CONNECT WITH US  

ರಿಯಲ್‌ ಎಸ್ಟೇಟ್‌ ಉದ್ಯಮಿ ಸೆರೆ

ಸಿಸಿಬಿ ದಾಳಿ: 500 ಕೋಟಿ ಮೌಲ್ಯದ ದಾಖಲೆ ವಶ

ಸಾಂದರ್ಭಿಕ ಚಿತ್ರ.

ಬೆಂಗಳೂರು: ಅಮಾಯಕ ಸಾರ್ವಜನಿಕರ ಜಮೀನುಗಳನ್ನು ಕಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು
ಮಾರಾಟ ಮಾಡುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಿರ್ಲೆ ವರದರಾಜು ಮನೆ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಬಂಧಿಸಿದ್ದಾರೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಸಿಬಿ ತಂಡ ದಾಳಿ ನಡೆಸಿ ಮಧ್ಯಾಹ್ನ 4 ಗಂಟೆವರೆಗೆ ದಾಖಲೆಗಳ ಪರಿಶೀಲನೆ ನಡಸಿದೆ. ಈ ವೇಳೆ ಒಂದು ಮರ್ಸಿಡೀಸ್‌ ಬೆಂಜ್‌ ಕಾರು, ಒಂದು ಇನೋವಾ ಕಾರು, ಒಂದು ಸ್ಕೋಡಾ ಕಾರು ಹಾಗೂ ಮನೆಯ ಬೀರುವಿನಲ್ಲಿದ್ದ 500 ಕೋಟಿ ರೂ.ಗೂ ಅಧಿಕ ಮೌಲ್ಯದ ಸಾವಿರಾರು ಪುಟಗಳ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನ ಜಪ್ತಿ ಮಾಡಲಾಗಿದೆ. ಮಿರ್ಲೆ ನಾಗರಾಜ್‌,ರೌಡಿಶೀಟರ್‌ಗಳಾದ ರಾಮ ಮತ್ತು ಲಕ್ಷ್ಮಣ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಎಂದು ಕೇಂದ್ರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್‌.ನಗರದ ಮಿರ್ಲೆ ವರದರಾಜು ಹಲವು ವರ್ಷಗಳಿಂದ ಕೆಂಗೇರಿ ಉಪನಗರದಲ್ಲಿ ವಾಸವಾಗಿದ್ದಾನೆ. ಬೆಲ್ಲದ ವ್ಯಾಪಾರಿಯಾಗಿರುವ ಈತ ಶ್ರೀರಂಗಪಟ್ಟಣದಲ್ಲಿ ಆಲೆ ಮನೆ ನೆಡಸುತ್ತಿದ್ದ. ಕಳೆದ 20 ವರ್ಷಗಳಿಂದ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿರುವ ಈತ, ಅನ್ನಪೂರ್ಣೇಶ್ವರಿನಗರ, ಚಂದ್ರಲೇಔಟ್‌, ಜ್ಞಾನಭಾರತಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಮಾಯಕ ಸಾರ್ವಜನಿಕರಿಗೆ ವಂಚಿಸಿ, ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ. ನಿವೇಶನದ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೂ, ತಾನೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀವು ಹೊಂದಿರುವ ನಿವೇಶನ ಅಕ್ರಮವಾಗಿದ್ದು, ದಾಖಲೆಗಳು ಸರಿಯಿಲ್ಲ ಎಂದು ಹೆದರಿಸುತ್ತಿದ್ದ. ಬಳಿಕ ಇದರ ವಿರುದಟಛಿ ದೂರು ಕೊಡದಿರಲು ಇಂತಿಷ್ಟು ಹಣ ನೀಡಬೇಕು ಎಂದು ಬೇಡಿಕೆ ಇಡುತ್ತಿದ್ದ. ಒಂದು ವೇಳೆ ಹಣ ನೀಡದಿದ್ದರೆ, ಅಮಾಯಕರಿಗೆ ಬೆದರಿಸಿ ತನ್ನ ಸಹಚರರ ಜತೆ ಸೇರಿಕೊಂಡು ಕಿರುಕುಳ ನೀಡುತ್ತಿದ್ದ ಎಂದು ಅಲೋಕ್‌ ಕುಮಾರ್‌ ಹೇಳಿದರು.

ಇದೇ ವೇಳೆ ಈತನ ಸಹಚರರಾದ ಡಿಪೋ ನಾಗರಾಜ್‌ ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ದೀಪಕ್‌ ಮತ್ತು ರೌಡಿಶೀಟರ್‌ ಲಕ್ಷ್ಮಣಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಲೋಕ್‌ ಕುಮಾರ್‌ ಹೇಳಿದರು.

Trending videos

Back to Top