CONNECT WITH US  

ಇಂದಿರಾ ಕ್ಯಾಂಟೀನ್‌ಗೆ ಸಮ್ಮಿಶ್ರದಲ್ಲಿ ಆಮೆವೇಗ

150 ತಾಲೂಕು ಕೇಂದ್ರಗಳಲ್ಲಿ ಇನ್ನೂ ಶುರುವಾಗಿಲ್ಲ

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರ್ಕಾರದ ಎಲ್ಲ ಜನಪರ ಯೋಜನೆಗಳನ್ನು ಮುಂದುವರಿಸಿ ಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಘೋಷಣೆ ಮಾಡಿದ್ದರೂ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಹು ನಿರೀಕ್ಷೆಯ ಇಂದಿರಾ
ಕ್ಯಾಂಟೀನ್‌ ಯೋಜನೆಗೆ ಆಮೆಗತಿ ಬಂದಿದೆ. ಕಳೆದ ಸರ್ಕಾರದ ಅವಧಿಯಲ್ಲೇ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ತೀರ್ಮಾನ ತೆಗೆದುಕೊಂಡು ಇದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ನೀಡಿದ್ದರೂ, ಸುಮಾರು 150 ಕಡೆ ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಕಾರ್ಯ ಕುಂಟುತ್ತಲೇ ಸಾಗಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಐದು ತಿಂಗಳಲ್ಲಿ 72 ಇಂದಿರಾ ಕ್ಯಾಂಟೀನ್‌ಗಳು ಪ್ರಾರಂಭವಾಗಿದ್ದರೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಇದುವರೆಗೂ ಪ್ರಾರಂಭವಾಗಿರುವುದು 27 ಕ್ಯಾಂಟೀನ್‌ಗಳು ಮಾತ್ರ. ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಗಡುವು ನೀಡಿದ್ದರೂ ಕ್ಯಾಂಟೀನ್‌ಗಳು ಮಾತ್ರ ಪ್ರಾರಂಭವಾಗುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಡಿಸೆಂಬರ್‌ ವೇಳೆಗೆ ಎಲ್ಲ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಬೇಕು ಎಂದು ಅಂತಿಮ ಗಡುವು ಸಹ ನೀಡಲಾಗಿದೆ. ಆದರೆ, ಆ ಗಡುವಿನೊಳಗೆ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. 

ಶೇ.50ರಷ್ಟೂ ಜಾರಿಯಿಲ್ಲ: ರಾಜ್ಯದ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡಲು 249 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಯೋಜನೆಯನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ 2017ರ ನವೆಂಬರ್‌ನಲ್ಲಿ ಘೋಷಿಸಿತ್ತು. ಆದರೆ, ಈವರೆಗೆ ಶೇ.50ರಷ್ಟೂ ಯೋಜನೆ ಜಾರಿಯಾಗಿಲ್ಲ. ಕಳೆದ ಐದು ತಿಂಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಇಂದಿರಾ ಕ್ಯಾಂಟೀನ್‌ ಸೇವೆ ರಾಜ್ಯದ ಎಲ್ಲ ಭಾಗದ ಜನರಿಗೆ ದೊರೆಯದಂತಾಗಿದೆ. 

ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಿರುವ 249 ಇಂದಿರಾ ಕ್ಯಾಂಟೀನ್‌ಗಳ ಪೈಕಿ ಕೇವಲ 99 ಕ್ಯಾಂಟೀನ್‌ ಗಳಲ್ಲಿ ಮಾತ್ರ ಸದ್ಯ ಆಹಾರ ಪೂರೈಕೆಯಾಗುತ್ತಿದ್ದು, 100 ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ 50 ಕಡೆಗಳಲ್ಲಿ ಈವರೆಗೆ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿಯೇ ಆರಂಭವಾಗಿಲ್ಲ. ಆ ಪೈಕಿ 14 ಸ್ಥಳಗಳಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗವೂ ಸಿಕ್ಕಿಲ್ಲ. ಇದರಿಂದ ಯೋಜನೆಗೆ ಹಿನ್ನಡೆಯುಂಟಾಗಿದೆ. 

ಕಾಮಗಾರಿ ಪ್ರಗತಿಯಲ್ಲಿರುವ 100 ಕ್ಯಾಂಟೀನ್‌ಗಳ ಪೈಕಿ 60 ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ಕೊನೆಯ ಹಂತ ತಲುಪಿದೆ. ಈ ಮಧ್ಯೆ, 30 ಕಡೆಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಜನಪ್ರತಿನಿಧಿಗಳ ದಿನಾಂಕ ದೊರೆಯದ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳ ಸೇವೆ ಆರಂಭವಾಗಿಲ್ಲ. ಅದರಲ್ಲೂ ಜೆಡಿಎಸ್‌ ಶಾಸಕರು ಇರುವ ಕಡೆಯೇ ಈ ರೀತಿ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಕ್ಯಾಂಟೀನ್‌ಗೆ ಸ್ಪಂದನೆ: ರಾಜ್ಯದ 27 ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಂಟೀನ್‌ಗಳು ಸೇವೆ ಆರಂಭಿಸಿದ್ದು, ಕ್ಯಾಂಟೀನ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕ್ಯಾಂಟೀನ್‌ ಗಳಿಗೆ ಹೆಚ್ಚಿನ ಜನರು ಭೇಟಿ ನೀಡಿ ಆಹಾರ ಸೇವಿಸುತ್ತಿದ್ದು, ಕ್ಯಾಂಟೀನ್‌ನಲ್ಲಿ ಪೂರೈಕೆ ಮಾಡುತ್ತಿರುವ ಆಹಾರದ ಗುಣ ಮಟ್ಟ ಹಾಗೂ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದು ನಿಜ. ಆದರೆ, ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯ ಇಲಾಖೆಯ
ಹಿರಿಯ ಅಧಿಕಾರಿಯೊಬ್ಬರು "ಉದಯವಾಣಿ'ಗೆ ಮಾಹಿತಿ ನೀಡಿದರು.  

ರಾಜಕೀಯ ಲೆಕ್ಕಾಚಾರ
ಈ ಯೋಜನೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ಉತ್ತಮ ವರ್ಚಸ್ಸು ತಂದುಕೊಡುವಲ್ಲಿ ಯಶಸ್ವಿಯಾಗಿತ್ತು. ಅದರ ಪರಿಣಾಮವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಗಳೂರಿನಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ "ಇಂದಿರಾ ಕ್ಯಾಂಟೀನ್‌' ಯೋಜನೆ ಸಹ ಪ್ರಮುಖ ಪಾತ್ರವಹಿಸಿತ್ತು. ರಾಜ್ಯದಾದ್ಯಂತ 249 ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಿ ಚಾಲನೆ ದೊರೆತರೆ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ನಾನಾ ಕಾರಣಗಳಿಗಾಗಿ ಯೋಜನೆ ಸಕಾಲದಲ್ಲಿ ಅನುಷ್ಟಾನವಾಗುತ್ತಿಲ್ಲ. ಇದು ಕಾಂಗ್ರೆಸ್‌ ತಲೆಬಿಸಿಗೆ ಕಾರಣವಾಗಿದೆ.

ಸರ್ಕಾರ ಉದ್ದೇಶಿಸಿರುವ 249 ಕ್ಯಾಂಟೀನ್‌ಗಳ ಪೈಕಿ 99
ಕ್ಯಾಂಟೀನ್‌ಗಳು ಉದ್ಘಾಟನೆಗೊಂಡು ಆಹಾರ ವಿತರಿಸುತ್ತಿವೆ. ಇನ್ನುಳಿದ 150 ಕ್ಯಾಂಟೀನ್‌ಗಳ ಪೈಕಿ 93 ಕ್ಯಾಂಟೀನ್‌ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್‌ ವೇಳೆ ಕಾಮಗಾರಿ ಪೂರ್ಣ ಗೊಳಿಸುವಂತೆ ಸೂಚನೆ ನೀಡಲಾಗಿದೆ. 
ರೇಣುಕಾ, ಅಭಿವೃದ್ಧಿ ಅಧಿಕಾರಿ, ಪೌರಾಡಳಿತ ನಿರ್ದೇಶನಾಲಯ

●ವೆಂ. ಸುನೀಲ್‌ಕುಮಾರ್‌

Trending videos

Back to Top