CONNECT WITH US  

ಆ್ಯಂಬಿಡೆಂಟ್‌: ತನಿಖೆ ಬಗ್ಗೆ ಮಾಹಿತಿ ಕೇಳಿದ ಇ.ಡಿ. 

ಬೆಂಗಳೂರು: ಆ್ಯಂಬಿಡೆಂಟ್‌ ಕಂಪನಿಯಿಂದ ನೂರಾರು ಕೋಟಿ ರೂ. ವಂಚನೆ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಮತ್ತು ದಾಖಲೆ ನೀಡುವಂತೆ ಜಾರಿ ನಿರ್ದೇಶನಾಲಯ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳನ್ನು ಕೋರಿದೆ. ಪ್ರಕರಣ ಕುರಿತು ದಾಖಲಿಸಿರುವ ಎಫ್ಐಆರ್‌ಗಳು ಹಾಗೂ ಪ್ರಕರಣದ ಪ್ರಸ್ತುತ ತನಿಖಾ ಹಂತದ ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ. ಒಂದು ವೇಳೆ ಪ್ರಕರಣದ ಆರೋಪಿಗಳು "ಲೇವಾದೇವಿ ವ್ಯವಹಾರ ನಿಯಂತ್ರಣ ಕಾಯ್ದೆ' (ಪಿಎಂಎಲ್‌ಎ) ಉಲ್ಲಂಘಿಸಿದಲ್ಲಿ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಇಡಿ ಬರೆದಿರುವ ಪತ್ರದಲ್ಲಿ ಕೇಳಿಕೊಂಡಿದೆ. ಇದಕ್ಕೆ ರಾಜ್ಯ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ.

ಆರೋಪಿತ ಕಂಪನಿ ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿ., ಹಾಗೂ ಹಲಾಲ್‌ ಇನ್‌ವೆಸ್ಟ್‌ಮೆಂಟ್‌ ಆ್ಯಂಡ್‌ ಆಫ‌ರಿಂಗ್‌ ಹೆಸರಿನಲ್ಲಿ ನೂರಾರು ಮಂದಿ ಗ್ರಾಹಕರಿಂದ ಹಣ ಸಂಗ್ರಹಿಸುತ್ತಿತ್ತು. ಈ ಹಣವನ್ನು ಮಾಸಿಕ ಶೇ. 10-12ರಷ್ಟು ಬಡ್ಡಿ ಸೇರಿ ಹೆಚ್ಚಿನ ಹಣ
ಹಿಂದಿರುಗಿಸುವುದಾಗಿ ಹೇಳಿ ಹೂಡಿಕೆ ಮಾಡಿಕೊಳ್ಳುತ್ತಿತ್ತು. ಈ ಹಣವನ್ನು ಆನ್‌ಲೈನ್‌, ನಗದು ರೂಪದಲ್ಲಿ ಅಥವಾ ಚೆಕ್‌ ಮೂಲಕ ಸಂಗ್ರಹಿಸುತ್ತಿತ್ತು. ಈ ಮೂಲಕ ಆರ್‌ಬಿಐ ಮತ್ತು ಸೆಬಿ ನಿಯಮ ಉಲ್ಲಂಘಿಸಿದೆ. ಕಂಪನಿ 2016ರಿಂದ ಇದುವರೆಗೂ "ಹಜ್‌/ಉಮ್ರಾ'
ಯೋಜನೆ ಹೆಸರಿನಲ್ಲಿ 954 ಕೋಟಿ ರೂ. ನಗದು ಸಂಗ್ರಹಿಸಿದೆ. ಇದನ್ನು ಇಸ್ಲಾಮಿಕ್‌ ಬ್ಯಾಂಕ್‌ ಮೂಲಕ ವ್ಯವಹಾರ ನಡೆಸುತ್ತಿತ್ತು. ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಜಾರಿ ನಿರ್ದೇಶನಾಲಯ ಪತ್ರ ಬರೆದು ಇಸ್ಲಾಮಿಕ್‌ ಬ್ಯಾಂಕಿಂಗ್‌ ಅಥವಾ ಹಲಾಲ್‌ ಇನ್‌
ವೆಸ್ಟ್‌ಮೆಂಟ್‌ ಹೆಸರಿನಲ್ಲಿ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ನೀಡುವಂತೆ ಕೋರಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಂಬಿಡೆಂಟ್‌ ಕಂಪೆನಿಯ ಅಕ್ರಮ ಹಣ ವಹಿವಾಟಿನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಸಹಾಯ ಮಾಡುವುದಾಗಿ ಜನಾರ್ದನ ರೆಡ್ಡಿ, ಕಂಪೆನಿ ಮಾಲಿಕ ಸೈಯ್ಯದ್‌ ಅಹಮದ್‌ ಫ‌ರೀದ್‌ ಜತೆ ಮಾತುಕತೆ ನಡೆಸಿ 20 ಕೋಟಿ ರೂ. ನೀಡುವಂತೆ ಹೇಳಿದ್ದರು. ಈ ಪೈಕಿ ಹಣದ ಬದಲಿಗೆ 57 ಕೆ.ಜಿ. ಚಿನ್ನದ ಗಟ್ಟಿ ಪಡೆದುಕೊಂಡಿದ್ದಾರೆಂಬ ಗಂಭೀರ ಆರೋಪ ಎದುರಿಸು
ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತಾನು ಆ ಸಂಸ್ಥೆ ವಿರುದ್ಧ ನಡೆಸಿದ ಕ್ರಮಗಳ ಬಗ್ಗೆ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ಒದಗಿಸಿದೆ. 

ದಾಳಿ: ಘಿಬಿಡೆಂಟ್‌ ಕಂಪನಿಯ ಅವ್ಯವಹಾರ ಕುರಿತು 2017 ನ.13ರಂದು ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ 2018 ಜ.4 ಮತ್ತು 5 ರಂದು ಸೈಯದ್‌ ಫ‌ರೀದ್‌ ಅಹಮದ್‌ ಮತ್ತು ಸೈಯದ್‌ ಅಫಾಕ್‌ ಅಹಮದ್‌ಗೆ ಸೇರಿದ ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿಮಿಟೆಡ್‌, ಆ್ಯಂಬಿಡೆಂಟ್‌ ಕನ್‌ ಸ್ಟ್ರಕ್ಷನ್‌ ಲಿ., ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಆ್ಯಂಡ್‌
ಟ್ರೇಡಿಂಗ್‌ ಕಂಪನಿ, ಪ್ರಾಫಿಟ್‌ ಥೀಮ್‌, ಅಮ್ಮಾರ್‌ ಎಂಟರ್‌ಪ್ರೈಸಸ್‌, ಆ್ಯಂಬಿಡೆಂಟ್‌ ಗ್ಲೋಬಲ್‌ ಸೊಲ್ಯೂಷನ್ಸ್‌, ಅಂಬಿಶೆಲ್ಟರ್‌, ಪೆರಿನೆಟ್‌ ಟೆಕ್ನಾಲಜಿಸ್‌, ಆಂಬಿಗೋಲ್ಡ್‌, ವೆಬ್‌ವರ್ಲ್x ಹಾಗೂ ದುಬೈನಲ್ಲಿ ತೆರೆದಿದ್ದ ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಫೈನಾನ್ಸಿಯಲ್‌ ಸರ್ವೀಸಸ್‌ ಎಲ್‌ಎಲ್‌ಸಿ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಉಲ್ಲಂಘನೆ ಆರೋಪದ ಮೇಲೆ ಸೈಯದ್‌ ಫ‌ರಿದ್‌ ಅಹಮದ್‌ ಮನೆಯಲ್ಲಿ 1.97 ಕೋಟಿ ರೂ. ಹಣ ಜಪ್ತಿ ಮಾಡಲಾಗಿತ್ತು.

6,63,146 ಅಮೆರಿಕನ್‌ ಡಾಲರ್‌ ಬೆಲೆಯ (ರೂ.4.20 ಕೋಟಿ) ಬೆಲೆಯ ವಿದೇಶಿ ವಿನಿಮಯ ಮೂಲಕ ಫೆಮಾ ನಿಯಮ ಉಲ್ಲಂಘನೆ ಮಾಡಿದ್ದ ಸಂಸ್ಥೆ, ವಿದೇಶದಲ್ಲಿರುವ ಭಾರತೀಯರ ಖಾತೆಗಳ ಬಗ್ಗೆ ರಿಸರ್ವ್‌ ಬ್ಯಾಂಕ್‌ಗೆ ಮಾಹಿತಿ ನೀಡಿರಲಿಲ್ಲ. ದುಬೈನಲ್ಲಿರುವ ಸಂಸ್ಥೆ ವಹಿವಾಟಿನ ಬಗ್ಗೆ ಆರ್‌ಬಿಐ ಅಥವಾ ಕೇಂದ್ರ ಸರ್ಕಾರಕ್ಕೆ ಮಾಹಿತಿ ಒದಗಿಸಿರಲಿಲ್ಲ. ಈ ಸಂಬಂಧ 2018 ಫೆ.2ರಂದು ಫೆಮಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಯುಎಇನಲ್ಲಿ ಕಂಪನಿಗೆ ಸೇರಿದ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಕರಣ ಸಂಬಂಧ ರೂ. 1.86 ಕೋಟಿಗಳಷ್ಟು ದಂಡವನ್ನು ಕಂಪೆನಿಯಿಂದ ಸಂಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ರೂ. 1.97 ಕೋಟಿ ಜಪ್ತಿ ಮಾಡಲಾಗಿತ್ತು ಎಂದು ಇಡಿ ತಿಳಿಸಿದೆ.

ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧ ಇಲ್ಲ  
ಚಿತ್ರದುರ್ಗ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ  ಬಿಜೆಪಿಯವರಲ್ಲ. ಅಲ್ಲದೆ ಅವರಿಗೆ ಪಕ್ಷ ಯಾವುದೇ ಜವಾಬ್ದಾರಿಯನ್ನೂ ನೀಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ತಿಳಿಸಿದರು. ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ವಿಷಯದಲ್ಲಿ ಪಕ್ಷ ಭಾಗಿಯಾಗುವುದಿಲ್ಲ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅದ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು. ಶಾಸಕ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಸ್ನೇಹ ವೈಯಕ್ತಿಕವಾದುದು. ಸ್ನೇಹ ಸಂಬಂಧದಿಂದ ಶ್ರೀರಾಮುಲು ರೆಡ್ಡಿ ಮನೆಗೆ
ಹೋಗಿರಬಹುದು ಎಂದ ರವಿಕುಮಾರ್‌, ಸಚಿವ ಡಿ.ಕೆ. ಶಿವಕುಮಾರ್‌ ಮನೆ ಮೇಲೂ ಐಟಿ ದಾಳಿಯಾಗಿ ಎಫ್‌ ಐಆರ್‌ ದಾಖಲಾಗಿವೆ. ನನಗೆ ಡಿಕೆಶಿ ಹಾಗೂ ಕಾರ್ತಿ ಚಿದಂಬರಂ ಜತೆಗೆ ಗೆಳೆತನವಿದೆ. ಅವರಿಬ್ಬರ ಮೇಲೆ ಐಟಿ ದಾಳಿ ನಡೆದ ಮಾತ್ರಕ್ಕೆ ನನ್ನ ಮತ್ತು ಅವರ ಸ್ನೇಹದಲ್ಲಿ ವ್ಯತ್ಯಾಸವಾಗಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು. 

Trending videos

Back to Top