧತೆ ನಡೆದಿದೆ. ಗುತ್ವಾಕರ್ಷಣ ಬಲ ಕಡಿಮೆ ಇರುವ ವಾತಾವರಣದಲ್ಲಿ ಕೆಡದೇ ಇರುವಂತಹ ಆಹಾರ ಬಳಕೆ ಅನಿವಾರ್ಯವಾದ ಕಾರಣ ಮೈಸೂರಿನ "ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ' (ಡಿಎಫ್ಆರ್‌ಎಲ್‌) ಸೂಕ್ತ ಆಹಾರ ತಯಾರಿಸುತ್ತಿದೆ.

2020ಕ್ಕೆ ಆಹಾರ ಸಿದ್ಧ; ಡಿಎಫ್ಆರ್‌ಎಲ್‌
ಈ ಸಂಬಂಧ ಇಸ್ರೋ ವಿಜ್ಞಾನಿಗಳ ಜತೆ 20 ದಿನಗಳ ಹಿಂದಷ್ಟೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಸಾಂಪ್ರದಾಯಿಕ ಆಹಾರವಾದ ಇಡ್ಲಿ-ಸಾಂಬಾರ್‌, ಮಾವಿನ ಹಣ್ಣಿನ ರಸ, ಶೈತ್ಯೀಕರಿಸಿದ ಹಣ್ಣಿನ ಜ್ಯೂಸ್‌ ಮತ್ತಿತರ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್‌ ಮಾಡಿ, ಪೂರೈಸಲು ನಾವು ಸಿದ್ಧ ಎಂದು ಡಿಎಫ್ಆರ್‌ಎಲ್‌ ಸಹ ನಿರ್ದೇಶಕ ಪ್ರೊ.ಎ.ಡಿ. ಸೆಮÌಲ್‌ "ಉದಯವಾಣಿ'ಗೆ ತಿಳಿಸಿದರು.

ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಎಎಸ್‌ಸಿ ಸೆಂಟರ್‌ ಮತ್ತು ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ "ಆಹಾರ ತಂತ್ರಜ್ಞಾನದ ಮೂಲಕ ಸೇನೆಯ ಬಲವರ್ಧನೆ' ಕುರಿತ ವಿಚಾರ ಸಂಕಿರಣ ಮತ್ತು ಆಹಾರ ತಂತ್ರಜ್ಞಾನಗಳ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ""ಇಸ್ರೋ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಸಲು ನಾವು ಸಿದ್ಧ. ಯಾವ ಪ್ರಕಾರದ ಆಹಾರ ಬೇಕು ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ. ಅಲ್ಲದೆ, ಈಗಿರುವ ಪ್ಯಾಕೆಟ್‌ಗಳು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಪೂರಕವಾಗಿಲ್ಲ. ಟ್ಯೂಬ್‌ ಮಾದರಿಯಲ್ಲಿ ಪ್ಯಾಕ್‌ಗಳನ್ನು ಮಾಡಬೇಕಾಗುತ್ತದೆ. 2020ರ ವೇಳೆಗೆ ಈ ಆಹಾರ ಅಗತ್ಯತೆಗೆ ತಕ್ಕಂತೆ  ಸಿದ್ಧಗೊಳಿಸಲಿದ್ದೇವೆ'' ಎಂದು ಹೇಳಿದರು.

142 ತಂತ್ರಜ್ಞಾನ; 583 ಕಂಪನಿಗಳು
""ಸುಮಾರು 142 ಆಹಾರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಈ ತಂತ್ರಜ್ಞಾನವನ್ನು ಎಂಟಿಆರ್‌, ಗೊದ್ರೇಜ್‌, ಮಯ್ನಾಸ್‌ ಸೇರಿದಂತೆ 583 ಕಂಪನಿಗಳಿಗೆ ವಿತರಿಸಲಾಗಿದೆ. ನಮ್ಮ ಸೈನಿಕರು ಅತಿ ಎತ್ತರದ ಪ್ರದೇಶಗಳಲ್ಲಿ ದಿನಗಟ್ಟಲೆ ನೀರು ಕೂಡ ಸಿಗದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಬೇಯಿಸದೆ ಹಾಗೇ ಸೇವಿಸಬಹುದಾದ ಹತ್ತಾರು ಪ್ರಕಾರದ ಆಹಾರ ಪದಾರ್ಥಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಸ್‌ಸಿ ಸೆಂಟರ್‌ ಮತ್ತು ಕಾಲೇಜಿನ ಲೆಫ್ಟಿನಂಟ್‌ ಜನರಲ್‌ ಹಾಗೂ ಕಮಾಂಡಂಟ್‌ ವಿಪನ್‌ ಗುಪ್ತ, ""ಸೈನಿಕರಿಗೆ ಈಗಿರುವ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದರೊಂದಿಗೆ ಇನ್ನಷ್ಟು ಆಹಾರ ಪದಾರ್ಥಗಳನ್ನು ಸೇರಿಸಲಾಗುತ್ತಿದೆ. ಇದರ ಉದ್ದೇಶ ನಮ್ಮ ಸೈನಿಕರನ್ನು ಮತ್ತಷ್ಟು ಬಲವರ್ಧನೆಗೊಳಿಸುವುದಾಗಿದೆ'' ಎಂದು ಹೇಳಿದರು.

Trending videos

Back to Top