ಮಂಗನ ಕಾಯಿಲೆ; ಮತ್ತೆ ನಾಲ್ವರು ಅಸ್ವಸ್ಥ
Team Udayavani, Jan 5, 2019, 12:55 AM IST
ಸಾಗರ: ತಾಲೂಕಿನ ಭಾರಂಗಿ ಹೋಬಳಿಯ ಅರಳಗೋಡು ಭಾಗದಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಮತ್ತೆ ನಾಲ್ವರು ಆಸ್ಪತ್ರೆಗೆ ಸೇರಿದ್ದಾರೆ.
ಅರಳಗೋಡು ಗ್ರಾಪಂ ವ್ಯಾಪ್ತಿಯ ನಂದೋಡಿಯ ನಾಲ್ವರನ್ನು ಗುರುವಾರ ಸಂಜೆ ನಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ನಡುವೆ ತಾಲೂಕಿನ ಅರಳಗೋಡು ಅಲ್ಲದೆ ಬೇರೆ ಬೇರೆ ಭಾಗಗಳಲ್ಲೂ ಸಹ ಮಂಗಗಳು ಸಾಯುತ್ತಿದ್ದು, ಜನರ ಆತಂಕ ಹೆಚ್ಚುತ್ತಿದೆ. ಪಶು ಸಂಗೋಪನಾ ಇಲಾಖೆ ಮೂಲಗಳ ಪ್ರಕಾರ ಶರಾವತಿ ಹಿನ್ನೀರಿನ ಪ್ರದೇಶದ ಎಸ್.ಎಸ್. ಭೋಗ್ ಗ್ರಾಪಂ ವ್ಯಾಪ್ತಿಯ ಬ್ಯಾಡಗೋಡು ಗ್ರಾಮದಲ್ಲಿ ಮೃತ ಮಂಗವೊಂದು ಶುಕ್ರವಾರ ಪತ್ತೆಯಾಗಿದೆ.
ಮಂಗ ಗುರುವಾರ ರಾತ್ರಿ ಮೃತಪಟ್ಟಿರುವ ಸಾಧ್ಯತೆಯಿದ್ದು ಆರೋಗ್ಯ ಇಲಾಖೆ ಹಾಗೂ ಪಶು ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹೆಗ್ಗೊàಡು ಭಾಗದಲ್ಲಿಯೂ ಒಂದು ಮಂಗ ಶುಕ್ರವಾರ ಸತ್ತ ಘಟನೆ ನಡೆದಿದೆ. ಪಶು ಇಲಾಖೆಯ ಡಾ. ಚಂದ್ರಶೇಖರ್ ನಾಯಕ್ ನೇತೃತ್ವದಲ್ಲಿ ಅದನ್ನು ಸುಡಲಾಗಿದೆ.