ಮಂಗನ ಕೈಗೆ ಸ್ಟಿಯರಿಂಗ್..!:ವಿಡಿಯೋ ವೈರಲ್;ಚಾಲಕ ವಜಾ
Team Udayavani, Oct 6, 2018, 11:58 AM IST
ದಾವಣಗೆರೆ: ಕಪ್ಪು ಮುಖದ ಕೋತಿಯೊಂದು ರಾಜ್ಯ ಸಾರಿಗೆ ಬಸ್ನಲ್ಲಿ ಚಾಲಕನೊಂದಿಗೆ ಸ್ಟಿಯರಿಂಗ್ ಮೇಲೆ ಕುಳಿತು ತಾನೂ ಡ್ರೈವಿಂಗ್ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ನಮ್ಮದೇ ರಾಜ್ಯದ ದಾವಣಗೆರೆಯಲ್ಲಿ ನಡೆದಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರಿಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಮಾತ್ರವಲ್ಲದೆ ಚಾಲಕನನ್ನು ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ವಜಾ ಮಾಡಿದ್ದಾರೆ.
ದಾವಣಗೆರೆಯಿಂದ ಭರಮಸಾಗರಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ನಲ್ಲಿ ಪ್ರಯಾಣಿಕರೊಬ್ಬರೊಂದಿಗೆ ಬಂದಿದ್ದ ಕೋತಿ ನೇರವಾಗಿ ಸ್ಟಿಯರಿಂಗ್ ಮೇಲೆ ಕುಳಿತು ತಾನೂ ಡ್ರೈವರ್ನೊಂದಿಗೆ ಡ್ರೈವಿಂಗ್ ಮಾಡಿ ಪ್ರಯಾಣಿಕರಿಗೆಲ್ಲಾ ಭರ್ಜರಿ ಮನರಂಜನೆ ನೀಡಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಏನೇ ನಡೆದರು ತಕ್ಷಣ ವಿಡಿಯೋ ಚಿತ್ರೀಕರಿಸುವುದು ರೂಢಿಯಾಗಿರುವ ಕಾರಣ ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾಲಕ ಸಂಕಷ್ಟಕ್ಕೆ ಸಿಲುಕಿದ್ದಾನೆ.