CONNECT WITH US  

ಬಳ್ಳಾರಿಯಲ್ಲೂ ಸಿಸಿಬಿ ಪೊಲೀಸರ ಕಾರ್ಯಾಚರಣೆ

ಜನಾರ್ದನ ರೆಡ್ಡಿ ನಿವಾಸ, ಕಚೇರಿ ಮೇಲೆ ದಾಳಿ

ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ದನರೆಡ್ಡಿಯವರ ನಿವಾಸ.

ಬಳ್ಳಾರಿ: ಇಡಿ ಡೀಲ್‌ ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಸಿಬಿ ಪೊಲೀಸರು ಗುರುವಾರ ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇಡಿ ಡೀಲ್‌ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ ಅಗತ್ಯ ದಾಖಲೆಗಳಿಗಾಗಿ ಪರಿಶೀಲನೆ ನಡೆಸಿದೆ. ನಗರದ ಸಿರುಗುಪ್ಪ ರಸ್ತೆಯಲ್ಲಿನ ವೀರನಗೌಡ
ಕಾಲೋನಿಯಲ್ಲಿರುವ ಜನಾರ್ದನ ರೆಡ್ಡಿಯವರ ಮನೆಗೆ ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಿಸಿಬಿ ಪೊಲೀಸ್‌ ಅಧಿ ಕಾರಿ ಮಂಜುನಾಥ್‌ ಚೌಧರಿ ನೇತೃತ್ವದ ತಂಡ 2 ವಾಹನಗಳಲ್ಲಿ ಆಗಮಿಸಿ ಇಡೀ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ.

ಶೌಚಾಲಯ, ನೀರಿನ ಟ್ಯಾಂಕ್‌ನಲ್ಲೂ ಶೋಧ: ಅಗತ್ಯ ದಾಖಲೆಗಳಿಗಾಗಿ ಬೆಳಗ್ಗೆಯಿಂದ ಮನೆಯ ಮೂಲೆ ಮೂಲೆಯನ್ನು ಶೋಧಿಸಿದ ಅಧಿಕಾರಿಗಳು ಸಂಜೆ ನಾಲ್ಕು ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಡೀಲ್‌ ಪ್ರಕರಣದಲ್ಲಿ ರೆಡ್ಡಿ ಪಡೆದಿದ್ದಾರೆ ಎನ್ನಲಾದ 57 ಕೆಜಿ ಚಿನ್ನದ ಗಟ್ಟಿಗಳು ಮನೆಯಲ್ಲಿ ಸಿಗಬಹುದೇನೋ ಎಂಬ ಅನುಮಾನದಿಂದ ಮನೆಯ ಪ್ರತಿ ಶೌಚಾಲಯ, ಗೋಡೆ ಅಲ್ಲದೆ ಮನೆ
ಮೇಲಿರುವ ನೀರಿನ ಟ್ಯಾಂಕ್‌ಗಳನ್ನೂ ಪರಿಶೀಲಿಸಿದ್ದಾರೆ. ಅಲ್ಲದೆ ಮನೆ ಒಳಗಡೆ ಅನುಮಾನಿತ
ಪ್ರದೇಶಗಳನ್ನೆಲ್ಲ ಶೊಧಿಸಿದ್ದಾರೆಂದು ತಿಳಿದು ಬಂದಿದೆ.

ಮೊಬೈಲ್‌ನಲ್ಲಿ ಫೋಟೋ ಕ್ಲಿಕ್‌: ಬೆಳಗ್ಗೆ ವಾಹನ ಗಳಲ್ಲಿ ಬಂದ ಅಧಿಕಾರಿಗಳ ತಂಡ ನೇರ ರೆಡ್ಡಿಯವರ ಮನೆ ಪ್ರವೇಶಿಸಿದೆ. ನಂತರ ಶೋಧ ಕಾರ್ಯ ಆರಂಭಿಸಿದ ಸಿಸಿಬಿ ಅಧಿಕಾರಿಗಳು ತಮ್ಮ ಮೊಬೈಲ್‌ ನಲ್ಲಿ ಮನೆಯ ಪ್ರಾಂಗಣ, ಹೊರಾಂಗಣ ಸೇರಿ ಎಲ್ಲ
ಕಡೆ ಫೋಟೋ ತೆಗೆದಿದ್ದಾರೆ. ಅಲ್ಲದೆ ಕೆಲವು ಪ್ರದೇಶದ ವಿಡಿಯೋ ರೆಕಾರ್ಡಿಂಗ್‌ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ರೆಡ್ಡಿಯವರ ಮನೆ ಕಂಡು ಬೆರಗಾಗಿರುವ ಅಧಿಕಾರಿಗಳು ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಶ್ರೀರಾಮುಲು ಭೇಟಿ: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವ ವಿಷಯ ತಿಳಿದು ರೆಡ್ಡಿ ಆಪ್ತ ಶಾಸಕ ಬಿ.ಶ್ರೀರಾಮುಲು ಬೆಳಗ್ಗೆ 8.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದರು. ಬಳಿಕ ರೆಡ್ಡಿಯವರ ಮಾವ ಪರಮೇಶ್ವರರೆಡ್ಡಿ, ಆಂಧ್ರದ ರಾಯದುರ್ಗ
ಮಾಜಿ ಶಾಸಕ ಕಾಪು ರಾಮಚಂದ್ರಾರೆಡ್ಡಿ ಆಗಮಿಸಿದರು. ಬಳಿಕ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಮನೆಗೆ ಬಂದರು. ತಕ್ಷಣ ಸಿಸಿಬಿ ಅಧಿಕಾರಿಗಳು, ನಗರದ ಕೌಲ್‌ಬಜಾರ್‌ ಪೊಲೀಸ್‌ ಠಾಣೆಯಿಂದ ಇಬ್ಬರು ಮಹಿಳಾ ಪೊಲೀಸರನ್ನು ಕರೆಸಿದರಾದರೂ, ಒಬ್ಬರನ್ನು ವಾಪಸ್‌ ಕಳುಹಿಸಿದರು.

ಈ ವೇಳೆ ರೆಡ್ಡಿ ಕುಟುಂಬದ ಎಲ್ಲ ಸದಸ್ಯರೂ ವಿಚಾರಣೆಗೆ ಸಹಕರಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲೇ ಊಟ ತಿಂಡಿ: ಬೆಳಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದ ಅಧಿಕಾರಿಗಳು ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನವನ್ನು ಹೊರಗಡೆಯಿಂದ ತರಿಸಿದ್ದು, ರೆಡ್ಡಿಯವರ ಮನೆಯಲ್ಲೇ ಊಟ ಮಾಡಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ಮನೆಯಿಂದ ಹೊರ ಬಂದ ಸಿಸಿಬಿ ಪೊಲೀಸ್‌ ಅಧಿಕಾರಿಗಳು ನೇರವಾಗಿ ಪಕ್ಕದಲ್ಲೇ ಇದ್ದ ಓಎಂಸಿ ಕಚೇರಿಗೆ ತೆರಳಿದರು. ಅವರೊಂದಿಗೆ ರೆಡ್ಡಿಯವರ ಮಾವ ಪರಮೇಶ್ವರ
ರೆಡ್ಡಿ ಅವರನ್ನೂ ಕರೆದೊಯ್ಯಲಾಯಿತೆಂದು ಹೇಳಲಾಗುತ್ತಿದೆ. ಓಬಳಾಪುರಂ ಮೈನಿಂಗ್‌ ಕಂಪನಿಗೆ ಈ ಕಚೇರಿ ಸೇರಿದ್ದು, ಕಡತಗಳ ಫೈಲ್‌ ಅನ್ನು ಹಿಡಿದುಕೊಂಡು ಕಚೇರಿಯೊಳಗೆ ಅ ಧಿಕಾರಿಗಳು ಪ್ರವೇಶಿಸಿದರು. ಓಎಂಸಿ ಕಚೇರಿಯಲ್ಲೂ ಅಗತ್ಯ
ದಾಖಲೆಗಳ ಹುಡುಕಾಟ ನಡೆಸಿದರೆಂದು ತಿಳಿದು ಬಂದಿದೆ. ಸಂಜೆ ವೇಳೆಗೆ ಅಧಿಕಾರಿಗಳು ಕಾರ್ಯಾಚರಣೆ ಮುಗಿಸಿದ್ದು, ಅಗತ್ಯ ದಾಖಲೆಗಳನ್ನೆಲ್ಲ ಪರಿಶೀಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳಿಗೆ ಏನಾದರೂ ದಾಖಲೆ ಅಥವಾ ವಸ್ತುಗಳು ಸಿಕ್ಕಿವೆಯೇ ಎಂಬುದು ತಿಳಿದುಬಂದಿಲ್ಲ. ಈ ಮಧ್ಯೆ ನಗರದ ಕೌಲ್‌ಬಜಾರ್‌ನಲ್ಲಿರುವ ರೆಡ್ಡಿ ಆಪ್ತ ಸಹಾಯಕ ಅಲಿಖಾನ್‌ ಮತ್ತು ಇನ್ನಾರೆಡ್ಡಿ
ಕಾಲೋನಿಯಲ್ಲಿನ ರೆಡ್ಡಿ ಮಾವ ಪರಮೇಶ್ವರ ರೆಡ್ಡಿಯವರ ಮನೆಯ ಮೇಲೂ ಸಿಸಿಬಿ ಪೊಲೀಸರು ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅತ್ತೆಯ ಆಕ್ರೋಶ 
ಸಿಸಿಬಿ ಅಧಿಕಾರಿಗಳ ತಂಡ ಜನಾರ್ದನರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಂತೆ, ಮನೆಯಲ್ಲೇ ಇದ್ದ ರೆಡ್ಡಿಯವರ ಅತ್ತೆ ನಾಗಲಕ್ಷ್ಮಮ್ಮ, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾವು ಶ್ರೀಮಂತರಾಗಿದ್ದೇ ತಪ್ಪಾ?
ಮಂತ್ರಿಯಾಗಿದ್ದೇ ತಪ್ಪಾ? ನಮ್ಮಂತಹವರು ಮಂತ್ರಿಯಾಗಬಾರದಾ'? ಎಂದು ಹರಿಹಾಯ್ದಿದ್ದಾರೆ. ಪದೇಪದೆ ಮನೆ ಮೇಲೆ ದಾಳಿ ನಡೆಸುತ್ತಿರುವ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರಲ್ಲದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ರಂಪಾಟ ನಡೆಸಿದ್ದಾರೆ. ಅಧಿಕಾರಿಗಳು
ಅವರನ್ನು ಸಮಾಧಾನ ಪಡಿಸಿ, ತಮ್ಮ ಕೆಲಸ ಮುಂದುವರಿಸಿದರು ಎನ್ನಲಾಗಿದೆ.

ಬೆಳಗ್ಗೆಯಿಂದ ರೆಡ್ಡಿಯವರ ಮನೆ, ಓಎಂಸಿ ಕಚೇರಿಯಲ್ಲಿ ಸಿಸಿಬಿ ಪೊಲೀಸರು ಪರಿಶೀಲಿಸಿ ವಿಚಾರಣೆ ಮಾಡಿದ್ದಾರೆ. ಸಿಸಿಬಿ ಪೊಲೀಸರು ಕರೆದಿದ್ದಕ್ಕೆ ನಾನು ಬಂದಿದ್ದೇನೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇವೆ. ಅವರಿಗೆ ಏನೂ ಸಿಕ್ಕಿಲ್ಲ. ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. 
● ಪರಮೇಶ್ವರರೆಡ್ಡಿ, ಜನಾರ್ದನ ರೆಡ್ಡಿ ಮಾವ

Trending videos

Back to Top