CONNECT WITH US  

ಸಂಕ್ರಾಂತಿಗೆ ಸರ್ಕಾರ ಪತನ ಎಂಬುದು ಭ್ರಮೆ​​​​​​​

ಲೋಕಸಭಾ ಚುನಾವಣೆಗೆ ಜೆಡಿಎಸ್‌ ಜತೆಗಿನ ಸ್ಥಾನ ಹೊಂದಾಣಿಕೆಯಲ್ಲಿ ಗೊಂದಲವಿಲ್ಲ: ಎಚ್‌.ಕೆ.ಪಾಟೀಲ್‌

ಬೆಂಗಳೂರು: ಸಂಕ್ರಾಂತಿಗೆ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂಬುದು ಭ್ರಮೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಂಕ್ರಾಂತಿ ನಂತರ ರಾಜ್ಯದಲ್ಲಿ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ. ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜೊತೆಗೆ ಸ್ಥಾನ ಹೊಂದಾಣಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಮಾತುಕತೆ ಸಂದರ್ಭದಲ್ಲಿ ಯಾರಿಗೂ ಬೇಸರವಾಗದಂತೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದರು.

ಸಚಿವ ಸ್ಥಾನ ನೀಡಿಲ್ಲ ಎಂಬ ಬೇಸರ ನನಗಿಲ್ಲ. ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಸಚಿವ ಸ್ಥಾನಕ್ಕಿಂತಲೂ ದೊಡ್ಡದು. ರಾಜ್ಯದಲ್ಲಿ 33 ಜನ ಸಚಿವರಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರು ಒಬ್ಬರೇ ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫ‌ಲವಾಗಿದ್ದು, ತಾನು ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿಗೆ ತರಲಾಗದೇ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಯೋಜನೆಗಳ ಹೆಸರು ಬದಲಾಯಿಸಿ ತನ್ನದೆಂದು ಹೇಳಿಕೊಂಡಿತು. ಅಲ್ಲದೇ ರಫೆಲ್‌ ಯುದ್ಧ ವಿಮಾನ ಖರೀದಿ ಹಗರಣದ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ಎಷ್ಟೇ ಗಂಭೀರ ಪ್ರಶ್ನೆ ಕೇಳಿದರೂ, ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಆಗಮಿಸದೇ ತಪ್ಪಿಸಿಕೊಂಡು ಹೋದರು. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಾಕಷ್ಟು ಅಸ್ತ್ರಗಳಿವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸಿಬಿಐ ನಿರ್ದೇಶಕರ ನೇಮಕ ವಿಚಾರದಲ್ಲಿ ನಡೆದುಕೊಂಡ ರೀತಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳೇ ಸರ್ಕಾರಕ್ಕೆ ನಿರ್ದೇಶನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕೇಂದ್ರದ ಲೋಪಗಳ ವಿರುದ್ಧ ಕಾಂಗ್ರೆಸ್‌ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ ಎಂದು ಹೇಳಿದರು.

ಚುನಾವಣೆಗಳಲ್ಲಿ ಸಾರ್ವಜನಿಕರನ್ನು ಹೆಚ್ಚು ಹೆಚ್ಚು ತಲುಪಲು ಸಾಮಾಜಿಕ ಜಾಲ ತಾಣ ಹೆಚ್ಚು ಪ್ರಭಾವಶಾಲಿಯಾಗಿದ್ದು, ಕೆಪಿಸಿಸಿ ಪ್ರಚಾರ ಸಮಿತಿ ಕೂಡ ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಹೆಚ್ಚಿನ ಮತದಾರರನ್ನು ತಲುಪುವ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ಸಿಎಂಗೆ ತೊಂದರೆ ಕೊಡುತ್ತಿಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನವರ ಒತ್ತಡದಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಳಿ ಹೇಳಿಕೊಳ್ಳುತ್ತಾರೆ. ಮುಖ್ಯಮಂತ್ರಿ ಅದನ್ನು ಒತ್ತಡ ಎಂದುಕೊಳ್ಳಬಾರದು. ಸರ್ಕಾರ ನಡೆಸುವಾಗ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬೇಡಿಕೆ ಇಡುವುದು ಸಾಮಾನ್ಯ . ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಯಾವುದೇ ರೀತಿಯ ತೊಂದರೆ ಕೊಡುತ್ತಿಲ್ಲ.
- ಎಚ್‌.ಕೆ.ಪಾಟೀಲ್‌

Trending videos

Back to Top