CONNECT WITH US  

ಸೋಮವಾರದಿಂದ ಶಿರಾಡಿಯಲ್ಲಿ ಎಲ್ಲಾ ವಾಹನ?

ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ನಲ್ಲಿ ಈ ಹಿಂದೆ ಭಾರೀ ವಾಹನಗಳು ಓಡಾಡುತ್ತಿದ್ದ ದೃಶ್ಯ. 

ಸಕಲೇಶಪುರ: ತಾಲೂಕಿನಲ್ಲಿ ಸೆಪ್ಟೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಬಂದ್‌ ಮಾಡಲಾಗಿದ್ದ ಶಿರಾಡಿಘಾಟಿ ರಸ್ತೆಯು ನ.12ರಿಂದ ಎಲ್ಲಾ  ತರಹದ ವಾಹನಗಳ ಸಂಚಾರಕ್ಕೆ ಮುಕ್ತವಾಗುವಸಾಧ್ಯತೆಯಿದೆ. ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣು ಹಾಗೂ ಹಾಳಾಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿ ಸೆ.5ರಿಂದ ಲಘುವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. 
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಆದರೆ, ಹಾಸನದ ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಹೊರಬೀಳಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಏಕಮುಖ ಸಂಚಾರವಿದೆ. ಅಲ್ಲದೆ ದುರಸ್ತಿ ಕಾಮಗಾರಿಯೂ ನಡೆಯುತ್ತಿದೆ. ದೀಪಾವಳಿ ಸಂದರ್ಭದಲ್ಲಿ ವಾಹನಗಳ ಸಂಚಾರ ಅಧಿಕವಿದೆ. ಆದರೆ, ಸದ್ಯ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ನ.12ರಿಂದ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಹೇಳಿದ್ದಾರೆ. 

ಹಾಸನ ಡೀಸಿ ಅನುಮತಿ ಬೇಕು: ಶಿರಾಡಿ ಘಾಟ್‌ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯಾವುದೇ ಅಧಿಕೃತ ಆದೇಶ ನೀಡಿಲ್ಲ. ಇದೇ ವೇಳೆ ಹಾಸನ ಜಿಲ್ಲಾಡಳಿತ ಹಾಸನಾಂಬ ಉತ್ಸವದಲ್ಲಿ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಹೆದ್ದಾರಿ ಪ್ರಾಧಿಕಾರ ಸೇರಿ ಉನ್ನತ ಅಧಿಕಾರಿಗಳ ಸಭೆ ನಡೆಸಿಲ್ಲ. ಶನಿವಾರ ಸಭೆ ಸೇರುವ ಸಾಧ್ಯತೆಯಿದ್ದು, ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರ ಶಿರಾಡಿ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ
ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

Trending videos

Back to Top